ಹರ್ಷನೂ ನನ್ನ ಮಗ ಇದ್ದಂಗೆ, ಇಬ್ಬರಿಗೂ ನ್ಯಾಯ ಸಿಗಬೇಕು: ನರಗುಂದದಲ್ಲಿ ಕೊಲೆಯಾದ ಸಮೀರ್ ತಾಯಿಯ ಮನವಿ

Update: 2022-02-25 09:21 GMT

ನರಗುಂದ: 'ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹರ್ಷನೂ ನನ್ನ ಮಗ ಇದ್ದಂಗೆ, ನನ್ನ ಮಗ ಸಮೀರ್ ಹಾಗೂ ಹರ್ಷ ಇಬ್ಬರಿಗೂ ನ್ಯಾಯ ಸಿಗಬೇಕು' ಎಂದು ಗದಗ ಜಿಲ್ಲೆಯ ನರಗುಂದದಲ್ಲಿ ಕಳೆದ ತಿಂಗಳು ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಗೀಡಾದ ಸಮೀರ್ ಶಹಪುರ ಅವರ ತಾಯಿ ಫೈರೋಝ ಅವರು ಮನವಿ ಮಾಡಿಕೊಂಡಿದ್ದಾರೆ. 

''ನನ್ನ ಮಗ ತೀರ್ಕೊಂಡು 1ತಿಂಗಳು ಆಗಿದೆ. ಮೊನ್ನೆ ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಗಿದೆ. ಅದರ ವೀಡಿಯೊ ನೋಡಿ ಬಹಳ ದುಃಖ ಆಯಿತು. ಸಮೀರ್ ಹೋದಮೇಲೂ ಅಷ್ಟೇ ದುಃಖ ಆಗ್ತಿದೆ. ಹರ್ಷನೂ ನನ್ನ ಮಗ ಇದ್ದಂಗೆ ಅವರ ಕುಟುಂಬದ ದುಃಖ ನನಗೂ ಅರ್ಥ ಆಗ್ತಿದೆ'' ಎಂದರು.

'ಸಮೀರ್ ಹತ್ಯೆ ಆಗಿ 1ತಿಂಗಳು ಕಳೆದರೂ ನಮ್ ಮನೆಗೆ ಮುಖ್ಯಮಂತ್ರಿ, ಸಚಿವ, ಶಾಸಕರು ಯಾರೂ ಈವರೆಗೆ ಬರ್ಲಿಲ್ಲ. ಸರಕಾರದ ಪರವಾಗಿ ಯಾರೊಬ್ಬರೂ ಬಂದು ಯಾವುದೇ ಪರಿಹಾರ ನೀಡಿಲ್ಲ. ಹರ್ಷನಿಗೂ, ಸಮೀರ್ ಗೂ ನ್ಯಾಯ ಸಿಗಬೇಕು' ಎಂದು ಹೇಳುತ್ತಾ ಸಮೀರ್ ಶಹಪುರ ಅವರ ತಾಯಿ ಕಣ್ಣೀರು ಹಾಕಿದರು. 

'ಯಾರ್ಯಾರೋ ಭಾಷಣ ಮಾಡುವವರು ಮಾಡಿ ಹೋಗ್ತಾರೆ, ಮತ್ತು ಅವರು ಆರಾಮವಾಗಿ ಇರ್ತಾರೆ. ಆದರೆ ದುಡಿಯುವ ಮಕ್ಕಳನ್ನು ಕಳೆದುಕೊಂಡು ನಾವು ನೋವು ಅನುಭವಿಸಬೇಕಾಗುತ್ತದೆ. ನನ್ನ ಮಗ ಸಮೀರ್ ಅಮಾಯಕನಾಗಿದ್ದು, ನಮಗೆ ನ್ಯಾಯ ದೊರಕಿಸಿಕೊಡಬೇಕು' ಎಂದು ಆಗ್ರಹಿಸಿದ್ದಾರೆ. 

ಇದೇ ವೇಳೆ  ಮಾತನಾಡಿದ ಸಮೀರ್ ಸಹೋದರ, 'ಹರ್ಷನನ್ನು  ಮಸ್ಲಿಂ ಗೂಂಡಾಗಳು ಹತ್ಯೆ ನಡೆಸಿದ್ದು ಅಂತ ಈಶ್ವರಪ್ಪನವರು ಹೇಳಿದ್ದು ಟಿವಿಯಲ್ಲಿ ನೋಡಿದೆ. ಹಾಗಿದ್ದರೆ ನನ್ನ ತಮ್ಮನನ್ನು ಕೊಂದಿದ್ದು ಹಿಂದೂ ಗೂಂಡಾಗಳಾ ಅಥವಾ ಹಿಂದೂ ಜಿಹಾದಿಗಳಾ ? ಈ ವಿಚಾರದಲ್ಲಿ ರಾಜಕಾರಣಿಗಳು ಹಿಂದೂ- ಮುಸ್ಲಿಮ್ ವಿಚಾರ ಎಳೆದು ತರಬಾರದು. ಮೊನ್ನೆ ಸಮೀರ್ ಹತ್ಯೆ ಆಗಿದೆ ಇವತ್ತು ಹರ್ಷನ ಹತ್ಯೆ ಆಗಿದೆ. ಇದು ಇಲ್ಲಿಗೆ ಅಂತ್ಯ ಆಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು' ಎಂದು ಆಗ್ರಹಿಸಿದರು.  

ನರಗುಂದ ಪಟ್ಟಣದಲ್ಲಿ ಕಳೆದ ತಿಂಗಳು ಸಮೀರ್ ಆತನ ಗೆಳೆಯ ಶಂಶೀರ್‌ ಎಂಬವರ ಜೊತೆ ರಾತ್ರಿ ವೇಳೆ ಬೈಕ್‌ನಲ್ಲಿ ತನ್ನ ಮನೆಯತ್ತ ತೆರಳುತ್ತಿದ್ದ ವೇಳೆ ಸಂಘ ಪರಿವಾರದ ಕಾರ್ಯಕರ್ತರ ಗುಂಪು ಇವರ ಬೈಕನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ದಾಳಿ ನಡೆಸಿತ್ತು. ಬಳಿಕ ಗಂಭೀರ ಗಾಯಗೊಂಡಿದ್ದ ಸಮೀರ್ ಮತ್ತು ಶಂಶೀರ್ ರನ್ನು ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಮೀರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. 

ಇನ್ನು ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಜರಂಗ ದಳದ ಮುಖಂಡ ಸಹಿತ ನಾಲ್ವರು ಆರೋಪಿಗಳನ್ನು ಜ.19ರಂದು ನರಗುಂದ ಪೊಲೀಸರು ಬಂಧಿಸಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News