ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ನೀರು ಒದಗಿಸಲು ಬಿಜೆಪಿ ಸರಕಾರಕ್ಕೆ ಮಾತ್ರ ಸಾಧ್ಯ: ಸಿಎಂ ಬೊಮ್ಮಾಯಿ

Update: 2022-03-01 13:30 GMT
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ.1: ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ನೀರು ಕೊಡುವ ವ್ಯವಸ್ಥೆ ಬಿಜೆಪಿ ಸರಕಾರದಿಂದ ಮಾತ್ರ ಸಾಧ್ಯವಿದೆ ಎನ್ನುವ ವಿಶ್ವಾಸ ಬೆಂಗಳೂರಿನ ಜನತೆಗೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಮಂಗಳವಾರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಚ್‍ಎಸ್‍ಆರ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಅಟಲ್ ಬಿಹಾರಿ ವಾಜಪೇಯಿ ಹೊನಲು ಬೆಳಕಿನ ಸುಸಜ್ಜಿತ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಎತ್ತಿನಹೊಳೆ ಯೋಜನೆಯಲ್ಲಿ ಬೆಂಗಳೂರಿಗೆ ಕುಡಿಯುವ ನೀರಿಗಾಗಿ 2 ಟಿಎಂಸಿ ನೀರನ್ನು ಒದಗಿಸಲು ಡಿಪಿಆರ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಉತ್ತರ ಭಾಗದ ನೀರಿನ ಸಮಸ್ಯೆಯನ್ನು ಇದರಿಂದ ಬಗೆಹರಿಸಲು ಸಾಧ್ಯ. ನಾನು ನೀರಾವರಿ ಸಚಿವನಿದ್ದಾಗ ಮೇಕೆದಾಟು ಯೋಜನೆ 1996ರಲ್ಲಿ ಪ್ರಾರಂಭವಾಯಿತು. ಈಗ ಮಾಡುತ್ತಿರುವ ಪ್ರತಿಭಟನೆಯಿಂದಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

1996ರಲ್ಲಿ ಕರ್ನಾಟಕ ವಿದ್ಯುತ್ ನಿಗಮ ಯೋಜನಾ ವರದಿಯನ್ನು ತಯಾರು ಮಾಡಿತ್ತು. ಅದು ವಿದ್ಯುತ್ ಉತ್ಪಾದನೆಯ ನಾಲ್ಕು ಯೋಜನೆಗಳ ಪೈಕಿ ಮೇಕೆದಾಟು ಒಂದು. ಕೇಂದ್ರ ಸರಕಾರದಿಂದ ಆಗಬೇಕೆಂಬ ಜಿಜ್ಞಾಸೆಗೆ ಒಳಗಾಗಿ ಸ್ವಲ್ಪ ದಿನ ವಿಳಂಬವಾಯಿತು. ಡಿಪಿಆರ್ ಮರುನಾಮಕರಣ ಮಾಡಿ ಒಂದೇ ಸಾರಿ ನೀರು ಸಂಗ್ರಹ ಮಾಡಿದರೆ ಉಳಿಯುತ್ತದೆ ಎಂದು ಡಿಪಿಆರ್‍ಗೆ ಹೊಸ ಸ್ವರೂಪ ನೀಡಿ ಕುಡಿಯುವ ನೀರಿಗೆ ಈ ಯೋಜನೆಯನ್ನು ಸಿದ್ಧಮಾಡಿದ್ದೆವು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. 

ಮುಂದೆ ಬಂದವರು ಅದನ್ನು ಮುಂದುವರೆಸಲಿಲ್ಲ. ಡಿಪಿಆರ್ ಮಾಡದೆ ಐದು ವರ್ಷ ಕಳೆದರು. ಅದನ್ನು ಮಾಡಲು ಸುಲಭವಿತ್ತು. ಅರಣ್ಯ ಮುಳುಗದಂತೆ ನೋಡಿಕೊಂಡು ಬೆಂಗಳೂರಿಗೆ ನೀರು ಒದಗಿಸುವಂತೆ ಮಾಡಬಹುದಿತ್ತು. ಸಮ್ಮಿಶ್ರ ಸರಕಾರ ಬಂದಾಗ ಡಿಪಿಆರ್ ಆಗಿದೆ. ಈಗ ತಮಿಳುನಾಡು ಕರ್ನಾಟಕದ ನಡುವೆ ವಿವಾದವಾಗಿ ಕುಳಿತಿದೆ ಎಂದು ಅವರು ಹೇಳಿದರು.

ಸುಲಭವಾಗಿ ಮಾಡುವುದನ್ನು ಮಾಡದೆ, ಜಟಿಲಗೊಳಿಸಿ ಈಗ ಬೆಂಗಳೂರಿನ ನೀರಿನ ಸಲುವಾಗಿ ಹೋರಾಟ ಮಾಡುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಯಾವ ನೈತಿಕತೆ ಇದೆ. ಇದನ್ನು ಬೆಂಗಳೂರಿನ ಜನ ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ ಯಾರೂ ಕೂಡ ಈ ಹೋರಾಟದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಅವರು ತಿಳಿಸಿದರು.

ನೀರು ಒದಗಿಸುವುದಾದರೆ ಬಿಜೆಪಿ ಸರಕಾರಕ್ಕೆ ಮಾತ್ರ ಸಾಧ್ಯ. ಕಾವೇರಿ 4ನೇ ಹಂತ ಮಾಡಿದ್ದು, 5ನೇ ಹಂತ ಆಗುತ್ತಿದೆ, ಬರುವ ದಿನಗಳಲ್ಲಿ ಮೇಕೆದಾಟಿನಿಂದ ಬೆಂಗಳೂರಿಗೆ ನೀರು ಕೊಡುವ ವ್ಯವಸ್ಥೆ ಬಿಜೆಪಿಯಿಂದ ಮಾತ್ರ ಸಾಧ್ಯವಿದೆ ಎನ್ನುವ ವಿಶ್ವಾಸ ಅವರಿಗೆ ಇದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News