ಶಿವಮೊಗ್ಗದಲ್ಲಿ ಫೆ.26ರವರೆಗೆ ಕರ್ಪ್ಯೂ ವಿಸ್ತರಣೆ, ನಗರದಲ್ಲಿ ಎಎನ್ಎಫ್ ನಿಂದ ಡ್ರೋನ್ ಕಣ್ಗಾವಲು
ಶಿವಮೊಗ್ಗ, ಫೆ.23: ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಾದ್ಯಂತ ವಿಧಿಸಿರುವ ಕರ್ಫ್ಯೂವನ್ನು ಫೆ.26ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ಕೆ. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಶುಕ್ರವಾರದವರೆಗೆ ಕರ್ಫ್ಯೂ ವಿಸ್ತರಣೆ ಮಾಡಲಾಗಿತ್ತು. ಆದರೆ ಅದನ್ನು ಶನಿವಾರ ಬೆಳಗ್ಗೆ 9 ಗಂಟೆಯವರೆಗೆ ವಿಸ್ತರಣೆ ಮಾಡಿದ್ದಾರೆ.
ಕರ್ಫ್ಯೂ ಜಾರಿಯಲ್ಲಿರುವ ಅವಧಿಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.ಇನ್ನೂ, ನಗರ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 9 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಬಿಗಿ ಭದ್ರತೆ, ಡ್ರೋನ್ ಕಣ್ಗಾವಲು
ನಗರಾದ್ಯಂತ ಮುಂಜಾಗೃತ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ನಗರದ ಪ್ರಮುಖ ಸ್ಥಳಗಳಲ್ಲಿ ಡ್ರೋನ್ ಕ್ಯಾಮೆರಾಗಳ ಮೂಲಕ ಹದ್ದಿನ ಕಣ್ಣಿಡಲಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳದಿಂದ ನಕ್ಸಲ್ ನಿಗ್ರಹ ದಳ(ಎಎನ್ಎಫ್)ದ ಐವರ ತಂಡ ಡ್ರೋನ್ ಕ್ಯಾಮೆರಾ ನಿರ್ವಹಣೆಗೆ ಆಗಮಿಸಿದ್ದಾರೆ. ಡ್ರೋನ್ ಕ್ಯಾಮೆರಾಗಳು ಐನೂರು ಮೀಟರ್ ಎತ್ತರದಲ್ಲಿ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸತತವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಮೊದಲ ಬಾರಿ ಡ್ರೋನ್ ಕ್ಯಾಮೆರಾವನ್ನು ಶಿವಮೊಗ್ಗ ಬಸ್ ನಿಲ್ದಾಣದ ಅಶೋಕ ವೃತ್ತದಲ್ಲಿ ಬಳಕೆ ಮಾಡಲಾಗಿದೆ.
ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆಯ ಕೋರಿಕೆಯ ಮೇರೆಗೆ ಎಎನ್ಎಫ್ನ ಡ್ರೋನ್ ಕ್ಯಾಮೆರಾ ನಿರ್ವಹಣಾ ತಂಡ ಆಗಮಿಸಿದೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ಡ್ರೋನ್ ನಿರ್ವಹಣಾ ತಂಡ ಕಾರ್ಯನಿರ್ವಹಿಸುತ್ತಿದೆ. ಡ್ರೋನ್ ಕ್ಯಾಮರಾದ ಪರೀಕ್ಷಾರ್ಥ ಹಾರಾಟ ಹಾಗೂ ಬಳಕೆಯ ವಿಧಾನವನ್ನು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಪರಿಶೀಲಿಸಿದರು.