×
Ad

ಮೇಕೆದಾಟು: ಎರಡನೇ ಹಂತದ ಪಾದಯಾತ್ರೆಗೆ ರಾಮನಗರದಲ್ಲಿ ಚಾಲನೆ

Update: 2022-02-27 11:28 IST
photo- twitter@siddaramaiah

ಬೆಂಗಳೂರು, ಫೆ. 27: ‘ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಟಾನಕ್ಕೆ ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಹೀಗಾಗಿ ಜನರ ಕುಡಿಯುವ ನೀರಿನ ಹಕ್ಕಿಗಾಗಿ  ಕಾಂಗ್ರೆಸ್ ಪಕ್ಷ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲ  ತಿಳಿಸಿದ್ದಾರೆ.

ರವಿವಾರ ರಾಮನಗರದ ಟಿಆರ್ ಮಿಲ್ ಮೈದಾನದಲ್ಲಿ ಏರ್ಪಡಿಸಿದ್ದ ನಮ್ಮ ನೀರು ನಮ್ಮ ಹಕ್ಕು ಮೇಕೆದಾಟು ಎರಡನೆ ಹಂತದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಾವೇರಿ ನಮ್ಮ ಜೀವ. ನಮ್ಮ ಸಂಸ್ಕøತಿ. ನಮ್ಮ ನೀರು ನಮ್ಮ ಹಕ್ಕು. ಇದು ನಮ್ಮ ಅಧಿಕಾರ. ಇದಕ್ಕಾಗಿ ನಾವು ಹೋರಾಡುತ್ತಿದ್ದೇವೆ. ಎಲ್ಲ ಜಾತಿ, ವರ್ಗಗಳು ಪಕ್ಷಾತೀತವಾಗಿ ಈ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.

‘ಇದು ಉದ್ದುದ್ದ ಭಾಷಣ ಮಾಡುವ ದಿನವಲ್ಲ, ಇತಿಹಾಸ ಬರೆಯುವ ದಿನ. ಕಾವೇರಿ ಮಾತ್ರವಲ್ಲ, ಈ ಭೂಮಿ, ನೀರು ನಮಗೆ ಉಳಿಯಬೇಕು. ಅದಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಮೂಲಕ ಹೋರಾಟ ಮಾಡುತ್ತಿದೆ. ನಮ್ಮ ಹೋರಾಟವನ್ನು ತಡೆಯಲು ಬಿಜೆಪಿ ಸರಕಾರ ಪ್ರಯತ್ನಿಸುತ್ತಿದೆ’ ಎಂದು ರಣದೀಪ್ ಸಿಂಗ್ ಸುರ್ಜೆವಾಲ ದೂರಿದರು.

‘ಈ ಸರಕಾರಕ್ಕೆ ನಮ್ಮ ಧ್ವನಿ ಕೇಳಬೇಕು. ಎಲ್ಲರೂ ಒಗ್ಗಟ್ಟಿನ ಮೂಲಕ ಹೋರಾಟ ಮಾಡಿದರೆ ನಮ್ಮ ನೀರು ನಮಗೆ ಸಿಕ್ಕೆ ಸಿಗುತ್ತದೆ. ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಟಾನಗೊಳ್ಳುವವರೆಗೂ ಕಾಂಗ್ರೆಸ್ ಪಕ್ಷ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವ ಪ್ರಶ್ನೆಯೆ ಇಲ್ಲ’ ಎಂದು ಅವರು ತಿಳಿಸಿದರು.

