×
Ad

ಶಿವಮೊಗ್ಗ: ಭೀಕರ ಅಗ್ನಿ ದುರಂತ; ತೇಗ, ನೀಲಗಿರಿ ಸೇರಿ 20 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮರಗಳು ಸುಟ್ಟು ಭಸ್ಮ

Update: 2022-03-02 08:17 IST

ಶಿವಮೊಗ್ಗ: ಇಲ್ಲಿನ ಶಾಂತಿನಗರ ಸಮೀಪದ ರಾಗಿಗುಡ್ಡದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ತೇಗ ಮತ್ತು ನೀಲಗಿರಿ ಸೇರಿದಂತೆ 20 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮರಗಳು ಸುಟ್ಟು ಭಸ್ಮವಾಗಿವೆ.

ಅಗ್ನಿಶಾಮಕ ದಳ ಮತ್ತು ಅರಣ್ಯ ರಕ್ಷಕರನ್ನು ಒಳಗೊಂಡ 20 ಮಂದಿಯ ತಂಡ ಐದು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಬೆಟ್ಟದಲ್ಲಿ ಹರಡುತ್ತಿದ್ದ ಬೆಂಕಿಯನ್ನು ಶಮನಗೊಳಿಸುವಲ್ಲಿ ಯಶಸ್ವಿಯಾದರು.

ಇದು ಕಂದಾಯ ಭೂಮಿಯಾಗಿದ್ದರೂ, ಅರಣ್ಯ ಇಲಾಖೆ ಅದನ್ನು ಲೀಸ್ ಆಧಾರದಲ್ಲಿ ಪಡೆದು ಗಿಡ ಮರಗಳನ್ನು ಬೆಳೆಸಿತ್ತು. ಈ ಬೆಟ್ಟದ ಒಟ್ಟು ವಿಸ್ತೀರ್ಣ ಸುಮಾರು 103 ಎಕರೆ. ಈ ಪೈಕಿ 20 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮರ ಸಂಪೂರ್ಣ ಸುಟ್ಟುಹೋಗಿದೆ. ಇದು ಕಾಳ್ಗಿಚ್ಚು ಅಲ್ಲ. ಕೆಲ ಕಿಡಿಗೇಡಿಗಳ ಕೃತ್ಯ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಬೆಟ್ಟದ ಒಂದು ಬದಿಯಲ್ಲಿ ಆರಂಭವಾದ ಬೆಂಕಿ, ಒಣ ಎಲೆಗಳ ಕಾರಣದಿಂದಾಗಿ 25 ಎಕರೆಗೆ ವ್ಯಾಪಿಸಿತ್ತು. ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ತಕ್ಷಣವೇ ಸಿಬ್ಬಂದಿ ಧಾವಿಸಿದ್ದಾರೆ. ಆದರೆ ಗಾಳಿಯ ಕಾರಣದಿಂದ ಬೆಂಕಿಯ ಜ್ವಾಲೆ ವ್ಯಾಪಿಸುತ್ತಿದ್ದುದು ಕಾರ್ಯಾಚರಣೆಗೆ ಸವಾಲಾಯಿತು.

ಐದು ಗಂಟೆಯ ಕಾರ್ಯಾಚರಣೆ ಬಳಿಕ ಅರಣ್ಯ ರಕ್ಷಕರ ನೆರವಿನೊಂದಿಗೆ ಬೆಂಕಿ ನಂದಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News