ಹರ್ಷ ಹತ್ಯೆ ಬಳಿಕ ನಡೆದ ಗಲಭೆ ಸರ್ಕಾರಿ ಪ್ರಾಯೋಜಿತ ಘಟನೆ: ಶಿವಮೊಗ್ಗ ಜಾಯಿಂಟ್ ಆ್ಯಕ್ಷನ್ ಕಮಿಟಿ ಆರೋಪ
ಶಿವಮೊಗ್ಗ, ಫೆ.24: ಬಜರಂಗದಳ ಕಾರ್ಯಕರ್ತ ಹರ್ಷ ಶವಯಾತ್ರೆ ವೇಳೆ ನಡೆದ ಗಲಭೆ, ಕಲ್ಲುತೂರಾಟ ಸರ್ಕಾರಿ ಪ್ರಾಯೋಜಿತ ಘಟನೆ ಎಂದು ಜಾಯಿಂಟ್ ಆ್ಯಕ್ಷನ್ ಕಮಿಟಿ ಆರೋಪಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವಕೀಲ ಶಹರಾಝ್ ಮುಜಾಹಿದ್ ಸಿದ್ದೀಕಿ, ಫೆ.20 ರಂದು ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯನ್ನು ಜಾಯಿಂಟ್ ಆಕ್ಷನ್ ಕಮಿಟಿ ತೀವ್ರವಾಗಿ ಖಂಡಿಸುತ್ತದೆ. ಕೃತ್ಯ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಹರ್ಷ ಹತ್ಯೆ ನಂತರ ಸಚಿವ ಕೆ.ಎಸ್ ಈಶ್ವರಪ್ಪ ಅವರು,ಮುಸಲ್ಮಾನ ಗುಂಡಾಗಳನ್ನು ಬಿಡುವುದಿಲ್ಲ,ಅವರನ್ನು ದಮನ ಮಾಡುತ್ತೇವೆ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದೇ ಗಲಭೆಗೆ ಮುಖ್ಯ ಕಾರಣ ಎಂದು ಆರೋಪಿಸಿದರು.
ನಿಷೇದಾಜ್ಙೆ ಜಾರಿಯಲ್ಲಿದ್ದರೂ ಸಾವಿರಾರು ಜನರನ್ನು ಸೇರಿಸಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಎನ್. ಟಿ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಕಾರಣ ನಗರದಲ್ಲಿ ಆಶಾಂತಿ ಕದಡಲು ಕಾರಣ ಎಂದ ಅವರು,ಆಜಾದ್ ನಗರ, ಕ್ಲಾರ್ಕ್ ಪೇಟೆಯಲ್ಲಿ ಅಲ್ಪಸಂಖ್ಯಾತರ ಮನೆಗಳ ಮೇಲೆ ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಪೊಲೀಸ್ ಸಮುಖದಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ವಾಹನಗಳ ಮೇಲೆ ಬೆಂಕಿ ಹಚ್ಚಿದ್ದಾರೆ. ಸಾರ್ವಜನಿಕರ ಅಸ್ತಿಪಾಸ್ತಿಗಳಿಗೆ ನಷ್ಟ ಆದರೂ ಸಹ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ.ಆರ್.ಎ.ಎಫ್ ತುಕಡಿ ಕರೆಸಿಕೊಂಡು ಯಾವುದೇ ಕ್ರಮಕ್ಕೆ ಆದೇಶ ನೀಡದೆ ಹೀನಾಯ ಕೃತ್ಯ ನಡೆಸಿದ್ದಾರೆ ಎಂದು ದೂರಿದರು.
ಗಲಭೆಯಿಂದ ಉಂಟಾದ ಅಪಾರ ಆಸ್ತಿಪಾಸ್ತಿ ನಷ್ಟಕ್ಕೆ ಸಚಿವ ಕೆಎಸ್ ಈಶ್ವರಪ್ಪ,ಸಂಸದ ರಾಘವೇಂದ್ರ ಅವರೇ ನೇರ ಹೊಣೆ. ಹಾಗಾಗಿ
ಇವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅವರಿಂದ ನಷ್ಟ ಭರಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೊಹಮ್ಮದ್ ಆಸಿತ್, ರಿಯಾಝ್ ಅಹ್ಮದ್ ,ಖಲೀಂ ಪಾಷ,ಮೌಲಾನ ಶಾಹುಲ್ ಹಮೀದ್, ಮುಜೀಬುಲ್ಲಾ ಸೇರಿದಂತೆ ಹಲವರಿದ್ದರು.
ಜಾಯಿಂಟ್ ಆ್ಯಕ್ಷನ್ ಕಮಿಟಿ ಬೇಡಿಕೆಗಳು:
1.ಹರ್ಷನ ಹತ್ಯೆಯ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆ ಆಗಬೇಕು ಹಾಗೂ ಅವರ
ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು.
2. ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಪಡಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ಹಾಗೂ ನಷ್ಟ ಅದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಿ, ಪುನರ್ ವಸತಿಗೆ ಕ್ರಮ ಕೈಗೊಳ್ಳಬೇಕು.ಅಮಾಯಕರನ್ನು ಯಾವುದೇ ಕಾರಣಕ್ಕೂ ಬಂಧಿಸಬಾರದು.
3.ನಗರದಲ್ಲಿ ಅಳವಡಿಸಿರುವ ಸಿ ಸಿ ಕ್ಯಾಮರಾ ದೃಶ್ಯವಳಿ ಗಳು ಸಾಕ್ಷಿಯಾಗಿ ಪರಿಗಣಿಸಬೇಕು ಹಾಗೂ ಯಾವುದೇ ದೃಶ್ಯಾವಳಿಗಳು ನಾಶ ಪಡಿಸಬಾರದು ಹಾಗೂ ತನಿಖೆಗೆ ಅಳವಡಿಸಬೇಕು.
4.ನಗರದಲ್ಲಿ ಶಾಂತಿ ನೆಲಸಲು ಎಲ್ಲರೂ ಸಹಕರಿಸಬೇಕು. ಸರ್ಕಾರವು ಅದೇ ನಿಟ್ಟಿನಲ್ಲಿ ಸರ್ಕಾರ ಕ್ರಮ ಜರುಗಿಸಬೇಕು.
5.ಸಚಿವರುಗಳು, ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಸರ್ವರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ
ಹೇಳಿಕೆ ನೀಡಬೇಕು.