ಪಾದಯಾತ್ರೆ ಬಿಸಿ ಸರಕಾರಕ್ಕೆ ತಟ್ಟಬೇಕು: ‘ಮೇಕೆದಾಟು ಅಣೆಕಟ್ಟು ಯೋಜನೆ ಆಗಲೇಬೇಕು. ಇದೊಂದು ಸಮನಾಂತರ ಜಲಾಶಯ. 67 ಟಿಎಂಸಿ ನೀರು ಇದರಿಂದ ಸಿಗಲಿದ್ದು, 400 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗಲಿದೆ. ಇದಕ್ಕೆ ಕೇಂದ್ರ ಸರಕಾರ ಅನುಮತಿ ನೀಡಬೇಕು. ರಾಜ್ಯ ಸರಕಾರ ಯೋಜನೆ ಕೈಗೆತ್ತಿಕೊಳ್ಳಬೇಕು’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ರಾಜ್ಯ ಸರಕಾರ ಉದ್ದೇಶಿತ ಯೋಜನೆ ಕೈಗೆತ್ತಿಕೊಳ್ಳದಿದ್ದರೆ ರಾಜ್ಯದ ಜನರಿಗೆ ಮೋಸ ಮಾಡಿದಂತೆ ಆಗುತ್ತದೆ. ಯೋಜನೆಗೆ ಆಗ್ರಹಿಸಿ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಪಾದಯಾತ್ರೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಐದು ದಿನಗಳ ಕಾಲ ಪಾದಯಾತ್ರೆ ಮಾಡಿಯೇ ತೀರುತ್ತೇವೆ. ಸರಕಾರಕ್ಕೆ ಇದರ ಬಿಸಿ ತಟ್ಟಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ‘ಮೊದಲ ಹಂತದ ಪಾದಯಾತ್ರೆಯ ಜನಬೆಂಬಲ ನೋಡಿ ಸರಕಾರ ಕೋವಿಡ್ ಸೋಂಕಿನ ನೆಪದಲ್ಲಿ ನೀಡಿ ಪಾದಯಾತ್ರೆಯನ್ನು ನಿಲ್ಲಿಸಿದರು. ಅಂದು ಪ್ರತಿಜ್ಞೆ ಮಾಡಿದಂತೆ ಮತ್ತೆ ಕಾವೇರಿ ಮಾತೆಯ ರಕ್ಷಣೆಗೆ ಹೆಜ್ಜೆ ಇಡುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ನಗರದಲ್ಲಿ 2050ರ ಹೊತ್ತಿಗೆ ನೀರಿನ ಹಾಹಾಕಾರ ಆರಂಭವಾಗುತ್ತದೆ. ಮುಂದಾಲೋಚನೆಯಿಂದ ಮೇಕೆದಾಟು ಯೋಜನೆ ಅವಕಾಶಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಇದಕ್ಕೆ ತಮಿಳುನಾಡು ಅಡ್ಡಗಾಲು ಹಾಕಿಲ್ಲ. ಆದರೆ, ಬಿಜೆಪಿಯವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ನಮ್ಮ ಅವಧಿಯಲ್ಲಿಯೇ ಈ ಯೋಜನೆಗೆ ಡಿಪಿಆರ್ ಆಗಿತ್ತು. ಆದರೂ ಇಲ್ಲಿಯವರೆಗೆ ಕಾರ್ಯಗತ ಮಾಡಿಲ್ಲ. ಡಬ್ಬಲ್ ಎಂಜಿನ್ ಸರಕಾರವಿದ್ದರೂ ಈ ಯೋಜನೆ ಜಾರಿಗೆ ಬಂದಿಲ್ಲ. ಕುಡಿಯುವ ನೀರಿನ ಈ ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ ಎಂದರು.

ನಮ್ಮ ಪಾದಯಾತ್ರೆಯನ್ನು ಹತ್ತಿಕ್ಕುವ ಕೆಲಸವನ್ನು ಸರಕಾರ ಮಾಡಿದೆ. ಆದರೆ, ನಾವು ಯೋಜನೆ ಜಾರಿಗಾಗಿ ಆಗ್ರಹಿಸಿ ಎರಡನೆ ಹಂತದ ಹೋರಾಟವನ್ನು ಕೈಗೆತ್ತಿಕೊಂಡಿದ್ದೇವೆ. ಐದು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ ಎಂದು ಡಿ.ಕೆ.ಸುರೇಶ್ ಇದೇ ವೇಳೆ ಹೇಳಿದರು.

ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಂಸದ ಧೃವ ನಾರಾಯಣ್, ಮಾಜಿ ಸಚಿವ ಚಲುವರಾಯಸ್ವಾಮಿ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾಂಗ್ರೆಸ್ ಮುಖಂಡರು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News