×
Ad

ಸೂರ್ಯ ಮುಕುಂದರಾಜ್‍ಗೆ ವಕೀಲರ ಪರಿಷತ್‍ನಿಂದ ನೋಟಿಸ್: ಎಎಬಿ ಮಾಜಿ ಅಧ್ಯಕ್ಷ ರಂಗನಾಥ್ ಆಕ್ಷೇಪ

Update: 2022-02-24 22:35 IST

ಬೆಂಗಳೂರು, ಫೆ.24: ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧದ ಸೀಡಿ ಕೇಸ್ ಪ್ರಕರಣದ ಆರಂಭದಲ್ಲಿ ವಕೀಲ ಜಗದೀಶ್ ಅವರಿಗೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ವಕೀಲ ಹಾಗೂ ಕಾಂಗ್ರೆಸ್ ವಕ್ತಾರ ಸೂರ್ಯ ಮುಕುಂದರಾಜ್ ಅವರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ನೋಟಿಸ್ ಜಾರಿ ಮಾಡಿದೆ. ವಕೀಲರ ಪರಿಷತ್ತಿನ ಈ ಕ್ರಮಕ್ಕೆ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಎ.ಪಿ ರಂಗನಾಥ್, ರಾಜ್ಯ ವಕೀಲರ ಪರಿಷತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ದಮನಿಸಿದೆ. ವೈಯಕ್ತಿಕ ವಿಚಾರಗಳನ್ನು ಬಾರ್ ಕೌನ್ಸಿಲ್ ಹಿತಾಸಕ್ತಿಗೆ ಆಗಿರುವ ಧಕ್ಕೆ ಎಂಬಂತೆ ಬಿಂಬಿಸಿ ಸರ್ವಾಧಿಕಾರಿ ಧೋರಣೆಯಿಂದ ವಕೀಲ ಸೂರ್ಯ ಮುಕುಂದರಾಜ್ ಅವರಿಗೆ ನೋಟಿಸ್ ಜಾರಿ ಮಾಡಿದೆ, ಇದು ಖಂಡನೀಯ. ವಕೀಲರ ಪರಿಷತ್ತು ವೃತ್ತಿ ದುರ್ನಡತೆ ವಿಚಾರವಾಗಿ ಮಾತ್ರ ಕ್ರಮ ಕೈಗೊಳ್ಳಬೇಕು. ಆದರೆ, ಇಲ್ಲಿ ವೈಯಕ್ತಿಕ ವಿಚಾರಕ್ಕೆ ನೋಟಿಸ್ ನೀಡಿರುವ ಕ್ರಮ ಸರಿಯಿಲ್ಲ. ಬಸವರಾಜು ಹೆಸರಿನ ವಕೀಲರು ಸಾಕಷ್ಟಿದ್ದಾರೆ. ಯಾವ ಬಸವರಾಜು ಎಂದು ಎಲ್ಲಿಯೂ ಹೇಳಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಬಾರ್ ಕೌನ್ಸಿಲ್‍ಗೆ ತನ್ನದೇ ಸಾಕಷ್ಟು ಕೆಲಸಗಳಿವೆ. ಅವುಗಳನ್ನು ಬಿಟ್ಟು ವೈಯಕ್ತಿಕ ವಿಚಾರಗಳಿಗೆ ಮೂಗು ತೂರಿಸುವುದು ಸರಿಯಾದುದಲ್ಲ ಎಂದು ಆಕ್ಷೇಪಿಸಿದ್ದಾರೆ.

ವಕೀಲರ ಪರಿಷತ್ತು ನೀಡಿರುವ ನೋಟಿಸ್: ದೆಹಲಿ ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿಸಿಕೊಂಡಿರುವ ವಕೀಲ ಜಗದೀಶ್ ಕುಮಾರ್, ರಾಜ್ಯದ ವಕೀಲರು, ನ್ಯಾಯಾಂಗ ಅಧಿಕಾರಿಗಳು, ಪೊಲೀಸರು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. 

