ಕಲಬುರಗಿ ಮೇಯರ್ ಚುನಾವಣೆ: ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ ವಿಭಾಗೀಯ ಪೀಠ

Update: 2022-02-24 12:58 GMT

ಕಲಬುರಗಿ, ಫೆ.24: ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆ ಹಳೇ ಮೀಸಲಾತಿಯಂತೆ ಹಾಗೂ ಹೊಸದಾಗಿ ಎಂಎಲ್‍ಸಿ ಹೆಸರು ಸೇರಿಸದೇ ಇರುವ ಹಿಂದಿನ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸುವಂತೆ ಏಕಸದಸ್ಯ ಪೀಠ ನೀಡಿರುವ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತಾತ್ಕಾಲಿಕವಾಗಿ ತಡೆ ನೀಡಿದೆ.

ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಐವರು ಎಂಎಲ್‍ಸಿಗಳ ಹೆಸರು ಸೇರ್ಪಡೆ ಮತ್ತು ಮೇಯರ್ ಮೀಸಲಾತಿ ಬದಲಾವಣೆ ಮಾಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಹಳೇ ಮೀಸಲಾತಿ ಮತ್ತು ಹಳೇ ಮತದಾರರ ಪಟ್ಟಿಯಂತೆ ತಿಂಗಳೊಳಗೆ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿತ್ತು. ನಂತರ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಬಿಜೆಪಿಯು ಫೆ.4 ರಂದು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಈ ಮೇಲ್ಮನವಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಮತ್ತು ನ್ಯಾಯಮೂರ್ತಿ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ, ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ. 

ವರ್ಚುವಲ್ ಮೂಲಕ ನಡೆದ ಅರ್ಜಿ ವಿಚಾರಣೆಯಲ್ಲಿ ಬಿಜೆಪಿ ಪರವಾಗಿ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಮತ್ತು ಅಡ್ವೋಕೆಟ್ ಜನರಲ್ ನಾವದಗಿ ವಾದ ಮಂಡಿಸಿದರು. 

ವ್ಯಾಜ್ಯ ಏನು?: 2021ರ ನವೆಂಬರ್ 6ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ ನ.20ರಂದು ಚುನಾವಣೆ ನಡೆಯಬೇಕಿತ್ತು. 55 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 27 ಪಾಲಿಕೆ ಸದಸ್ಯರು, ಒಬ್ಬ ರಾಜ್ಯಸಭೆ ಸದಸ್ಯರು, ಒಬ್ಬ ಶಾಸಕಿ ಸೇರಿ ಒಟ್ಟು ಸದಸ್ಯ ಬಲ 29 ಆಗಿತ್ತು. ಬಿಜೆಪಿ 24 ಸದಸ್ಯರು, ಒಬ್ಬ ಸಂಸದರು ಹಾಗೂ ಐವರು ಶಾಸಕರು ಸೇರಿ ಬಲ 30 ಆಗಿತ್ತು. ಈ ಪಟ್ಟಿಯಲ್ಲಿ ಪಾಲಿಕೆಯ ಒಟ್ಟು ಮತದಾರರ ಸಂಖ್ಯೆ 63 ಇತ್ತು. ಅಧಿಕಾರ ಗಿಟ್ಟಿಸಲು 32 ಸದಸ್ಯ ಬಲ ಬೇಕಿತ್ತು. ಮೇಯರ್ ಸ್ಥಾನವು ‘ಸಾಮಾನ್ಯ ಮಹಿಳೆ’ ಹಾಗೂ ಉಪಮೇಯರ್ ಸ್ಥಾನವು ‘ಹಿಂದುಳಿದ ವರ್ಗ–ಬ’ಗೆ ಮೀಸಲಾಗಿತ್ತು.

ಜೆಡಿಎಸ್‍ನ ನಾಲ್ವರು ಸದಸ್ಯರನ್ನು ಸೇರಿಸಿಕೊಂಡು ಪಾಲಿಕೆ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್, ಬಿಜೆಪಿ ಯತ್ನ ನಡೆಸಿದ್ದವು. ಆದರೆ, ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆಯ ಕಾರಣ ಚುನಾವಣೆಯನ್ನು ಮುಂದೂಡಲಾಗಿತ್ತು.

ಏತನ್ಮಧ್ಯೆ, ರಾಜ್ಯ ಸರಕಾರ ಮೀಸಲಾತಿ ಬದಲಿಸಿ, ಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಹಾಗೂ ಉಪಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ನಿಗದಿ ಪಡಿಸಿತು. ಫೆ.5ರಂದು ಚುನಾವಣೆ ನಿಗದಿ ಮಾಡಿ ಪ್ರಾದೇಶಿಕ ಆಯುಕ್ತರು ಹೊಸ ಅಧಿಸೂಚನೆ ಹೊರಡಿಸಿದ್ದರು. 

ಐವರ ಹೆಸರು ಸೇರ್ಪಡೆ: ನಾಮಕರಣಗೊಂಡ ಮತ್ತು ವಿಧಾನ ಸಭೆಯಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು ರಾಜ್ಯದ ಯಾವುದೇ ಜಿಲ್ಲೆಯನ್ನು ನೋಡಲ್ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ ಎಂಬ ಕಾರಣ ನೀಡಿ, ಬಿಜೆಪಿಯ ಹೊರ ಜಿಲ್ಲೆಗಳ ಏಳು ಜನ ವಿಧಾನ ಪರಿಷತ್ ಸದಸ್ಯರು ಕಲಬುರಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕೋರಿ ಅರ್ಜಿ ಸಲ್ಲಿಸಿದ್ದರು.

ಲಕ್ಷ್ಮಣ ಸವದಿ, ತುಳಸಿ ಮುನಿರಾಜುಗೌಡ, ಭಾರತಿ ಶೆಟ್ಟಿ, ಲೆಹರ್ ಸಿಂಗ್, ರಘುನಾಥರಾವ್ ಮಲ್ಕಾಪುರೆ ಅವರನ್ನು ಇಲ್ಲಿಯ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದು, ಸಾಯಬಣ್ಣ ತಳವಾರ, ಪ್ರತಾಪಸಿಂಹ ನಾಯಕ ಅವರ ಅರ್ಜಿ ತಿರಸ್ಕರಿಸಲಾಗಿದೆ.

ಚುನಾವಣೆ ನಡೆಸಲು ಹೊರಡಿಸಿದ ಹೊಸ ಅಧಿಸೂಚನೆಯಲ್ಲಿ ವಿಧಾನ ಪರಿಷತ್‍ನ ಐವರು ಸದಸ್ಯರನ್ನು ಸೇರಿಸಿ ಹೊಸ ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಇದರಿಂದ ಬಿಜೆಪಿ ಬಲ 35ಕ್ಕೆ ಏರಿತ್ತು. ಹಿಂದೆ 63 ಇದ್ದ ಸದಸ್ಯ ಬಲ 68ಕ್ಕೆ ಏರಿಕೆಯಾಗಿತ್ತು. ಅಧಿಕಾರಕ್ಕೇರಲು 35 ಸದಸ್ಯರ ಅವಶ್ಯಕತೆ ಇತ್ತು. ಬಿಜೆಪಿ ಅಧಿಕಾರ ಗಿಟ್ಟಿಸಲು ಯತ್ನ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News