ರಶ್ಯಾ- ಉಕ್ರೇನ್ ನಡುವಿನ ಯುದ್ಧ: ಭಾರತ ಮಧ್ಯಸ್ಥಿಕೆ ವಹಿಸುವುದು ಸುಲಭವಲ್ಲ ಎಂದ ಸಂಸದ ಪ್ರತಾಪ್ ಸಿಂಹ

Update: 2022-02-25 14:48 GMT
 ಪ್ರತಾಪ್ ಸಿಂಹ

ಮೈಸೂರು,ಫೆ.25: ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೆಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುದ್ಧದಿಂದ ಜಗತ್ತಿನಾದ್ಯಂತ ಭಯದ ವಾತಾವರಣ ಸೃಷ್ಟಿ ಆಗಿದೆ. ಭಾರತದ ಸಾಕಷ್ಟು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಭಾರತದ ಸರ್ಕಾರ ಕೂಡ ಈ ಕುರಿತು ತುರ್ತು ಸಭೆ ನಡೆಸಿದೆ.  ಭಾರತ ಮೊದಲ ಹಂತದಲ್ಲಿ ಒಂದು ವಿಮಾನದ ಮೂಲಕ ಭಾರತೀಯರ ರಕ್ಷಣೆಗೆ ಮುಂದಾಗಿದೆ. ರಶ್ಯಾ ಅಧ್ಯಕ್ಷರ ಜೊತೆ ಕೂಡ ಮಾತನಾಡಿದ್ದಾರೆ. ಈ ಎಲ್ಲಾ ವಿಚಾರ ಚರ್ಚೆ ಮಾಡಿರುತ್ತಾರೆ. ಭಾರತೀಯರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಪ್ರಧಾನಿಗಳು ಮಾತುಕತೆ ನಡೆಸುತ್ತಿದ್ದಾರೆ. ಯಾವುದೇ ಭಯ ಬೇಡ. ಮೋದಿ ಮೇಲೆ ನಂಬಿಕೆ ಇಡಿ. ಸುರಕ್ಷಿತವಾಗಿ ಭಾರತೀಯರನ್ನು ಕರೆತರುತ್ತಾರೆ  ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಉಕ್ರೇನ್ ಮೇಲೆ ರಶ್ಯಾ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಭಾರತಕ್ಕೆ ಉಕ್ರೇನ್ ಮನವಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ  ಅವರು ಮಧ್ಯಸ್ಥಿಕೆ ವಹಿಸುವುದು ಅಷ್ಟು ಸುಲಭವಲ್ಲ ಎಂದರು.  ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾರತ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಆದರೆ ಮಧ್ಯಸ್ಥಿಕೆ ವಹಿಸುವುದು ಅಷ್ಟು ಸುಲಭವಲ್ಲ. ರಶ್ಯಾ ಅಧ್ಯಕ್ಷರೇ ಖುದ್ದಾಗಿ ಪ್ರಧಾನಿಯವರಿಗೆ ಕರೆ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿಚಾರ ಯಾವ ರೀತಿ ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಗೊತ್ತಿದೆ. ಭಾರತ ಸರ್ಕಾರ ಅಥವಾ ಮೋದಿಯವರಿಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಮೋದಿ ಮತ್ತು ಪುಟಿನ್ ನಡುವೆ ಆತ್ಮೀಯ ಸ್ನೇಹ ಸಂಬಂಧ ಇದೆ. ಅವರು ಏನು ಮಾತನಾಡಿದ್ದಾರೊ ನನಗೆ ಮಾಹಿತಿ ಇಲ್ಲ. ಎಲ್ಲಾ ರಾಷ್ಟ್ರಗಳಿಗೂ ಸ್ವಾರ್ಥವೇ ಮುಖ್ಯ ಎಂದರು.

ಉಕ್ರೇನ್ ನ ಬಹುತೇಕ ಗ್ಯಾಸ್ ಲೈನ್ ಗಳು ರಶ್ಯಾ ಮೂಲಕ ಹಾದುಹೋಗಿವೆ. ಉಕ್ರೇನ್ ಕಂಟ್ರೋಲ್ ತೆಗೆದುಕೊಳ್ಳಲು ರಶ್ಯಾ ಮುಂದಾಗಿದೆ. ಅಮೇರಿಕಾ ಕೂಡ ಸ್ವಾರ್ಥಕ್ಕಾಗಿ ಹಿಂದೆ ಯಾವೆಲ್ಲ ನಿರ್ಧಾರ ತೆಗೆದುಕೊಂಡಿದೆ ಎಂಬುದು ಗೊತ್ತಿದೆ. ಆದ್ದರಿಂದ ಈ ಸಮಸ್ಯೆ ಬಗೆಹರಿಸುವುದು ಅಷ್ಟು ಸುಲಭ ಅಲ್ಲ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News