ಹರ್ಷನ ಕೊಲೆಗೆ ರಾಜ್ಯ ಸರ್ಕಾರವೇ ನೇರ ಹೊಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್
ಮೈಸೂರು,ಫೆ.23: ಶಿವಮೊಗ್ಗದಲ್ಲಿ ನಡೆದ ಹಿಂದೂಪರ ಸಂಘಟನೆ ಕಾರ್ಯಕರ್ತ ಹರ್ಷ ಕೊಲೆಗೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಆಗ್ರಹಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕದಿಂದ ವಿದ್ಯಾರ್ಥಿ ಏಕತಾ ಮನ್ವಂತರ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಜಿಲ್ಲೆಯವರೇ. ಗೃಹ ಸಚಿವರ ಜಿಲ್ಲೆಯಲ್ಲೇ ಈ ರೀತಿಆದರೆ ಉಳಿದ ಜಿಲ್ಲೆಗಳ ಪರಿಸ್ಥಿತಿ ಹೇಗಿರಬೇಕು ಎಂದು ಪ್ರಶ್ನಿಸಿದರು.
ಹರ್ಷ ಕೊಲೆ ಪ್ರಕರಣದ ಕುರಿತು ಸಮಗ್ರಹ ತಿನಿಖೆಯಾಗಬೇಕು, ಸತ್ಯಾಸತ್ಯತೆ ಕೂಡಲೇ ಹೊರಬರಬೇಕು ಎಂದು ಒತ್ತಾಯಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಷ್ಟ್ರ ಧ್ವಜದ ವಿಚಾರದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಎಲುಬಿಲ್ಲದ ನಾಲಿಗೆ ಅಂತಾ ಇಷ್ಟ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಆಚಾರವಿಲ್ಲದೆ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ ಎಂಬುದನ್ನು ಸಚಿವ ಈಶ್ವರಪ್ಪ ಅರ್ಥ ಮಾಡಿಕೊಳ್ಳಬೇಕು, ಜವಾಬ್ದಾರಯುತ ಸ್ಥಾನದಲ್ಲಿರುವ ಸಚಿವರು ನಾಲಿಗೆಯನ್ನು ಹರಿ ಬಿಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಫೆ.27 ರಿಂದ ಮೇಕೆದಾಟು ಪಾದಯಾತ್ರೆ:
ಇದೇ ತಿಂಗಳ ಫೆ.27 ರಿಂದ ಮೇಕೆದಾಟು ಪಾದಯಾತ್ರೆ ಪುನರ್ ಆರಂಭವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ತಿಳಿಸಿದರು.
ಈ ಬಾರಿಯ ಪಾದಯಾತ್ರೆ ಐದು ದಿಗಳಿಗೆ ಸೀಮಿತವಾಗಿರಲಿದೆ. ರಾಮನಗರದಲ್ಲಿ ಪ್ರಾರಂಭವಾಗುವ ಪಾದಯಾತ್ರೆ ಬೆಂಗಳೂರಿನಲ್ಲಿ ಅಂತ್ಯವಾಗಲಿದೆ. ಈ ಪಾದಯಾತ್ರೆಗೆ ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಾಗಿ ಭಾಗವಹಿಸಬೇಕು, ನಮ್ಮ ನೀರು ನಮ್ಮ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.