ಕಾರಾಗೃಹಗಳಲ್ಲಿ ಮಾದಕವಸ್ತುಗಳ ಬಳಕೆ ಆರೋಪ: ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಫೆ.23: ರಾಜ್ಯದ ಕಾರಾಗೃಹಗಳಿಗೆ ಧೂಮಪಾನ, ಗಾಂಜಾ ಇನ್ನಿತರೆ ಮಾದಕವಸ್ತುಗಳು ಸರಬರಾಜಾಗುತ್ತಿರುವ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತಂತೆ ನಗರದ ವಕೀಲ ಧರ್ಮಪಾಲ್ ಹಾಗೂ ಕೆ. ನಾರಾಯಣಶೆಟ್ಟಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ವಕೀಲ ಧರ್ಮಪಾಲ್ ವಾದ ಮಂಡಿಸಿ, ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಖುದ್ದು ಜೈಲು ಸಿಬ್ಬಂದಿಯೇ ಮಾದಕವಸ್ತು ಪೂರೈಕೆ ಮಾಡುತ್ತಿರುವ ಆರೋಪವಿದೆ. ಜೈಲುಗಳ ಒಳಗೆ ಸಿಸಿಟಿವಿ ಇಲ್ಲ. ಸೂಕ್ತ ಮೇಲ್ವಿಚಾರಣೆಯೂ ಇಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸರಕಾರದ ಪರ ವಕೀಲರು, ಮಾಧ್ಯಮ ವರದಿ ಆಧರಿಸಿ ಪಿಐಎಲ್ ಸಲ್ಲಿಸಲಾಗಿದೆ. ಜೈಲುಗಳ ಒಳಗೆ ಸಿಸಿಟಿವಿಗಳಿವೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜೈಲುಗಳ ಒಳಗಿನ ವಸ್ತು ಸ್ಥಿತಿ ಏನು, ಸಿಸಿಟಿವಿ ವ್ಯವಸ್ಥೆ ಹೇಗಿದೆ ಎಂಬುದು ನಮಗೂ ಗೊತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಬಳಿಕ, ಪ್ರತಿವಾದಿಗಳಾದ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ, ಗೃಹ ಸಚಿವರು, ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಬಂದೀಖಾನೆ ಡಿಜಿಪಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.
ಅರ್ಜಿಯಲ್ಲಿ ಏನಿದೆ: ರಾಜ್ಯದ ಬಂದೀಖಾನೆಗಳಲ್ಲಿ ಇರುವ ಪ್ರಭಾವಿ ಕೈದಿಗಳಿಗೆ ಸಿಬ್ಬಂದಿಯೇ ಧೂಮಪಾನ, ಗಾಂಜಾ ಸೇರಿ ಇನ್ನಿತರೆ ಮಾದಕವಸ್ತು ಪೂರೈಸುತ್ತಿದ್ದಾರೆ. ಜೈಲಿನಲ್ಲಿ ಸೂಕ್ತ ಸಿಸಿಟಿವಿ ವ್ಯವಸ್ಥೆ ಇಲ್ಲ. ಮೇಲ್ವಿಚಾರಣಾ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಈ ಲೋಪಗಳನ್ನು ಬಳಸಿಕೊಂಡು ಕೆಲವು ಕೈದಿಗಳು ತಮಗೆ ಬೇಕಾದಂತೆ ರಾಜಾತಿಥ್ಯ ಪಡೆಯುತ್ತಿದ್ದಾರೆ. ಕೈದಿಯೊಬ್ಬ ತನ್ನ ಒಳಉಡುಪಿನಲ್ಲಿ ಮಾಕದವಸ್ತು ಇರಿಸಿಕೊಂಡಿದ್ದು ಪತ್ತೆಯಾಗಿದೆ. ಕೋರ್ಟ್ ಆದೇಶದ ಮೇರೆಗೆ ಬಿಡುಗಡೆಯಾದ ಕೈದಿಗಳನ್ನು ತ್ವರಿತವಾಗಿ ಬಿಡುಗಡೆ ಮಾಡಲು ಜೈಲು ಸಿಬ್ಬಂದಿ ಹಣ ಕೇಳುತ್ತಿರುವ ಆರೋಪವೂ ಇದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ, ಜೈಲುಗಳಲ್ಲಿನ ವ್ಯವಸ್ಥೆ ಸುಧಾರಣೆ ಮಾಡಲು ಸಿಸಿಟಿವಿ ಅಳವಡಿಸಬೇಕು. ಪೂರ್ಣಾವಧಿ ಮೇಲುಸ್ತುವಾರಿ ನಡೆಸಲು ಪ್ರತ್ಯೇಕ ವಿಚಕ್ಷಣಾ ದಳ ಸ್ಥಾಪಿಸಬೇಕು. ಮಾದಕವಸ್ತು ಪೂರೈಕೆ ಪ್ರಕರಣಗಳನ್ನು ನ್ಯಾಯಾಂಗ ತನಿಖೆ ನಡೆಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.