ಒಬಿಸಿ ಮೀಸಲಾತಿ ಇಲ್ಲದೇ ಜಿ.ಪಂ, ತಾ.ಪಂ ಚುನಾವಣೆ ನಡೆಸಲಾಗಲ್ಲ: ಸಚಿವ ಈಶ್ವರಪ್ಪ
ಕಲಬುರಗಿ, ಫೆ. 27: ‘ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಾಗಿ ಮೀಸಲಾತಿ ಬಗ್ಗೆ ಅಂತಿಮ ನಿರ್ಣಯ ಹೊರಬಿದ್ದ ಬಳಿಕ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಬಿಸಿ ಮೀಸಲಾತಿ ಇಲ್ಲದೆ ಚುನಾವಣೆ ನಡೆಸಬಾರದೆಂಬುದು ನಮ್ಮ ತೀರ್ಮಾನ. ಈ ಬಗ್ಗೆ ಸಿಎಂ ಬೊಮ್ಮಾಯಿ ಹಾಗೂ ಕಾನೂನು ತಜ್ಞರ ಜೊತೆ ಚರ್ಚಿಸಿದ್ದೇವೆ’ ಎಂದರು.
‘ಕಾಂಗ್ರೆಸ್ ಪಾದಯಾತ್ರೆ ಮಾಡುವುದಕ್ಕೆ ನಮ್ಮ ಯಾವುದೇ ಅಭ್ಯಂತರ ಇಲ್ಲ. ಆದರೆ, ಅವರು ಇದನ್ನೇ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಮೇಕೆದಾಟು ಅಣೆಕಟ್ಟು ಯೋಜನೆಗೆ ಡಿಪಿಆರ್ ಮಾಡಿದ್ದು ಕುಮಾರಸ್ವಾಮಿ ಸರಕಾರ’ ಎಂದು ವಾಗ್ದಾಳಿ ನಡೆಸಿದರು.
‘ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು, ಮೇಕೆದಾಟು ಯೋಜನೆ ಜಾರಿ ಮಾಡಲು ಮುಂದಾಗಿದ್ದೇವೆ. ಕಾಂಗ್ರೆಸ್‍ನವರು ಅಧಿಕಾರದಲ್ಲಿ ಇದ್ದಾಗ ಏಕೆ ಮಾಡಲಿಲ್ಲ. ಆ ವೇಳೆ ಡಿ.ಕೆ.ಶಿವಕುಮಾರ್ ಅವರೇ ಜನಸಂಪನ್ಮೂಲ ಸಚಿವರಾಗಿದ್ದರು ಎಂದು ಟೀಕಿಸಿದರು.