×
Ad

ಕೇಂದ್ರ ಸರ್ಕಾರದ ನಿರ್ಲಕ್ಷ್ಯ, ವೈಫಲ್ಯವೇ ನವೀನ್ ಸಾವಿಗೆ ಪ್ರಮುಖ ಕಾರಣ: ಯು.ಟಿ ಖಾದರ್

Update: 2022-03-02 18:37 IST

ಬೆಂಗಳೂರು: 'ಕೇಂದ್ರ ಸರ್ಕಾರದ ನಿರ್ಲಕ್ಷ್ಯ, ವೈಫಲ್ಯವೇ ನವೀನ್ ಅವರ ಸಾವಿಗೆ ಪ್ರಮುಖ ಕಾರಣ. ರಾಜತಾಂತ್ರಿಕತೆ ಹಾಗೂ ವಿದೇಶಾಂಗ ವ್ಯವಹಾರಗಳಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ' ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ ಖಾದರ್ ಆರೋಪಿಸಿದ್ದಾರೆ.

ಈ ಕುರಿತು  ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,  ನಮ್ಮ ರಾಜ್ಯದಿಂದ ಬಹಳ ವಿದ್ಯಾರ್ಥಿಗಳಿದ್ದರೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಕನ್ನಡಿಗರನ್ನು ಕರೆ ತರುವಲ್ಲಿ ವಿಫಲವಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಕೇವಲ ಪ್ರಚಾರ ವಿಚಾರದಲ್ಲಿ ಗಮನಹರಿಸುತ್ತಿದೆಯೇ ಹೊರತು, ಮಾಡಬೇಕಿರುವ ಕೆಲಸದ ಬಗ್ಗೆ ಯೋಚಿಸುತ್ತಿಲ್ಲ. ಈ ಯುದ್ಧ ಕುವೈತ್ ಮೇಲೆ ಆದ ರಾತ್ರೋರಾತ್ರಿ ಆದ ಯುದ್ಧವಲ್ಲ. ಕುವೈತ್ ಮೇಲೆ ಏಕಾಏಕಿ ದಾಳಿ ಆದಾಗಲೂ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿತ್ತು. ನಾಗರೀಕ ದಂಗೆ ಎದ್ದಾಗ ರಕ್ಷಣೆ ಕಷ್ಟ. ಲಿಬಿಯಾದಲ್ಲಿ ನಾಗರೀಕ ದಂಗೆ ಎದ್ದಾಗಲೂ  ಮನಮೋಹನ್ ಸಿಂಗ್ ಅವರ ಸರ್ಕಾರ ಭಾರತೀಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಆಗ ಯಾವುದೇ ಪ್ರಚಾರ ಮಾಡಲಿಲ್ಲ ಎಂದರು.

ಆದರೆ ಇದು ಎರಡು ದೇಶದ ಇದು ಅಂತಾರಾಷ್ಟ್ರೀಯ ಯುದ್ಧ. ಈಗ ಪ್ರಯಾಣಿಕರ ವಿಮಾನಕ್ಕೆ ರಕ್ಷಣೆಯಾಗಿ ಜೆಟ್ ವಿಮಾನಗಳನ್ನು ಕಳುಹಿಸುವ ಸೌಕರ್ಯಗಳಿದ್ದರೂ ಕೇಂದ್ರ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಪ್ರತಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂಬ ಕಾರಣಕ್ಕೆ ನಾವು ಆರಂಭದಲ್ಲಿ ಮಾತನಾಡಿರಲಿಲ್ಲ. ಆದರೆ ನಮ್ಮ ರಾಜ್ಯದ ಸಹೋದರ ಮೃತಪಟ್ಟಿರುವಾಗ ಇವರ ವೈಫಲ್ಯವನ್ನು ಪ್ರಶ್ನೆ ಮಾಡಲೇಬೇಕಾಗುತ್ತದೆ ಎಂದು ಕಿಡಿಗಾರಿದರು.

ಈ ಯುದ್ಧ ನಡೆಯಲಿದೆ ಎಂದು ಒಂದು ತಿಂಗಳ ಮುಂಚಿಯೇ ಗೊತ್ತಾಗಿದೆ. ಮಾಧ್ಯಮಗಳು ಕೂಡ ಯುದ್ಧ ನಡೆಯುವ ಮುನ್ಸೂಚನೆ ಬಗ್ಗೆ ವರದಿ ಮಾಡುತ್ತಲೇ ಇದ್ದವು. ಆದರೆ ಸರ್ಕಾರ ಏನು ಮಾಡುತ್ತಿತ್ತು. ಉಕ್ರೇನ್ ನಲ್ಲಿ ಭಾರತೀಯರು ಎಲ್ಲೆಲ್ಲಿ ಇದ್ದಾರೆ? ಎಂಬ ಮಾಹಿತಿ ಹೊಂದಿತ್ತಾ? ಕೇವಲ ಪತ್ರ ಬರೆದರೆ ಕೆಲಸ ಮುಗಿದುಹೋಯಿತಾ? ಎಂದು ಪ್ರಶ್ನಿಸಿದರು. 

