ಹಿಜಾಬ್ ಪ್ರಕರಣ: ಸೋಮವಾರ ಹೈಕೋರ್ಟ್ ತೀರ್ಪು ಸಾಧ್ಯತೆ

Update: 2022-02-27 16:27 GMT

ಬೆಂಗಳೂರು, ಫೆ. 27: ಹಿಜಾಬ್ ನಿರ್ಬಂಧಿಸಿದ್ದ ಕೆಲವು ಕಾಲೇಜುಗಳ ಕ್ರಮ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿಗೆ ಸರಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆಲವು ಮುಸ್ಲಿಮ್ ವಿದ್ಯಾರ್ಥಿನಿಯರು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ಈಗಾಗಲೇ ಹೈಕೋರ್ಟ್‍ನಲ್ಲಿ ಪೂರ್ಣಗೊಂಡಿದ್ದು, ತೀರ್ಪು ಸೋಮವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನ ತ್ರಿಸದಸ್ಯ ನ್ಯಾಯಪೀಠದಲ್ಲಿ ಉಡುಪಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೇಷಮ್ ಹಾಗೂ ಇತರೆ ವಿದ್ಯಾರ್ಥಿನಿಯರ ಪೋಷಕರು ಸಲ್ಲಿಸಿದ್ದ 9 ರಿಟ್ ಅರ್ಜಿಗಳು ಹಾಗೂ 20ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಎಲ್ಲ ಅರ್ಜಿದಾರರ ಪರ ವಕೀಲರ ಹಾಗೂ ಸರಕಾರಿ ಪರ ವಕೀಲರ ವಾದವನ್ನು ಆಲಿಸಿದ್ದ ಹೈಕೋರ್ಟ್ ಕಳೆದ ಶುಕ್ರವಾರ ತೀರ್ಪುನ್ನು ಕಾಯ್ದಿರಿಸಿತ್ತು. ಈ ತೀರ್ಪು ಸೋಮವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ.   

ಈ ರಿಟ್ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಝೈಬುನ್ನೀಸಾ ಮೊಹಿಯುದ್ದೀನ್ ತ್ರಿಸದಸ್ಯ ನ್ಯಾಯಪೀಠ ಸತತ 11 ದಿನಗಳ ಕಾಲ ವಿಚಾರಣೆ ನಡೆಸಿ, ವಾದ ಮುಕ್ತಾಯಗೊಳಿಸಿ ತೀರ್ಪುನ್ನು ಕಾಯ್ದಿರಿಸಿದೆ. 

ಹೈಕೋರ್ಟ್ ನ್ಯಾಯಪೀಠವು ಯಾವ ವಕೀಲರು ಬೇಕಾದರೂ ಲಿಖಿತ ವಾದ ಸಲ್ಲಿಸಬಹುದೆಂದು ಆದೇಶಿಸಿದೆ. ಇದರಿಂದ, ವಿಚಾರಣೆ ವಿಳಂಬವಾಗುವ ಸಾಧ್ಯತೆಯೂ ಇದೆ. ಅರ್ಜಿದಾರರ ಪರವಾಗಿ ಮಾಜಿ ಅಡ್ವೊಕೇಟ್ ಜನರಲ್, ಹಿರಿಯ ವಕೀಲ ಪ್ರೊ.ರವಿ ವರ್ಮಕುಮಾರ್, ಹಿರಿಯ ವಕೀಲ ದೇವದತ್ ಕಾಮತ್, ವಕೀಲ ಮುಹಮ್ಮದ್ ತಾಹೀರ್, ಸರಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಸೇರಿ ಹಲವು ವಕೀಲರು ನ್ಯಾಯಪೀಠದ ಮುಂದೆ ವಾದ ಮಂಡನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News