ದಾವಣಗೆರೆ ಮಹಾನಗರ ಪಾಲಿಕೆ: 3ನೇ ಅವಧಿಯಲ್ಲೂ ಬಿಜೆಪಿಗೆ ಮೇಯರ್, ಉಪ ಮೇಯರ್ ಸ್ಥಾನ

Update: 2022-02-25 09:01 GMT
ಜಯಮ್ಮ ಗೋಪಿನಾಯ್ಕ(ಎಡಚಿತ್ರ), ಗಾಯತ್ರಿ ಖಂಡೋಜಿರಾವ್

ದಾವಣಗೆರೆ, ಫೆ.25: ಭಾರೀ ಕುತೂಹಲ ಮೂಡಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆಯ ಮೂರನೇ ಅವಧಿಗೆ ಬಿಜೆಪಿ ಮೇಯರ್, ಉಪ ಮೇಯರ್ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.

ಶುಕ್ರವಾರ ಮೇಯರ್, ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 30ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ಸೇರಿರುವ ಜಯಮ್ಮ ಗೋಪಿನಾಯ್ಕ ಮೇಯರ್ ಆಗಿ ಆಯ್ಕೆಯಾದರೆ, ಉಪ ಮೇಯರ್ ಆಗಿ 8ನೇ ವಾರ್ಡ್ ನ ಬಿಜೆಪಿಯ ಗಾಯತ್ರಿ ಖಂಡೋಜಿರಾವ್ ಆಯ್ಕೆಯಾದರು.

ಪರಿಶಿಷ್ಟ ಜಾತಿ(ಮಹಿಳೆ) ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ನಿರೀಕ್ಷೆಯಂತೆ ಜಯಮ್ಮ ಗೋಪಿನಾಯ್ಕ ಕಾಂಗ್ರೆಸ್ ನ ನಾಗರತ್ನಮ್ಮ ವಿರುದ್ಧ ನಾಲ್ಕು ಮತಗಳ ಅಂತರದಿಂದ ಜಯ ಸಾಧಿಸಿದರು. ಜಯಮ್ಮ ಗೋಪಿನಾಯ್ಕ 25 ಮತಗಳು ಪಡೆದರೆ,  ನಾಗರತ್ನಮ್ಮ 21 ಮತಗಳನ್ನು ಗಳಿಸಲು ಶಕ್ತರಾದರು.

ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಗಾಯತ್ರಿ ಬಾಯಿ ಖಂಡೋಜಿರಾವ್ 29 ಮತ ಪಡೆದರು. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಶ್ವೇತಾ ಶ್ರೀನಿವಾಸ್ 25 ಮತಗಳನ್ನು ಗಳಿಸಿ ಸೋಲೋಪ್ಪಿಕೊಂಡರು.

ಒಟ್ಟು 45 ಸದಸ್ಯತ್ವ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 18 ಸದಸ್ಯರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ 29 ಮತದಾರರ ಬಲ ಹೊಂದಿದ್ದು ಸತತ ಮೂರನೇ ಬಾರಿಗೆ ಮೇಯರ್,‌ ಉಪ ಮೇಯರ್ ಗಾದಿಗೆ ಏರುವಲ್ಲಿ ಯಶಸ್ವಿಯಾಗಿದೆ.

ಮಹಾನಗರ ಪಾಲಿಕೆಯಲ್ಲಿ ಅತಿ ಹೆಚ್ಚಿನ ಸದಸ್ಯರನ್ನು ಹೊಂದಿದ್ದರೂ ಕಾಂಗ್ರೆಸ್ ಮೂರನೇ ಬಾರಿಯೂ ಮೇಯರ್, ಉಪ ಮೇಯರ್ ಹುದ್ದೆಗೇರುವಲ್ಲಿ ವಿಫಲವಾಗಿದೆ.

ಮೊದಲ ಮತ್ತು ಎರಡನೇ ಅವಧಿಯ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಭಾರೀ ಉತ್ಸಾಹ ದೊಂದಿಗೆ ರಾಜಕೀಯ ಕಸರತ್ತು ನಡೆಸಿದ್ದ ಕಾಂಗ್ರೆಸ್ ತನ್ನ ಸದಸ್ಯರೇ ಕೈ ಕೊಟ್ಟ ಪರಿಣಾಮ ಮಹಾ ನಗರಪಾಲಿಕೆಯ ಅಧಿಕಾರ ಪಡೆಯುವಲ್ಲಿ ಎಡವಿತ್ತು. ಮೂರನೇ ಅವಧಿಗೂ ಕಾಂಗ್ರೆಸ್ ಗೆ ಮೇಯರ್, ಉಪ ಮೇಯರ್ ಗಾದಿ ಕೈಗೆಟುಕದ ದ್ರಾಕ್ಷಿ ಯಂತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News