×
Ad

ಆಳಂದ ಪಟ್ಟಣದಲ್ಲಿ ಸೆಕ್ಷನ್ 144 ಉಲ್ಲಂಘನೆ ಆರೋಪ: 80ಕ್ಕೂ ಹೆಚ್ಚು ಮಂದಿ ವಶಕ್ಕೆ

Update: 2022-03-02 10:23 IST

ಕಲಬುರಗಿ: ಆಳಂದ ಪಟ್ಟಣದಲ್ಲಿ ಜಾರಿಗೊಳಿಸಿರುವ ಸೆಕ್ಷನ್ 144 ಉಲ್ಲಂಘಿಸಿ ಆರೋಪದಲ್ಲಿ ಸುಮಾರು 80ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಕಾರ್ಯಾಚರಣೆ ವೇಳೆ ಮಹಿಳೆಯೋರ್ವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಬೆಳಗ್ಗೆ 5 ಗಂಟೆಯಿಂದ  ಪೊಲೀಸರು ಮನೆಗಳಿಗೆ ನುಗ್ಗಿ ಮಹಿಳೆಯರನ್ನು ನಿಂದಿಸಿ, ಹಲವರನ್ನು ಬಂಧಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಕುರಿತು ಕಾರ್ಯಾಚರಣೆ ನಡೆಯುತ್ತಿದೆ ಎಂದು ಆಳಂದ ಪಿಎಸ್ಐ ಮಾಹಿತಿ ನೀಡಿದ್ದು, ಅಧಿಕೃತವಾಗಿ ಇದುವರೆಗೆ ಎಷ್ಟು ಜನರನ್ನು ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿಲ್ಲ.

ಈ ಕುರಿತು ಶೇಖ್ ರೋಝಾ ದರ್ಗಾದ ನ್ಯಾಯವಾದಿ ವಾಹಾಝ್ ಬಾಬಾ ಮಾತನಾಡಿ, ಯಾವ ರೀತಿಯಲ್ಲಿ ಪೊಲೀಸರು ಆಳಂದ ಪಟ್ಟಣದ ನಿವಾಸಿಗಳ ಮನೆಗಳಿಗೆ ನುಗ್ಗಿ ಸೋಮೋಟೋ ಅಡಿಯಲ್ಲಿ ಜನರನ್ನು ಬಂಧಿಸುತ್ತಿದ್ದಾರೆ ಅದೆ ರೀತಿ ಘಟನೆಗೆ ಕಾರಣಕರ್ತರಾದ ಸಂಸದ ಭಗವಂತ ಖೂಬಾ, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ್ ಮತ್ತಿಮೂಡ್, ಸುಭಾಷ್ ಗುತ್ತೇದಾರ್, ಹರ್ಷಾನಂದ ಗುತ್ತೇದಾರ್ ಮತ್ತು ಪಾದಯಾತ್ರೆಯಲ್ಲಿ ಭಾಗವಹಿಸಿ ಸೆಕ್ಷನ್ 144 ಉಲ್ಲಂಘಿಸಿದ ಬಿಜೆಪಿ ನಾಯಕರನ್ನು ಬಂಧಿಸಿ, ಪಟ್ಟಣದ ಶಾಂತಿ ವ್ಯವಸ್ಥೆ ಭಂಗ ತರುವ ಪ್ರಯತ್ನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಏನಿದು ಘಟನೆ ?

ಮಂಗಳವಾರ ಶಿವರಾತ್ರಿ ನಿಮಿತ್ತ ಆಳಂದ ಪಟ್ಟಣದಲ್ಲಿರುವ ಸೂಫಿ ಸಂತ ಲಾಡ್ಲೇ ಮಶಾಖ್ ದರ್ಗಾದಲ್ಲಿರುವ ರಾಘವ ಚೈತನ್ಯರ ಸಮಾಧಿ ಮೇಲಿರುವ ಶಿವಲಿಂಗದ ಪೂಜೆ ವಿವಾದವು ವಿಕೋಪಕ್ಕೆ ತಿರುಗಿತ್ತು.

ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಹತ್ತು ಮಂದಿ ಮುಸ್ಲಿಮರಿಗೆ ಸಂದಲ್ ಕಾರ್ಯಕ್ರಮ ಮಾಡಲು, ಹತ್ತು ಜನ ಹಿಂದೂಗಳು ಶಿವಲಿಂಗಕ್ಕೆ ಪೂಜೆ ಮಾಡಲು ಅವಕಾಶ ನೀಡುವುದಾಗಿ ಹೇಳಿದ್ದರು.

ಅದರಂತೆ ದರ್ಗಾದೊಳಗೆ ಪೊಲೀಸ್ ಬಂದೋಬಸ್ತಿನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಹತ್ತು ಜನರ ತಂಡ ಹೋಗಿತ್ತು. ಈ ಸಂದರ್ಭ ಆಜ್ಞೆ ಉಲ್ಲಂಘಿಸಿ ದರ್ಗಾದೊಳಗೆ ಹೋದ ಸ್ವಾಮೀಜಿಗಳು, ಸಚಿವರು, ಶಾಸಕರ ತಂಡ, ಪೂಜೆ ಮಾಡಿ ಹೊರಬಂದಿದ್ದರು ಎಂದು ದೂರಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News