×
Ad

ಹಿಜಾಬ್ ಪ್ರಕರಣ: ಕ್ಯಾಂಪಸ್‌ ಫ್ರಂಟ್ ಪಾತ್ರದ ಕುರಿತು ರಾಜ್ಯ ಸರಕಾರದಿಂದ ಮಾಹಿತಿ ಕೇಳಿದ ಹೈಕೋರ್ಟ್

Update: 2022-02-23 20:40 IST

 ಬೆಂಗಳೂರು: ಕರ್ನಾಟಕದಲ್ಲಿ ಎದ್ದಿರುವ ಹಿಜಾಬ್ ವಿವಾದದ ಹಿಂದೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪಾತ್ರದ ಕುರಿತಂತೆ ಕರ್ನಾಟಕ ಹೈಕೋರ್ಟ್ ಬುಧವಾರ ರಾಜ್ಯ ಸರಕಾರದಿಂದ ಮಾಹಿತಿ ಕೇಳಿದೆ.

ಬುಧವಾರ ಕರ್ನಾಟಕ ಹೈಕೋರ್ಟ್‍ನ ಪೂರ್ಣಪೀಠದ ಮುಂದೆ ನಡೆದ ವಿಚಾರಣೆ ವೇಳೆ, ಹಿಜಾಬ್ ವಿವಾದ ಮೊದಲು ಹುಟ್ಟಿಕೊಂಡ ಉಡುಪಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಓರ್ವ ಶಿಕ್ಷಕರ ಪರ  ಹಾಜರಿದ್ದ ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ತಮ್ಮ ವಾದ ಮಂಡಿಸುತ್ತಾ, ಹಿಜಾಬ್ ವಿವಾದವನ್ನು ಸಿಎಫ್‍ಐ ಜತೆಗೆ ನಂಟು ಹೊಂದಿರುವ ಕೆಲ ವಿದ್ಯಾರ್ಥಿಗಳು ಆರಂಭಿಸಿದ್ದರು ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠದ ನೇತೃತ್ವ ವಹಿಸಿರುವ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ಸಿಎಫ್‍ಐ ಬಗ್ಗೆ ಹಾಗೂ ಅದರ ಪಾತ್ರದ ಬಗ್ಗೆ ಮಾಹಿತಿ ಕೋರಿದರು. "ಈ ಸಂಘಟನೆ ರಾಜ್ಯದಲ್ಲಿ ಪ್ರತಿಭಟನೆಗಳನ್ನು ಆಯೋಜಿಸುತ್ತಿದೆ. ತರಗತಿಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿರುವ ವಿದ್ಯಾರ್ಥಿನಿಯರ ಪರ ಅದು ವಹಿಸುತ್ತಿದೆ" ಎಂದು ನಾಗಾನಂದ್ ಹೇಳಿದರು.

ಸಿಎಫ್‍ಐ ಒಂದು ತೀವ್ರಗಾಮಿ ಸಂಘಟನೆ ಎಂದು ಇನ್ನೊಬ್ಬ ವಕೀಲರು ಹೇಳಿದಾಗ ಮುಖ್ಯ ನ್ಯಾಯಮೂರ್ತಿ ಪ್ರತಿಕ್ರಿಯಿಸಿ ಸರಕಾರಕ್ಕೆ ಈ ಬಗ್ಗೆ ತಿಳಿದಿದೆಯೇ ಎಂದು ಕೇಳಿದರು. ಉತ್ತರಿಸಿದ ವಕೀಲ ನಾಗಾನಂದ್, ಗುಪ್ತಚರ ಬ್ಯುರೋಗೆ ಮಾಹಿತಿಯಿದೆ ಎಂದರು.

ಆಗ ಮುಖ್ಯ ನ್ಯಾಯಮೂರ್ತಿ ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವಕೇಟ್ ಜನರಲ್ ಪ್ರಭುಲಿಂಗ್ ಕೆ ನಾವಡಗಿ ಅವರನ್ನುದ್ದೇಶಿಸಿ ಪ್ರಶ್ನಿಸಿದಾಗ, ಸಿಎಫ್‍ಐ ಕುರಿತು ಸ್ವಲ್ಪ ಮಾಹಿತಿಯಿದೆ ಎಂದರು. ಆಗ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ದಿಢೀರನೆ ಸಿಎಫ್‍ಐ ಹೆಸರು ಹೇಗೆ ಮೇಲೆ ಬಂತು ಎಂದಾಗ ನಾಗಾನಂದ್, "ಕೆಲ ಶಿಕ್ಷಕರಿಗೆ ಈ ಸಂಘಟನೆ ಬೆದರಿಸಿದೆ. ಶಿಕ್ಷಕರು ದೂರು ನೀಡಲು ಭಯಪಟ್ಟಿದ್ದರು ಆದರೆ ಈಗ ಪೊಲೀಸ್ ದೂರು ದಾಖಲಿಸಿದ್ದಾರೆ" ಎಂದರು.

