ಕುವೈತ್‌ ಯುದ್ಧದ ವೇಳೆ ಭಾರತ ಅತ್ಯಂತ ದೊಡ್ಡ ತೆರವು ಕಾರ್ಯಾಚರಣೆ ನಡೆಸಿತ್ತು: ಕೇಂದ್ರಕ್ಕೆ ನೆನಪಿಸಿದ ಯಶ್ವಂತ್‌ ಸಿನ್ಹ

Update: 2022-03-01 11:21 GMT

ಹೊಸದಿಲ್ಲಿ: ರಷ್ಯಾದ ದಾಳಿಗೆ ತತ್ತರಿಸಿರುವ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ವಿಳಂಬವಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್ ಹಾಗೂ  ತೃಣಮೂಲ ಕಾಂಗ್ರೆಸ್ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

ಸರಕಾರವು "ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ" ಹಾಗೂ  ಪ್ರಧಾನಿ ನರೇಂದ್ರ ಮೋದಿ ಅವರ "ಕೆಲಸ ಕಣ್ಣಿಗೆ ಕಾಣುತ್ತಿಲ್ಲ" ಎಂದು ರಾಹುಲ್ ಗಾಂಧಿ ಆರೋಪಿಸಿದರೆ, 1990 ರಲ್ಲಿ ಕೊಲ್ಲಿ ಯುದ್ಧದ ಸಮಯದಲ್ಲಿ ಭಾರತವು ಅತ್ಯಂತ ದೊಡ್ಡ ತೆರವು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕೈಗೊಂಡಿತ್ತು  ಎಂದು ತೃಣಮೂಲ ಕಾಂಗ್ರೆಸ್‌ನ ಮುಖಂಡ ಯಶವಂತ್ ಸಿನ್ಹಾ ಅವರು ಕೇಂದ್ರ ಸರಕಾರಕ್ಕೆ ನೆನಪಿಸಿದರು.

"ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿಗಳ ಅಂದಾಜು ಸಂಖ್ಯೆ ಕೇವಲ 18,000. ಭಾರತವು ಈ ಹಿಂದೆ ಮಾಡಿದ ಏರ್‌ಲಿಫ್ಟ್‌ಗಳಿಗೆ ಹೋಲಿಸಿದರೆ ಇದು ತುಂಬಾ ದೊಡ್ಡ ಸಂಖ್ಯೆಯಲ್ಲ" ಎಂದು ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಸಿನ್ಹಾ ಹೇಳಿದರು.

"ಭಾರತವು ಆಗಸ್ಟ್ ಮತ್ತು ಅಕ್ಟೋಬರ್ 1990 ರ ನಡುವೆ ಕುವೈತ್‌ನಿಂದ 1,70,000 ಜನರನ್ನು ಸ್ಥಳಾಂತರಿಸಿತ್ತು ಎಂದು ಅವರು ನೆನಪಿಸಿದರು. ಸಂಪೂರ್ಣ ಪ್ರಯತ್ನವನ್ನು ಆ ಸಮಯದಲ್ಲಿ ವಿದೇಶಾಂಗ ಸಚಿವರಾಗಿದ್ದ ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಅವರು ಮೇಲ್ವಿಚಾರಣೆ ಮಾಡಿದ್ದರು'' ಎಂದರು.

"ಉತ್ತರಪ್ರದೇಶದಲ್ಲಿ ಇನ್ನೂ ಚುನಾವಣೆಗಳು ನಡೆಯುತ್ತಿದ್ದರೂ ಭಾರತ ಸರಕಾರ ಅದ್ಭುತ ಕೆಲಸ ಮಾಡಿದೆ ಎಂದು ಪ್ರಚಾರ ಮಾಡಲು ಈ ಸಂದರ್ಭವನ್ನು ಬಳಸಿಕೊಳ್ಳುವುದು ದುರಂತದ ಪರಮಾವಧಿಯಾಗಿದೆ... ಉತ್ತರಪ್ರದೇಶದಲ್ಲಿ ಚುನಾವಣಾ ರ್ಯಾಲಿಗಳಲ್ಲಿ ಪ್ರಧಾನಿ ಈ ಬಗ್ಗೆ ಮಾತನಾಡುವುದು ಉತ್ತಮವಲ್ಲ. ಇದನ್ನು ಮಾಡುವುದು ಸರಕಾರದ ಕರ್ತವ್ಯ'' ಎಂದು ಅವರು ಹೇಳಿದರು.

"ಉಕ್ರೇನ್ ಬಿಕ್ಕಟ್ಟು ಎದುರಾಗುತ್ತಿದೆ ಎಂದು ಸರಕಾರಕ್ಕೆ ತಿಳಿದಿತ್ತು.  ಉಕ್ರೇನ್ ಮೇಲಿನ ವಾಯುಪ್ರದೇಶವು ತೆರೆದಿರುವಾಗ ಹಿಂತಿರುಗಲು ಸಿದ್ಧರಿರುವವರನ್ನು ಕರೆತರಲು ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ವಾಯುಪ್ರದೇಶವನ್ನು ಮುಚ್ಚಿದ ನಂತರವೂ ಉಕ್ರೇನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯು ವಿದ್ಯಾರ್ಥಿಗಳನ್ನು ಬಸ್ ಮೂಲಕ ಹೊರಡುವಂತೆ ವ್ಯವಸ್ಥೆ ಮಾಡಬೇಕಿತ್ತು ಅಥವಾ ನೆರೆಯ ದೇಶಗಳಿಗೆ ಸಾಧ್ಯವಾದಷ್ಟು ಬೇಗ ಯಾವುದೇ ಸಾರಿಗೆ ಲಭ್ಯವಿರಬೇಕಾಗಿತ್ತು" ಎಂದು ಸಿನ್ಹಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News