"ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ 90% ವಿದ್ಯಾರ್ಥಿಗಳು ಭಾರತದಲ್ಲಿ ಅರ್ಹತಾ ಪರೀಕ್ಷೆಯಲ್ಲಿ ವಿಫಲರಾದವರು"

Update: 2022-03-01 12:20 GMT

 ಹೊಸದಿಲ್ಲಿ: ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ತೆರಳುವ ಶೇ 90ರಷ್ಟು ಭಾರತೀಯರು ತಮ್ಮ ದೇಶದಲ್ಲಿ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫಲರಾಗಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಅದೇ ಸಮಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ವಿದೇಶಕ್ಕೆ ಏಕೆ ತೆರಳುತ್ತಾರೆಂಬ ಬಗ್ಗೆ ಚರ್ಚಿಸಲು ಇದು ಸೂಕ್ತ ಸಮಯವಲ್ಲ ಎಂದು ಅವರು ಹೇಳಿದ್ದಾರೆ.

 ಕಾನೂನಿನ ಪ್ರಕಾರ, ವಿದೇಶದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುವವರು ಭಾರತದಲ್ಲಿ ವೈದ್ಯರಾಗಿ ಕೆಲಸ ಮಾಡಲು ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆಯಲ್ಲಿ (ಎಫ್‌ಎಂಜಿಇ) ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.

ಉಕ್ರೇನ್‍ನಲ್ಲಿ ಸಿಲುಕಿರುವ ಭಾರತದ ವಿದ್ಯಾರ್ಥಿಗಳನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಅಲ್ಲಿನ ಭಾರತೀಯ ದೂತಾವಾಸದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗಿದೆ.

 ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಉಕ್ರೇನ್ ವಿಚಾರದಲ್ಲಿ ಮತದಾದನಗೈಯ್ಯುವುದರಿಂದ ದೂರವುಳಿದ ಭಾರತದ ಕ್ರಮದ ನಂತರ ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ವದಂತಿಗಳ ಕುರಿತು ಪ್ರತಿಕ್ರಿಯಿಸಿದ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಹರಿದಾಡುತ್ತಿರುವ ವೀಡಿಯೊಗಳ ಸತ್ಯಾಸತ್ಯತೆ ಇನ್ನಷ್ಟೇ ತಿಳಿದು ಬರಬೇಕಿದೆ ಎಂದರು.

ಅದೇ ಸಮಯ ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸಮಸ್ಯೆಯಲ್ಲಿದ್ದಾರೆ ಹಾಗೂ ಪ್ರಮುಖವಾಗಿ ಖಾರ್ಕೀವ್ ಮತ್ತು ಕ್ಯೀವ್‍ನಲ್ಲಿರುವವರು ಆಹಾರ ಮತ್ತು ನೀರು ಪಡೆಯಲು ಕಷ್ಟಪಡುತ್ತಿದ್ದಾರೆ ಎಂಬುದನ್ನು ಅವರು ಒಪ್ಪಿಕೊಂಡರು.

"ನಾವು ಉಕ್ರೇನ್ ಸರಕಾರ ಮತ್ತು ರಷ್ಯಾ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಮತ್ತು ಎಲ್ಲಾ ವಿದ್ಯಾರ್ಥಿಗಳನ್ನು ಶೀಘ್ರ ಭಾರತಕ್ಕೆ ವಾಪಸ್ ಕರೆಸಿಕೊಳ್ಳುತ್ತೇವೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News