ಶಾಲೆಗಳಿಗೆ ಏಪ್ರಿಲ್ 10ರಿಂದ ಮೇ 15ರವರೆಗೆ ಬೇಸಿಗೆ ರಜೆ: ಸಾರ್ವಜನಿಕ ಶಿಕ್ಷಣ ಇಲಾಖೆ
Update: 2022-02-24 11:49 IST
ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಏಪ್ರಿಲ್ 10ರಿಂದ ಮೇ 15ರವರೆಗೆ ಬೇಸಿಗೆ ರಜೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಮೇ 29ರಿಂದ ಆರಂಭವಾಗಿ ಏಪ್ರಿಲ್ 10ಕ್ಕೆ ಮುಕ್ತಾಯವಾಗುತ್ತದೆ. ಆದರೆ ಈ ಬಾರಿ ಕೋವಿಡ್ ಕಾರಣ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಬೇಗವೇ ಶಾಲೆ ಆರಂಭಿಸಲು ಸರಕಾರ ನಿರ್ಧರಿಸಿದೆ.
ಹೀಗಾಗಿ ಏಪ್ರಿಲ್ 10ರಿಂದ ಮೇ 15ರವರೆಗೆ ಬೇಸಿಗೆ ರಜೆ ನೀಡಲು ಸರಕಾರ ನಿರ್ಧರಿಸಿದ್ದು, 2022-23 ನೇ ಶೈಕ್ಷಣಿಕ ವರ್ಷ ಮೇ16ರಂದು ಆರಂಭವಾಗಲಿದೆ ಎಂದು ಶಿಕ್ಷಣ ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.
ಇನ್ನು ಕೋವಿಡ್ ಕಾರಣ ಭೌತಿಕ ತರಗತಿಗಳು ಸರಿಯಾಗಿ ನಡೆಯದೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿರುವುದರಿಂದ ಮುಂದಿನ ವರ್ಷ ಶೈಕ್ಷಣಿಕ ವರ್ಷದಲ್ಲಿ ‘ಕಲಿಕಾ ಚೇತರಿಕೆ (ಸೇತುಬಂಧ) ಕಾರ್ಯಕ್ರಮ ಆಯೋಜಿಸಲು ಕೂಡಾ ಇಲಾಖೆ ನಿರ್ಧರಿಸಿದೆ. ಈ ಕಾರ್ಯಕ್ರಮ ಮೇ 16ರಿಂದ ಆರಂಭವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.