ಹುಣಸೂರು: ಐದು ತಿಂಗಳ ಹಿಂದೆ ಮನೆ ತೊರೆದಿದ್ದ ಪ್ರೇಮಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
ಹುಣಸೂರು, ಫೆ.23: ಪ್ರೀತಿಗೆ ಮನೆಯವರ ವಿರೋಧವಿದ್ದ ಕಾರಣ ಸುಮಾರು ಐದು ತಿಂಗಳ ಹಿಂದೆ ಮನೆ ತೊರೆದಿದ್ದ ಯುವ ಪ್ರೇಮಿಗಳ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಾಲೂಕಿನ ಸಿಂಗರಮಾರನಹಳ್ಳಿ ಎಂಬಲ್ಲಿಂದ ವರದಿಯಾಗಿದೆ.
ತಾಲೂಕಿನ ಬಿಳಿಕೆರೆ ಹೋಬಳಿಯ ಸಿಂಗರಮಾರನಹಳ್ಳಿ ಗ್ರಾಮದ ಕುಮಾರ್ ಎಂಬವರ ಪುತ್ರಿ ಅರ್ಚನಾ(17) ಹಾಗೂ ಇದೇ ಗ್ರಾಮದ ವಿಜಯಕುಮಾರ್ ಎಂಬವರ ಪುತ್ರ ರಾಕೇಶ್(24) ಮೃತಪಟ್ಟ ಪ್ರೇಮಿಗಳಾಗಿದ್ದಾರೆ. ಇವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಅರ್ಚನಾ ನಾಪತ್ತೆಯಾಗಿರುವ ಬಗ್ಗೆ ಅವರ ತಂದೆ ಕುಮಾರ್ 2021ರ ಸೆಪ್ಟಂಬರ್ 23ರಂದು ಬಿಳಿಕೆರೆ ಠಾಣೆಗೆ ದೂರು ನೀಡಿದ್ದರು. ಅದೇರೀತಿ ತನ್ನ ಪುತ್ರ ರಾಕೇಶ್ ಕಾಣೆಯಾಗಿರುವ ಬಗ್ಗೆ ಅವರ ತಂದೆ ಸೆಪ್ಟಂಬರ್ 29ರಂದು ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಅವರಿಬ್ಬರೂ ಪತ್ತೆಯಾಗಿರಲಿಲ್ಲ.
ಕಳೆದ ರಾತ್ರಿ ಸ್ವಗ್ರಾಮಕ್ಕೆ ಆಗಮಿಸಿದ್ದ ಪ್ರೇಮಿಗಳು ಊರಿನ ಹೊರವಲಯದ ಜಮೀನಿನಲ್ಲಿರುವ ಹಲಸಿನಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆನ್ನಲಾಗಿದೆ. ಮೃತದೇಹವನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಬಿಳಿಕೆರೆ ಪೊಲೀಸರು ಪರಿಶೀಲಿಸಿದ್ದಾರೆ.