×
Ad

ಬಿಟ್ ಕಾಯಿನ್ ಪ್ರಕರಣ: ಆರೋಪಿಯ ಜಾಮೀನು ರದ್ದುಪಡಿಸಲು ಹೈಕೋರ್ಟ್ ನಕಾರ

Update: 2022-02-28 23:18 IST

ಬೆಂಗಳೂರು, ಫೆ.28: ನಗರದ ವ್ಯಕ್ತಿಯೊಬ್ಬರಿಗೆ ಕ್ರಿಪ್ಟೊ ಕರೆನ್ಸಿ ಬಿಟ್ ಕಾಯಿನ್ ಖರೀದಿ ಹೆಸರಲ್ಲಿ 75 ಲಕ್ಷ ರೂ.  ವಂಚಿಸಿರುವ ಬಿಹಾರ ಮೂಲದ ಆರೋಪಿ ಶಾಂತನು ಸಿನ್ಹಾ ಎಂಬುವರಿಗೆ ವಿಚಾರಣಾ ನ್ಯಾಯಾಲಯ ನೀಡಿರುವ ಜಾಮೀನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣದ ದೂರುದಾರರೂ ಆದ ನಾಗಸಂದ್ರ ನಿವಾಸಿ ಟಿ. ವೆಂಕಟೇಶಮೂರ್ತಿ ಆರೋಪಿಗೆ ನೀಡಿರುವ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್.ಪಿ ಸಂದೇಶ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ಪೀಠ ತನ್ನ ತೀರ್ಪಿನಲ್ಲಿ, ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದೆ. ಇದೇ ಪ್ರಕರಣದ ಇತರೆ ನಾಲ್ವರು ಆರೋಪಿಗಳಿಗೆ ಜಾಮೀನು ನೀಡಲಾಗಿದೆ. 

ಆರೋಪಿ ವಿರುದ್ಧ ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆ ವಿಧಿಸಬಹುದಾದ ಆರೋಪಗಳಿಲ್ಲ. ಹೀಗಾಗಿ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇಡುವ ಅಗತ್ಯವೂ ಕಂಡು ಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಪೂರ್ವಾನುತಿ ಪಡೆಯದೆ ರಾಜ್ಯಬಿಟ್ಟು ತೆರಳುವಂತಿಲ್ಲ.

2 ತಿಂಗಳ ಕಾಲ ಅಥವಾ ದೋಷಾರೋಪ ಪಟ್ಟಿ ಸಲ್ಲಿಕೆ ಆಗುವವರೆಗೂ 15 ದಿನಕ್ಕೊಮ್ಮೆ ತನಿಖಾಧಿಕಾರಿ ಎದುರು ಹಾಜರಾಗಬೇಕು.ಇಂತಹುದೇ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂದು ವಿಚಾರಣಾ ನ್ಯಾಯಾಲಯ ಜಾಮೀನು ನೀಡುವ ವೇಳೆ ಷರತ್ತು ವಿಧಿಸಿದೆ. ಇಂತಹ ಸಂದರ್ಭದಲ್ಲಿ ಜಾಮೀನು ಮಂಜೂರು ಮಾಡಿರುವ ಆದೇಶ ರದ್ದುಪಡಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News