ರವಿವಾರದ ವಿಶೇಷ ತರಗತಿ ವೇಳೆ ಹಿಜಾಬ್ ವಿಚಾರಕ್ಕೆ ಸಂಘಪರಿವಾರ ಕಾರ್ಯಕರ್ತರಿಂದ ಗೊಂದಲ ಸೃಷ್ಟಿಗೆ ಯತ್ನ
ಚಿಕ್ಕಮಗಳೂರು, ಫೆ.22: ಕಾಲೇಜು ಪ್ರಾಂಶುಪಾಲರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡಿದ್ದಾರೆಂದು ಆರೋಪಿಸಿ ಸಂಘಪರಿವಾರದ ಯುವಕರು ಮೂಡಿಗೆರೆ ಪಟ್ಟಣ ಸಮೀಪದಲ್ಲಿರುವ ಕಾಲೇಜೊಂದರ ಮುಂದೆ ಧರಣಿ ನಡೆಸಲು ಮುಂದಾದ ವೇಳೆ ಕಾಲೇಜು ಪ್ರಾಂಶುಪಾಲರು ಯುವಕರಿಗೆ ಬುದ್ಧಿವಾದ ಹೇಳಿ ಕಳುಹಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಾಂಶುಪಾಲರ ಮಾತಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೂಡಿಗೆರೆ ಪಟ್ಟಣ ಸಮೀಪದಲ್ಲಿರುವ ಹರೀಶ್ ಪಿಯು ಕಾಲೇಜು ಪ್ರಾಂಶುಪಾಲ ಹರೀಶ್ ಅವರು ಕಳೆದ ರವಿವಾರ ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯನ್ನು ಆಯೋಜಿಸಿದ್ದು, ಈ ವೇಳೆ ಕೆಲ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿಲು ಅವಕಾಶ ನೀಡಲಾಗಿದೆ, ನ್ಯಾಯಾಲಯದ ಆದೇಶ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕಾಲೇಜಿನ ಗೇಟ್ ಎದುರು ಸಂಘಪರಿವಾರದ ಕೆಲ ಯುವಕರು ಕೇಸರಿ ಶಾಲಿನೊಂದಿಗೆ ಆಗಮಿಸಿ ಧರಣಿ ನಡೆಸಲು ಮುಂದಾಗಿದ್ದಾರೆ.
ಈ ವೇಳೆ ಪ್ರಾಂಶುಪಾಲ ಹರೀಶ್ ಗೇಟ್ ಬಳಿ ಆಗಮಿಸಿದಾಗ ಸಂಘಪರಿವಾರದ ಯುವಕರು ಮಾತಿನಚಕಮಕಿ ನಡೆಸಿದ್ದಾರೆ. ಈ ವೇಳೆ ಪ್ರಾಂಶುಪಾಲ ಹರೀಶ್, ಕಾಲೇಜಿನಲ್ಲಿ ಹಿಜಾಬ್‍ಗೆ ಅವಕಾಶ ನೀಡಿಲ್ಲ. ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಿನಿಂದಲೇ ಪಾಲಿಸಲಾಗುತ್ತಿದೆ. ಲಾಕ್‍ಡೌನ್, ಸ್ಕಾರ್ಫ್ ಗೊಂದಲದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡಲು ಸಾಧ್ಯವಾಗಿಲ್ಲ. ಪಾಠವನ್ನು ಸರಿದೂಗಿಸುವ ಸಲುವಾಗಿ ರವಿವಾರ ವಿಶೇಷ ತರಗತಿ ಆಯೋಜಿಸಿದ್ದೇವೆ. ರವಿವಾರ ಕಾಲೇಜಿಗೆ ರಜೆ ಇದ್ದು, ವಿಶೇಷ ತರಗತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮಗೆ ಇಷ್ಟ ಬಂದ ಬಟ್ಟೆ ಹಾಕಿಕೊಂಡು ಬಂದಿದ್ದಾರೆ. ಕೆಲ ವಿದ್ಯಾರ್ಥಿನಿಯರು ಯೂನಿಫಾರ್ಮ್‍ನ ವೇಲನ್ನೇ ತಲೆಗೆ ಹಾಕಿಕೊಂಡು ಬಂದಿದ್ದಾರೆ. ಅದು ಹಿಜಾಬ್ ಅಲ್ಲ, ಹಿಜಾಬ್ ಧರಿಸುವ ವಿಧಾನವೇ ಬೇರೆ. ನಿಮಗೆ ಶಂಕೆ ಇದ್ದಲ್ಲಿ ಸೋಮವಾರ ಕಾಲೇಜಿಗೆ ಬಂದು ನೋಡಬಹುದು. ಯೂನಿಫಾರ್ಮ್‍ನ ವೇಲನ್ನು ತಲೆ ಮೇಲೆ ಹಾಕಿಕೊಂಡು ಬರಲು ಯಾವುದೇ ನಿರ್ಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳು ಪ್ರಾಂಶುಪಾಲ ಹರೀಶ್‍ರೊಂದಿಗೆ ವಾಗ್ವಾದ ನಡೆಸಿ, ನಮ್ಮ ಧರ್ಮ ರಕ್ಷಣೆ, ಲವ್ ಜಿಹಾದ್ ವಿಚಾರ ತೆಗೆದಿದ್ದಾರೆ. ಇದಕ್ಕೆ ಸೊಪ್ಪು ಹಾಕದ ಪ್ರಾಂಶುಪಾಲ ಹರೀಶ್, ನಾನು 80ರ ದಶಕದಲ್ಲೇ ಆರೆಸೆಸ್‍ನಲ್ಲಿದ್ದೆ, ಮೂಡಿಗೆರೆಯಲ್ಲೇ ಹತ್ತಾರು ಮೆರವಣಿಗೆ ನಡೆಸಿದ್ದು, ಆರೆಸೆಸ್‍ನ ಎಲ್ಲ ಗುಟ್ಟುಗಳ ಬಗ್ಗೆಯೂ ಅರಿವಿದೆ. ಯಾರೋ ಹೇಳಿದ ಮಾತಿಗೆ ತಲೆ ಕೆಡಸಿಕೊಂಡು ಶಾಲಾ ಕಾಲೇಜು ಮಕ್ಕಳ ಭವಿಷ್ಯ ಹಾಳು ಮಾಡಬಾರದು. ಶಾಲಾ ಕಾಲೇಜುಗಳಲ್ಲಿ ಧರ್ಮ, ಬಟ್ಟೆ ಮುಖ್ಯ ವಿಚಾರ ಆಗಬಾರದು. ಶಿಕ್ಷಣವೇ ಮುಖ್ಯ ಆಗಬೇಕು ಎಂದೆಲ್ಲಾ ಬೋಧನೆ ಮಾಡಿದ್ದಲ್ಲದೇ, ನ್ಯಾಯಾಲಯದ ಆದೇಶದಂತೆ ಕಾಲೇಜಿನಲ್ಲಿ ಹಿಜಾಬ್‍ಗೆ ಅವಕಾಶ ನೀಡಿಲ್ಲ. ಸಮವಸ್ತ್ರದ ವೇಲ್ ಅನ್ನು ತಲೆ ಮೇಲೆ ಹಾಕಿಕೊಂಡಿರಲು ನಿರ್ಬಂಧವಿಲ್ಲ. ವೇಲ್ ಅನ್ನು ಹಿಜಾಬ್ ಮಾದರಿಯಲ್ಲಿ ಧರಿಸುವಂತಿಲ್ಲ. ಇದನ್ನು ಶಾಲಾ ಕಾಲೇಜು ಮಕ್ಕಳು ಪಾಲಿಸುತ್ತಿದ್ದಾರೆ. ಪ್ರತಿದಿನ ಪೊಲೀಸ್ ಸಿಬ್ಬಂದಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಎಂದು ತಿಳಿ ಹೇಳಿದ್ದಾರೆ.
ಹರೀಶ್ ಅವರ ಮಾತಿನ ಬಳಿಕ ಸಂಘಪರಿವಾರದ ಯುವಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಿರುಗಿದ್ದಾರೆ. ಕಳೆದ ರವಿವಾರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶೇಷ ತರಗತಿ ವೇಳೆ ಈ ಘಟನೆ ನಡೆದಿದ್ದು, ಘಟನೆಯನ್ನು ಸ್ಥಳದಲ್ಲಿದ್ದವರು ಚಿತ್ರೀಕರಿಸಿದ್ದಾರೆ. ಸದ್ಯ ಹರೀಶ್ ಕಾಲೇಜಿನ ಈ ಘಟನೆಯ ವಿಡಿಯೋ ಸಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದ್ದು, ಪ್ರಾಂಶುಪಾಲರ ದಿಟ್ಟ ನಡೆ, ಸಂಘಪರಿವಾರದ ಯುವಕರಿ ತಿಳಿ ಹೇಳಿದ ಪರಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಘಟನೆ ಕಳೆದ ರವಿವಾರ ನಡೆದಿದೆ. ಯಾರು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೋ ಗೊತ್ತಿಲ್ಲ. ಪಾಠ ಸರಿದೂಗಿಸುವ ಉದ್ದೇಶದಿಂದ ರವಿವಾರ ವಿಶೇಷ ತರಗತಿ ಮಾಡಿದ್ದೇವೆ. ಈ ವೇಳೆ ಹಿಜಾಬ್ ಧರಿಸಲು ಅವಕಾಶ ನೀಡಿದ್ದೀರಿ ಎಂದು ಕೆಲ ಯುವಕರು ಕೇಸರಿ ಶಾಲಿನೊಂದಿಗೆ ಗಲಾಟೆ ಮಾಡಲು ಬಂದಿದ್ದರು. ಆದರೆ ಕಾಲೇಜಿನಲ್ಲಿ ಹಿಜಾಬ್‍ಗೆ ಅವಕಾಶವಿಲ್ಲ. ಕೆಲ ಮಕ್ಕಳು ಸಮವಸತ್ರದ ವೇಲನ್ನು ತಲೆ ಮೇಲೆ ಹಾಕಿಕೊಂಡು ಬಂದಿದ್ದಾರೆ. ಅದಕ್ಕೆ ನಮ್ಮಲ್ಲಿ ನಿರ್ಬಂಧವಿಲ್ಲ. ಆದರೆ ವೇಲನ್ನು ಹಿಜಾಬ್ ಮಾದರಿಯಲ್ಲೇ ಹಾಕಿಕೊಂಡಿರಲು ಅವಕಾಶವಿಲ್ಲ. ಈ ಬಗ್ಗೆ ಯುವಕರಿಗೆ ಸ್ಪಷ್ಟನೆ ನೀಡಿದ್ದೇನಷ್ಟೆ. ನನ್ನ ಮಾತಿನ ಬಳಿಕ ಯುವಕರು ಹಿಂದಿರುಗಿದ್ದಾರೆ.
- ಹರೀಶ್, ಮೂಡಿಗೆರೆ ಹರೀಶ್ ಪಿಯು ಕಾಲೇಜು ಪ್ರಾಂಶುಪಾಲ