×
Ad

ಅಗ್ರಿ ಗೋಲ್ಡ್ ವಂಚನೆ: ರಾಮನಗರ ಉಪವಿಭಾಗಾಧಿಕಾರಿ ಹಾಜರಿಗೆ ಹೈಕೋರ್ಟ್ ಆದೇಶ

Update: 2022-02-25 23:24 IST

ಬೆಂಗಳೂರು, ಫೆ.25: ಅಗ್ರಿಗೋಲ್ಡ್ ಸಂಸ್ಥೆ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಬಂಧ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿರುವ ರಾಮನಗರ ಉಪವಿಭಾಗಾಧಿಕಾರಿ ಮುಂದಿನ ವಿಚಾರಣೆ ಹಾಜರಾಗಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಮಂಗಳೂರಿನ ಅಗ್ರಿಗೋಲ್ಡ್ ಗ್ರಾಹಕರು ಮತ್ತು ಏಜೆಂಟರ್ ಕಲ್ಯಾಣ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಸಚಿನ್ ವಾದ ಮಂಡಿಸಿ, ಇದೊಂದು ಬಹುರಾಜ್ಯ ಹಗರಣವಾಗಿದ್ದು, ಎಲ್ಲ ಪ್ರಕರಣಗಳ ವಿಚಾರಣೆಗೆ ಒಂದೇ ನ್ಯಾಯಾಲಯ ಸ್ಥಾಪಿಸಲು ನಿರ್ದೇಶಿಸುವಂತೆ ಕೋರಿ ಸರಕಾರ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸುವುದಾಗಿ ಹೇಳಿತ್ತು. ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ ಎಂದರು. 

ಸರಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಈ ಹಿಂದೆ ರಾಮನಗರ ಉಪವಿಭಾಗಾಧಿಕಾರಿ ಕಚೇರಿ ಮಾಹಿತಿಯಂತೆ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಲಾಗಿತ್ತು. ಆದರೆ, ಈ ಕುರಿತಂತೆ ಪರಿಶೀಲಿಸಿದಾಗ ಸುಪ್ರೀಂಕೋರ್ಟ್‍ಗೆ ಯಾವುದೇ ಅರ್ಜಿ ಸಲ್ಲಿಸಿರುವುದು ತಿಳಿದು ಬಂದಿಲ್ಲ ಎಂದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಅಧಿಕಾರಿಯ ತಪ್ಪು ಮಾಹಿತಿಯಿಂದಾಗಿ ಪ್ರಕರಣವನ್ನು ನಾಲ್ಕು ಬಾರಿ ಮುಂದೂಡಲಾಗಿದೆ. ಇದರಿಂದಾಗಿ ಅರ್ಜಿ ವಿಚಾರಣೆಯೂ 6 ತಿಂಗಳು ವಿಳಂಬವಾಗಿದೆ. ಹೀಗಾಗಿ, ತಪ್ಪು ಮಾಹಿತಿ ನೀಡಿದ ರಾಮನಗರ ಉಪ ವಿಭಾಗಾಧಿಕಾರಿ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮಾ.10ಕ್ಕೆ ಮುಂದೂಡಿತು.

ಕಳೆದ ವರ್ಷ ಜು.6ರಂದು ನಡೆದಿದ್ದ ಅರ್ಜಿ ವಿಚಾರಣೆ ವೇಳೆ ಸಕ್ಷಮ ಪ್ರಾಧಿಕಾರದ ಅಧಿಕಾರಿ, ಅಗ್ರಿಗೋಲ್ಡ್ ಕಂಪೆನಿಯ ಅವ್ಯವಹಾರ ಕರ್ನಾಟಕವೂ ಸೇರಿದಂತೆ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿಯೂ ಕಂಡು ಬಂದಿದೆ. ಅಲ್ಲಿಯೂ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಕಂಪೆನಿಗೆ ಸೇರಿದ ಒಟ್ಟು 290 ಆಸ್ತಿಗಳನ್ನು ತೆಲಂಗಾಣ ಸರಕಾರ ಜಪ್ತಿ ಮಾಡಿರುವುದಾಗಿ ತಿಳಿದು ಬಂದಿದೆ.

ಕಂಪೆನಿಯಲ್ಲಿ ಅಂದಾಜು 32 ಲಕ್ಷ ಹೂಡಿಕೆದಾರರಿದ್ದು, ರಾಜ್ಯದ 8.8 ಲಕ್ಷ ಹೂಡಿಕೆದಾರರು ವಿವಿಧ ಶಾಖೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹೀಗಾಗಿ, ಈ ಎಲ್ಲ ಪ್ರಕರಣಗಳ ವಿಚಾರಣೆಗೆ ಒಂದು ನೋಡಲ್ ರಾಜ್ಯ ಎಂಬಂತೆ ಪರಿಗಣಿಸಿ ಒಂದೇ ನ್ಯಾಯಾಲಯ ಸ್ಥಾಪನೆಗೆ ಕೋರಿ ಸುಪ್ರೀಂಕೊರ್ಟ್‍ಗೆ ಅರ್ಜಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದರು. ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದರಿಂದ ಮತ್ತು ಅದನ್ನೇ ಪುನರುಚ್ಚಾರ ಮಾಡಿದ್ದರಿಂದ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಹಲವು ಬಾರಿ ಮುಂದೂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News