ಹನೂರು: ಆನೆ ದಾಳಿಗೆ ವ್ಯಕ್ತಿ ಬಲಿ
ಹನೂರು : ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹುತ್ತೂರು ಬೀಟ್‌ನ ಮಸಿಭೋವಿ ದೊಡ್ಡಿಯ ಕೊಪ್ಪ ಅರಣ್ಯ ಪ್ರದೇಶದಲ್ಲಿ ಆನೆ ದಾಳಿಯಿಂದ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಡೆದಿದೆ .
ಮೃತ ವ್ಯಕ್ತಿಯನ್ನು ಹುತ್ತೂರು ಗ್ರಾಮದ ಪುಟ್ಟಮಾದನಾಯ್ಕ( 65 ) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಪುಟ್ಟಮಾದನಾಯ್ಕ ಎಂಬವರು ಕೊಪ್ಪ ಅರಣ್ಯ ಪ್ರದೇಶದ ಅಂಚಿನಲ್ಲಿ ಜಮೀನನ್ನು ಹೊಂದಿದ್ದು , ಹಸುಗಳನ್ನು ಮೇಯಲು ಬಿಟ್ಟು ಮನೆಗೆ ವಾಪಾಸ್ಸಾಗಿದ್ದರು . ಮಧ್ಯಾಹ್ನ ಹಸುಗಳನ್ನು ಕರೆತರಲು ಜಮೀನಿನತ್ತ ತೆರಳಿದ್ದ ವೇಳೆ ಕಾಡಾನೆಯೊಂದು ಇವರ ಮೇಲೆ ದಾಳಿ ನಡೆಸಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರಾತ್ರಿಯಾದರೂ ಇವರು ಮನೆಗೆ ಬಾರದ ಹಿನ್ನಲೆ ಭಯಭೀತಿಗೊಂಡ ಕುಟುಂಬಸ್ಥರು ಜಮೀನಿನತ್ತ ತೆರಳಿದ್ದರು . ಈ ವೇಳೆ ಪುಟ್ಟಮಾದನಾಯ್ಕ ಆನೆ ದಾಳಿಯಿಂದ ಮೃತಪಟ್ಟರುವುದು ಗಮನಕ್ಕೆ ಬಂದಿದೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳದಲ್ಲಿಯೇ ಮೃತದೇಹವನ್ನು ಮರಣೋತ್ತರ ಪರೀಕ್ಷೆ ವಾರಸುದಾರರಿಗೆ ನೀಡಲಾಯಿತು . ಈ ವೇಳೆ ಮೃತನ ಕುಟುಂಬಸ್ಥರು ಪರಿಹಾರ ನೀಡುವಂತೆ ಒತ್ತಾಯಿಸಲಾಗಿದ್ದು , ಅರಣ್ಯ ಇಲಾಖೆಯ ಅಧಿಕಾರಿಗಳು ಅಗತ್ಯ ಭರವಸೆ ನೀಡಿದ್ದಾರೆ