ಕೇಂದ್ರ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಕೈಗೊಂಡ ಕ್ರಮಗಳಾದರೂ ಏನು? 25 ಸಾವಿರ ಇದ್ದ ವಿಮಾನ ಟಿಕೆಟ್ ದರವನ್ನು 1 ಲಕ್ಷಕ್ಕೆ ಹೆಚ್ಚಿಸಲಾಯಿತು. ಆಗ ಸರ್ಕಾರ ಏನು ಮಾಡುತ್ತಿತ್ತು?  ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸಲು ಮುಂದಾಗಲಿಲ್ಲ. ಸರ್ಕಾರಕ್ಕೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯೇ ಇರಲಿಲ್ಲವೇ?  ಈಗ ಭಾರತಕ್ಕೆ ಬಂದಿರುವ ವಿದ್ಯಾರ್ಥಿಗಳು ತಾವೇ ವಿಮಾನ ಟಿಕೆಟ್ ಬುಕ್ ಮಾಡಿಕೊಂಡು ಬಂದಿದ್ದಾರೆ. ಅದರಿಂದ ಪ್ರಚಾರ ಪಡೆಯಲು ನಮ್ಮ ಸಚಿವರು ಬಾಂಬೆ ಹಾಗೂ ದೆಹಲಿಗೆ ಹೋಗಿದ್ದಾರೆ. ಯುದ್ಧದಿಂದ ಪಾರಾಗಿ ಬಂದವರನ್ನು ಮನೆಗೆ ಕಳುಹಿಸುವ ಬದಲು ಇವರ ಭಾಷಣವನ್ನು ಆ ವಿದ್ಯಾರ್ಥಿಗಳು ಕೇಳಬೇಕು. ಇವರಿಗೆ ನಾಚಿಕೆಯಾಗುವುದಿಲ್ಲವೇ? ನೀವು ವಿಫಲ ಆಗಿದ್ದರೂ ಪ್ರಚಾರ ಪಡೆಯುವುದು ದೇಶಕ್ಕೆ ಕಪ್ಪು ಚುಕ್ಕೆ ಎಂದರು.

ಈ ಸರ್ಕಾರ ಮಕ್ಕಳ ಪೋಷಕರಿಗೆ ಸ್ಪಷ್ಟ ಸಂದೇಶ ಕೊಡಬೇಕು. ಅಲ್ಲಿನ ವಿದ್ಯಾರ್ಥಿಗಳನ್ನು ಕರೆತರಲು ಏನಾದರೂ ತಂತ್ರಗಾರಿಕೆ ಇದೆಯಾ? ರೂಪುರೇಷೆ ಇದೆಯಾ? ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು, ಯಾರನ್ನು ಸಂಪರ್ಕಿಸಬೇಕು ಎಂಬ ಕಾರ್ಯಸೂಚಿ ನಿಮ್ಮ ಬಳಿ ಇದೆಯಾ? ಎಂದು ಪ್ರಶ್ನಿಸಿದರು.

ನಮಗೆ ಪೋಷಕರೊಬ್ಬರು ಕರೆ ಮಾಡಿದ್ದರು. ಆಕೆಯ ಪುತ್ರಿ ತಮ್ಮಷ್ಟಕ್ಕೆ ತಾವೇ ಗಡಿ ಭಾಗಕ್ಕೆ ಬಂದರೂ ಅಲ್ಲಿ ಅವರಿಗೆ ಯಾವುದೇ ಸಹಾಯ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇವರು ಕೊಟ್ಟಿರುವ ಸಹಾಯವಾಣಿಯಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ.  ಇವರಿಗೆ ನಿಜವಾಗಿಯೂ ಕಾಳಜಿ ಇದ್ದರೆ ಉಕ್ರೇನ್ ನಲ್ಲಿರು ಎನ್ ಜಿಒ ಸಂಪರ್ಕಿಸಿ ನಮ್ಮ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿ ನೆರವಿಗೆ ಬರುವಂತೆ ಮನವಿ ಮಾಡಬೇಹುದಲ್ಲವೇ? ಈ ಸಂದರ್ಭದಲ್ಲಿ ಅಲ್ಲಿನ ಎನ್ ಜಿಒಗಳು ಸಂತ್ರಸ್ತರ ನೆರವಿಗೆ ನಿಂತಿವೆ. ಈ ರೀತಿ ಅಲ್ಲಿರುವವರಿಗೆ ಇಲ್ಲಿಂದಲೇ ಒಂದು ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಸರ್ಕಾರದ್ದಲ್ಲವೇ? ಎಂದು ವಾಗ್ದಾಳಿ ನಡೆಸಿದರು. 

