ಉಕ್ರೇನ್ ಯುದ್ಧ ನೆಲದಲ್ಲಿ ಸಿಲುಕಿದ ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು
ಬೆಂಗಳೂರು, ಫೆ. 24: ‘ರಷ್ಯಾ ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ'ದಿಂದ ಕರ್ನಾಟಕ ರಾಜ್ಯಕ್ಕೂ ಆತಂಕ ಎದುರಾಗಿದ್ದು, ವಿದ್ಯಾಭ್ಯಾಸ ಮತ್ತು ಉದ್ಯೋಗದ ನಿಮಿತ್ತ ರಾಜ್ಯದಿಂದ ತೆರಳಿದ್ದ ಸುಮಾರು 10ಕ್ಕೂ ಹೆಚ್ಚು ಮಂದಿ ಉಕ್ರೇನ್‍ನಲ್ಲಿ ಸಿಲುಕಿದ್ದು ರಾಜ್ಯಕ್ಕೆ ಆಗಮಿಸಲು ಪರಿತಪಿಸುತ್ತಿದ್ದಾರೆ.
ಮಂಗಳೂರು-2, ಬೆಳಗಾವಿ-2, ಶಿವಮೊಗ್ಗ-2, ಬಾಗಲಕೋಟೆ, ಕೊಪ್ಪಳ, ರಾಮನಗರ, ಧಾರವಾಡ ಜಿಲ್ಲೆಗಳ ತಲಾ ಒಬ್ಬೊಬ್ಬರು ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಮಂದಿ ಉಕ್ರೇನ್ ಯುದ್ಧ ನೆಲದಲ್ಲಿದ್ದು, ಭೀತಿಯಲ್ಲಿ ಬದುಕು ದೂಡುತ್ತಿದ್ದಾರೆಂದು ಗೊತ್ತಾಗಿದೆ. ‘ಉಕ್ರೇನ್‍ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರ ಕ್ರಮ ವಹಿಸಲಿದೆ' ಎಂದು ಸಿಎಂ ಅಭಯ ನೀಡಿದ್ದರೂ, ಅವರ ಕುಟುಂಬದ ಸದಸ್ಯರಲ್ಲಿ ಆತಂಕ ಮನೆ ಮಾಡಿದೆ.
ಮಂಗಳೂರಿನ ದೇರೇಬೈಲ್ ನಿವಾಸಿ ಅನೈನಾ ಅನ್ನ ಹಾಗೂ ಪಡೀಲು ನಿವಾಸಿ ಕ್ಲಾಟನ್ ಅವರು ವಿದ್ಯಾಭ್ಯಾಸ ನಿಮಿತ್ತ ಉಕ್ರೇನ್‍ಗೆ ತೆರಳಿದ್ದು, ಅಲ್ಲಿ ಸಿಲುಕಿಕೊಂಡಿದ್ದಾರೆಂದು ತಿಳಿದು ಬಂದಿದೆ. ಶಿವಮೊಗ್ಗ ಹೊರವಲಯದ ಸಂತೆ ಕಡೂರು ಗ್ರಾಮದ ವಿಶ್ವನಾಥ್-ದೇವಕಿ ದಂಪತಿ ಪುತ್ರ ತೇಜಸ್ ಉಕ್ರೇನ್‍ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಇದೇ ಜಿಲ್ಲೆ ಮೂಲದ ಮತ್ತೋರ್ವ ಯುವತಿ ಅಕ್ಷತಾ ಉದ್ಯೋಗದಲ್ಲಿದ್ದು, ಅವರ ವಿಳಾಸ ಪತ್ತೆಗೆ ಜಿಲ್ಲಾಡಳಿತ ಕ್ರಮ ವಹಿಸಿದೆ.
ಬೆಳಗಾವಿ ಜಿಲ್ಲೆಯ ಅಮೋಘಾ ಚೌಗಲಾ ಮತ್ತು ಪ್ರಿಯಾ ನಿಡಗುಂದಿ ಉಕ್ರೇನ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ಯಕ್ಕೆ ಮರಳಲು ವಿದ್ಯಾರ್ಥಿನಿಯರು ವಿಮಾನ ಟಿಕೆಟ್ ಬುಕ್ ಮಾಡಿದ್ದು, ಪೋಷಕರ ಸಂಪರ್ಕದಲ್ಲಿದ್ದಾರೆಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ್ ಮಾಹಿತಿ ನೀಡಿದ್ದಾರೆ.
ಇನ್ನೂ ಬಾಗಲಕೋಟೆ ಮೂಲದ ಅಪೂರ್ವ ಎಸ್.ಕದಂಪುರ ಉಕ್ರೇನ್‍ನ ಕಾರ್ಕೇವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಅವರು ಅಲ್ಲಿ ಸಿಲುಕಿಕೊಂಡಿದ್ದಾರೆ. ಅಪೂರ್ವ ಸುರಕ್ಷಿತವಾಗಿದ್ದಾಳೆ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಕಲ್ಲೂರ ಗ್ರಾಮದ ಸಂಗಮೇಶ ಸೊಪ್ಪಿಮಠ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದು, ಸದ್ಯ ಯಾವುದೇ ತೊಂದರೆ ಇಲ್ಲ ಎಂದು ಪೋಷಕರಿಗೆ ಮಾಹಿತಿ ನೀಡಿದ್ದಾರೆಂದು ಗೊತ್ತಾಗಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣದ ತಿಮ್ಮಸಂದ್ರ ಗ್ರಾಮದ ನಿವೇದಿತಾ ಉಕ್ರೇನ್‍ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದು, ಈಕೆಯ ಮನೆಯವರೀಗ ಚಿಂತೆಯಲ್ಲಿದ್ದಾರೆ. ರಾಮನಗರ ಐಜೂರು ಮೂಲದ ಆಯುಷ್ ಉಕ್ರೇನ್‍ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಚೈತ್ರಾ ಉಕ್ರೇನ್‍ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಊರಿಗೆ ಬರುವ ಸಿದ್ಧತೆಯಲ್ಲಿದ್ದರು. ಅಷ್ಟರಲ್ಲೇ ಯುದ್ಧ ಆರಂಭವಾಗಿ ವಿಮಾನ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣ ರದ್ದುಗೊಂಡಿದೆ ಎಂದು ತಿಳಿದು ಬಂದಿದೆ.
‘ಉಕ್ರೇನ್‍ನಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರ್ನಾಟಕ ರಾಜ್ಯಕ್ಕೆ ಕರೆತರಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಉಕ್ರೇನ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ'
-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