ಶಿಕ್ಷಕರನ್ನು ಯಾವಾಗ ಬೆದರಿಸಲಾಯಿತು ಎಂದು ಜಸ್ಟಿಸ್ ದೀಕ್ಷಿತ್ ಕೇಳಿದಾಗ, ಒಂದೆರಡು ದಿನಗಳ ಹಿಂದೆ ಎಂಬ ಉತ್ತರ ವಕೀಲರಿಂದ ಬಂತು. ಆಗ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು,  ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕಿತ್ತು ಎಂದಾಗ, ಅಡ್ವಕೇಟ್ ಜನರಲ್ ಪ್ರತಿಕ್ರಿಯಿಸಿ ತಮಗೆ ಆ ಬಗ್ಗೆ ಮಾಹಿತಿಯಿರಲಿಲ್ಲ ಎಂದರು.

ಉಡುಪಿಯ ಬಾಲಕಿಯರ ಪಪೂ ಕಾಲೇಜಿನಲ್ಲಿ ಸಮವಸ್ತ್ರ ನೀತಿ 2004ರಿಂದ ಜಾರಿಯಲ್ಲಿತ್ತು, ಈಗಲೂ ಇದೆ ಎಂದು ನಾಗಾನಂದ್ ಹೇಳಿದರು.

"ಜನವರಿ 6ರಂದು ಉಡುಪಿಯ ಪಪೂ ಕಾಲೇಜಿನ ಆರು ವಿದ್ಯಾರ್ಥಿನಿಯರು ಸಿಎಫ್‍ಐ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಅವರು ಪ್ರಾಂಶುಪಾಲರಿಗೆ ಸಲ್ಲಿಸಿದ ಮನವಿ ತಿರಸ್ಕೃತಗೊಂಡ ನಾಲ್ಕು ದಿನಗಳ ನಂತರ ಈ ಪತ್ರಿಕಾಗೋಷ್ಠಿ ನಡೆಸಲಾಗಿತ್ತು. ಅಲ್ಲಿಯ ತನಕ ವಿದ್ಯಾರ್ಥಿನಿಯರು ಕ್ಯಾಂಪಸ್ಸಿನ ತನಕ ಹಿಜಾಬ್ ಧರಿಸುತ್ತಿದ್ದರು, ನಂತರ ತರಗತಿ ಪ್ರವೇಶಿಸುವಾಗ ಅದನ್ನು ತೆಗೆಯುತ್ತಿದ್ದರು, ಕಳೆದ 35 ವರ್ಷಗಳಲ್ಲಿ ತರಗತಿಗಳಲ್ಲಿ ಯಾರೂ ಹಿಜಾಬ್ ಧರಿಸುತ್ತಿರಲಿಲ್ಲ. ಹಿಜಾಬ್‍ಗೆ ಅನುಮತಿ ಕೋರಿದ ವಿದ್ಯಾರ್ಥಿಗಳಿಗೆ  ಬಾಹ್ಯ ಶಕ್ತಿಗಳ ಬೆಂಬಲವಿದೆ" ಎಂದು ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಈ ಹಿಂದೆ ಆರೋಪಿಸಿದ್ದರು.

"ನಾವು ಈ ಹಿಂದೆಯೂ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳ ಪರವಹಿಸಿ ಮಾತನಾಡುತ್ತಿದ್ದೆವು. ಅಂತೆಯೇ ಈ ವಿದ್ಯಾರ್ಥಿನಿಯರ ಪರವಾಗಿ ಮಾತನಾಡಿದ್ದೆವು. ಆದರೆ ಇದೀಗ ಸಂಘಟನೆಯ ಹೆಸರು ಕೆಡಿಸಲಾಗುತ್ತಿದೆ" ಎಂದು ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿಗಳು ಹೇಳಿಕೆ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News