ಶ್ರೀನಗರದಲ್ಲಿ ಹಿಮಪಾತಕ್ಕೆ ಸಿಲುಕಿ ಕೊಡಗು ಮೂಲದ ಯೋಧ ಅಲ್ತಾಫ್ ಅಹ್ಮದ್ ಹುತಾತ್ಮ
ಶ್ರೀನಗರ: ಹಿಮಪಾತ ದಲ್ಲಿ ಸಿಲುಕಿ ಕೊಡಗು ಮೂಲದ ಯೋಧ ಹುತಾತ್ಮರಾಗಿರುವ ಘಟನೆ ವರದಿಯಾಗಿದೆ. ಅವರು ಹಿಮಪಾತದಲ್ಲಿ ಸಿಲುಕಿ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಹವಾಲ್ದಾರ್ ಅಲ್ತಾಫ್ ಅಹ್ಮದ್ (37) ಹುತಾತ್ಮ ಯೋಧ ಎಂದು ಗುರುತಿಸಲಾಗಿದೆ.
ಎಒಸಿ ರೆಜಿಮೆಂಟ್ ನಲ್ಲಿ ಕರ್ತವ್ಯ ದಲ್ಲಿದ್ದ ಯೋಧ ಅಲ್ತಾಫ್ ಕುಟುಂಬ ಸದ್ಯ ಕೇರಳದ ಮಟ್ಟನೂರು ಜಿಲ್ಲೆಯಲ್ಲಿ ನೆಲೆಸಿದೆ ಎಂದು ತಿಳಿದು ಬಂದಿದೆ.
ವಿರಾಜಪೇಟೆ ನಿವಾಸಿ ಹುಲ್ಲು ವ್ಯಾಪಾರಿಯಾಗಿದ್ದ ಉಮ್ಮರ್(ದಿ)-ಆಸಿಯಾ ದಂಪತಿ ಪುತ್ರ ಅಲ್ತಾಫ್ ಅಹಮದ್ ಇಲ್ಲಿನ ಮೀನುಪೇಟೆಯಲ್ಲಿ ಹುಟ್ಟಿ ಬೆಳೆದಿದ್ದು, ಬಾಲ್ಯದಿಂದಲೇ ದೇಶ ಭಕ್ತಿಯನ್ನು ಮೈಗೂಡಿಸಿಕೊಂಡಿದ್ದರು. ವಿರಾಜಪೇಟೆಯ ಸೈಂಟ್ ಆ್ಯನ್ಸ್ ಶಾಲೆಯಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದ ಅಲ್ತಾಫ್ ಅಹಮದ್, ಅಲ್ಲಿನ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಶಿಕ್ಷಣ ಪೂರೈಸಿದ್ದರು. ಬಳಿಕ ದೇಶ ಸೇವೆ ಮಾಡುವ ಉದ್ದೇಶದಿಂದ ಭಾರತೀಯ ಭೂ ಸೇನೆಯ ಆರ್ಮಿ ಆರ್ಡ್‍ನಾನ್ಸ್ ಕಾಪ್ರ್ಸ್(ಎಓಸಿ) ರೆಜಿಮೆಂಟ್‍ಗೆ ಸೇರ್ಪಡೆಯಾಗಿದ್ದರು.
ಕಳೆದ 19 ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದ ಹವಾಲ್ದಾರ್ ಅಲ್ತಾಫ್ ಅಹಮದ್, ಶ್ರೀನಗರದಲ್ಲಿ ಕರ್ತವ್ಯಕ್ಕಾಗಿ ನಿಯೋಜಿಸಲ್ಪಟ್ಟಿದ್ದರು. ಬುಧವಾರ ಮುಂಜಾನೆ ಎಂದಿನಂತೆ ಗಡಿ ರಕ್ಷಣಾ ಕರ್ತವ್ಯದಲ್ಲಿದ್ದ ಸಂದರ್ಭ ಹಿಮಪಾತಕ್ಕೆ ಸಿಲುಕಿ ಹವಾಲ್ದಾರ್ ಅಲ್ತಾಫ್ ಅಹಮದ್ ಹುತಾತ್ಮರಾಗಿದ್ದಾರೆ.
ಮೃತ ಹವಾಲ್ದಾರ್ ಅಲ್ತಾಫ್ ಅವರ ಪತ್ನಿ ಝುಬೇರಿ ವಿರಾಜಪೇಟೆಯ ಎಡಪಾಲ ನಿವಾಸಿಯಾಗಿದ್ದು, ಇವರ ಕುಟುಂಬ ಕಳೆದ 10 ವರ್ಷಗಳಿಂದ ಕೇರಳದ ಮಟ್ಟನೂರು ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಅಲ್ತಾಫ್ ಅಹಮದ್ ಅವರು ತಾಯಿ, ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಈ ದುರ್ಘಟನೆಯ ಕುರಿತು ಭೂ ಸೇನೆಯ ಉನ್ನತಾಧಿಕಾರಿಗಳು ಅಲ್ತಾಫ್ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.