ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಾತಾವರಣ ನಿರ್ಮಾಣ: ಸಿದ್ದರಾಮಯ್ಯ
ಹೊಸದಿಲ್ಲಿ, ಫೆ.25: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಒಂದು ವರ್ಷವಿದ್ದು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಈಗ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಒಂದು ಅನೈತಿಕ ಸರಕಾರ ಅಧಿಕಾರದಲ್ಲಿದೆ. ಕಳೆದ ಎರಡೂವರೆ ವರ್ಷಗಳಿಂದ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ, ಹೀಗಾಗಿ ರಾಜ್ಯದ ಜನ ಶಾಪ ಹಾಕುತ್ತಿದ್ದಾರೆ. ಇದೊಂದು ನಿಷ್ಕ್ರಿಯ, ಭ್ರಷ್ಟ ಸರಕಾರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಶುಕ್ರವಾರ ಹೊಸದಿಲ್ಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊವಿಡ್ 19 ಅನ್ನು ಸರಿಯಾಗಿ ನಿಭಾಯಿಸದೆ ಎರಡನೇ ಅಲೆಯಲ್ಲಿ ಸಾವಿರಾರು ಜನರ ಸಾವಿಗೆ ಈ ಸರಕಾರ ಕಾರಣ. ಇದು ಅಭಿವೃದ್ಧಿ ಶೂನ್ಯ ಸರಕಾರ ಎಂದು ಕಿಡಿಗಾರಿದರು.
ಹೀಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯದ ಸುಮಾರು 16 ಜನ ಹಿರಿಯ ನಾಯಕರನ್ನು ದಿಲ್ಲಿಗೆ ಕರೆದು ಸಭೆ ನಡೆಸಿ ರಾಜ್ಯದ ಸದ್ಯದ ಸ್ಥಿತಿಗತಿ, ಮುಂದೆ ನಾವು ಗೆಲ್ಲಬೇಕಾದರೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳು ಚರ್ಚಿಸಿದ್ದಾರೆ. ಗೆಲ್ಲುವ ಅವಕಾಶ ಇರುವುದರಿಂದ ಎಚ್ಚರ ತಪ್ಪದೆ ಕೆಲಸ ಮಾಡಿ, ಮತ್ತೆ ಅಧಿಕಾರಕ್ಕೆ ಬರಲು ಅಗತ್ಯವಿರುವ ಬೆಂಬಲ, ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವ ಬಗ್ಗೆ ಸಂದೇಶ ಸಿಕ್ಕಂತಿದೆ. ಹಾಗಾಗಿ ಅವರು ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ಇತರೆ ಎಲ್ಲಾ ನಾಯಕರು ಒಗ್ಗೂಡಿ, ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂಬ ಮಾಹಿತಿ ನಮಗಿದೆ ಎಂದು ಅವರು ಹೇಳಿದರು. ರಾಜ್ಯ ಕಾಂಗ್ರೆಸ್‍ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ, ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಅವರಿಗೆ ರಾಷ್ಟ್ರದ ಬಗ್ಗೆ ಪ್ರೀತಿ, ಗೌರವ ಇಲ್ಲ. ಸಚಿವ ಈಶ್ವರಪ್ಪ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದರೂ ಅವರನ್ನು ಸಂಪುಟದಿಂದ ವಜಾ ಮಾಡಿಲ್ಲ. ಅವರ ಹೇಳಿಕೆ ಸಂಪೂರ್ಣ ತಪ್ಪು, ಕಾಂಗ್ರೆಸ್ ಮಾಡುತ್ತಿರುವ ಹೋರಾಟ ಸರಿಯಾಗಿದೆ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ರಾಜ್ಯದ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೊಶ ವ್ಯಕ್ತಪಡಿಸಿದರು.
ಮೊನ್ನೆ ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆಯಾದಾಗ ಆತನ ಶವಯಾತ್ರೆಯ ಮುಂದಾಳತ್ವ ವಹಿಸಿದ್ದು ಈಶ್ವರಪ್ಪ. ಅಲ್ಲಿ 144 ಸೆಕ್ಷನ್ ಹಾಕಿದ್ದು ಬಿಜೆಪಿ ಸರಕಾರ, ಅದನ್ನು ಉಲ್ಲಂಘನೆ ಮಾಡಿದ್ದು ಬಿಜೆಪಿ ಸರಕಾರದ ಸಚಿವರೆ. ಇದಕ್ಕಾಗಿ ಈಶ್ವರಪ್ಪ ಮೇಲೆ ಒಂದು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಿತ್ತು. ಅದನ್ನೂ ಮಾಡಿಲ್ಲ. ಹಾಗಾಗಿ ನಾವು ರಾಜ್ಯಪಾಲರನ್ನು ಭೇಟಿಯಾಗಿ ಈಶ್ವರಪ್ಪ ಅವರನ್ನು ವಜಾ ಮಾಡುವಂತೆ ಮನವಿ ಪತ್ರ ನೀಡಿದ್ದೆವು ಎಂದು ಅವರು ಹೇಳಿದರು.
ಮೇಲ್ನೋಟಕ್ಕೆ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿರುವುದು ಗೊತ್ತಾಗುತ್ತಿದೆ, ಈ ಕೆಲಸವನ್ನು ಯಾರೇ ಮಾಡಿದರು ಅದು ಅಪರಾಧ. ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದರೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅಥವಾ ಎರಡೂ ಶಿಕ್ಷೆಯನ್ನು ವಿಧಿಸಬಹುದು ಎಂದು ಕಾನೂನಿದೆ. ಜೆ.ಪಿ.ನಡ್ಡಾ ಅವರೇ ಈಶ್ವರಪ್ಪ ಅವರ ರಾಷ್ಟ್ರ ದ್ರೋಹದ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಪಕ್ಷದ ತಾಲೂಕು, ಜಿಲ್ಲೆಗಳ ಕಾರ್ಯಕರ್ತರು ಹೋರಾಟ ಮಾಡಿ, ತಹಶಿಲ್ದಾರರು, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ, ಅದು ಹೀಗೆಯೇ ಮುಂದುವರೆಯುತ್ತೆ ಎಂದು ಸಿದ್ದರಾಮಯ್ಯ ಹೇಳಿದರು.
ಸಂವಿಧಾನ ಉಳಿಸುವುದಕ್ಕಾಗಿ
ಬಿಜೆಪಿಯವರು ನಮ್ಮ ನಾಯಕರ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಅವೆಲ್ಲ ಬರಿ ಸುಳ್ಳು. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ, ಹೀಗಿದ್ದಾಗ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದೇ ಇರುತ್ತೆ, ಭಿನ್ನಾಭಿಪ್ರಾಯವೇ ಇಲ್ಲ ಅಂದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿರಲ್ಲ. ನಾವು ರಾಜ್ಯದ ಜನರ ಮತ್ತು ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ, ನಾವು ಅಧಿಕಾರಕ್ಕೆ ಬರಬೇಕು ಎನ್ನುವುದಕ್ಕಿಂತ ರಾಜ್ಯ ಮತ್ತು ಸಂವಿಧಾನವನ್ನು ಉಳಿಸುವುದಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದಾಗಿದೆ.
-ಸಿದ್ದರಾಮಯ್ಯ, ವಿಪಕ್ಷ ನಾಯಕ