ಜಗದೀಶ್ ಅವರಿಗೆ ನೀವು ನೆರವು ನೀಡುತ್ತಿದ್ದೀರಿ. ಇದನ್ನು ಪರಿಷತ್ತು ಗಮನಿಸಿದೆ. ಅಲ್ಲದೇ, ವಕೀಲರ ಪರಿಷತ್ತಿನ ಗೌರವಾನ್ವಿತ ಸದಸ್ಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಟೀಕೆ ಮಾಡಿದ್ದೀರಿ. ಈ ಹಿನ್ನೆಲೆಯಲ್ಲಿ ವಕೀಲ ಬಸವರಾಜ್ ಅವರ ವಿರುದ್ಧ ಯಾವ ಸಂದರ್ಭದಲ್ಲಿ ಅಂತಹ ಆರೋಪ ಮಾಡಿದ್ದೀರಿ ಎಂಬುದಕ್ಕೆ 7 ದಿನಗಳಲ್ಲಿ ವಿವರಣೆ ನೀಡುವಂತೆ ಸೂಚಿಸಲಾಗಿದೆ ಎಂದು ಪರಿಷತ್ತು ಜಾರಿ ಮಾಡಿರುವ ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ.

ವಕೀಲ ಸೂರ್ಯ ಮಾಡಿದ್ದ ಪೋಸ್ಟ್: ಎಸ್‍ಐಟಿಯ ಕೆಲವು ಐಪಿಎಸ್ ದರ್ಜೆಯ ಅಧಿಕಾರಿಗಳು ಸಂತ್ರಸ್ತೆಯ ಪರವಾಗಿ ಕಾನೂನು ಹೋರಾಟ ಮಾಡುತ್ತಿರುವ ವಕೀಲರ ಮೇಲೆ ವೈಯಕ್ತಿಕ ದಾಳಿಗೆ ಇಳಿದಿದ್ದಾರೆ. ಒಬ್ಬ ದುರಹಂಕಾರದ ಮೂಟೆಯಂತಿರುವ ಬಸವರಾಜನೆಂಬ ಪೂರ್ವಾಗ್ರಹ ಪೀಡಿತ ವಕೀಲ, ಜಗದೀಶ್ ಅವರು ವಕೀಲರಾಗಿ ನೋಂದಾಯಿಸಿಕೊಂಡಿದ್ದಾರೋ ಇಲ್ಲವೋ ಎಂಬ ಶೋಧನೆಗೆ ಇಳಿದಿದ್ದಾರೆ. ಈ ಬಸವರಾಜನಿಗೆ ರಮೇಶ್ ಜಾರಕಿಹೊಳಿ ಅಮೇಧ್ಯ ತಿನ್ನಿಸಿರಬೇಕು. ಪ್ರಕರಣದ ತನಿಖೆ ನಡೆಸುವುದನ್ನು ಬಿಟ್ಟು ದಿಕ್ಕು ಬದಲಿಸಿ ಯುವತಿಗೆ ನೆರವು ನೀಡುವ ವಕೀಲರ ತಂಡದ ಮೇಲೆ ಅಧಿಕಾರ ದುರುಪಯೋಗದ ಮೂಲಕ ದಾಳಿಗೆ ಇಳಿದಿರುವ ಜಾರಕಿಹೊಳಿ ಕಾವಲುಗಾರ ಐಪಿಎಸ್ ಅಧಿಕಾರಿಗಳೇ ಗಾಜಿನ ಮನೆಯಲ್ಲಿ ಕೂತು ಕಲ್ಲೆಸೆಯಬೇಡಿ" ಎಂದು ವಕೀಲ ಸೂರ್ಯ ಮುಕುಂದರಾಜ್ 2021ರ ಎಪ್ರಿಲ್ 2ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. 10 ತಿಂಗಳ ಬಳಿಕ ವಕೀಲರ ಪರಿಷತ್ ನೋಟಿಸ್ ಜಾರಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News