ಅಂತಿಮ ವರ್ಷದ ವಿದ್ಯಾರ್ಥಿ ನವೀನ್ ನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಕುಟುಂಬದವರಿಗೆ ಕೇವಲ ಸಾಂತ್ವಾನ ಹೇಳಿದರೆ ಸಾಲದು, ನವೀನ್ ವಿದ್ಯಾಭ್ಯಾಸಕ್ಕೆ ಕಟ್ಟಿರುವ ಶುಲ್ಕ ಹಾಗೂ ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ ವಿದ್ಯಾಭ್ಯಾಸ ಮಾಡುವುದೇಕೆ ಎಂಬ ಚರ್ಚೆ ಈಗ ಬೇಡ. ಅಲ್ಲಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವುದು ಪ್ರಮುಖ ಆದ್ಯತೆ ಇರಬೇಕು. ವಿದ್ಯಾರ್ಥಿಗಳನ್ನು ಹೇಗೆ ರಕ್ಷಿಸಬೇಕು ಎಂಬ ತಂತ್ರಗಾರಿಕೆ ಸಿದ್ಧಪಡಿಸಬೇಕು. ಕೇಂದ್ರ ಸರ್ಕಾರ ನಾಲ್ಕು ಮಂತ್ರಿಗಳನ್ನು ಕಳುಹಿಸಿದೆ. ಅವರು ಎಲ್ಲಿಗೆ ಹೋಗಿದ್ದಾರೆ, ಯಾರಿಗೂ ಗೊತ್ತಿಲ್ಲ ಎಂದು ತಿಳಿಸಿದರು.

ಫೆಬ್ರವರಿಯಿಂದ ಮಾರ್ಚ್ವರೆಗೂ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ರಕ್ಷಣೆಗೆ ಎಷ್ಟು ವಿಮಾನ ನಿಯೋಜಿಸಿದೆ ಎಂಬ ಮಾಹಿತಿ ನೀಡಲಿ. ನೀವು ಸುಮಾರು 10 ವಿಮಾನ ಕಳುಹಿಸಿದ್ದರು ಪ್ರತಿ ವಿಮಾನದಲ್ಲಿ ಇನ್ನೂರು ಮಂದಿ ಎಂದು ಲೆಕ್ಕ ಹಾಕಿದರೂ 2 ಸಾವಿರ ಮಂದಿಯನ್ನು ಕರೆತಂದರೆ ಹೆಚ್ಚು. ಹಾಗಾದರೆ ಇವರ ಕಾರ್ಯತಂತ್ರ ಏನು? ಎಂದು ಪ್ರಶ್ನಿಸಿದರು. 

ವಿದ್ಯಾರ್ಥಿಗಳ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ನಾವು ಸುಮ್ಮನಿದ್ದೆವು. ನಮ್ಮ ಮದೌನವನ್ನೇ ಬಳಸಿಕೊಂಡು ನೀವು ಮಾಡಿದ್ದೇ ಸರಿ ಎಂದು ನೀವು ನಿಮ್ಮ ಜವಾಬ್ದಾರಿ ಮರೆತರೆ ಸರಿಯಲ್ಲ. ನೀವು ಪ್ರಚಾರ ಎಷ್ಟು ಪಡೆಯುತ್ತಿರೋ ಅದಕ್ಕಿಂತ ಹೆಚ್ಚು ಕೆಲಸ ಮಾಡಬೇಕು. ರಾಜ್ಯ ಸರ್ಕಾರ ವಿದ್ಯಾರ್ಥಿಗಳ ರಕ್ಷಣೆಗೆ ವಿಶೇಷ ತಂಡ ಕಳುಹಿಸಬೇಕು. ಈ ತಂಡದಲ್ಲಿ ನಿವೃತ್ತ ರಾಯಭಾರ ಕಚೇರಿ ಅಧಿಕಾರಿ, ಅಂತಾರಾಷ್ಟ್ರೀಯ ವಿಚಾರ ಬಗ್ಗೆ ಮಾಹಿತಿ ಇರುವ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ಕಳುಹಿಸಬೇಕು ಎಂದು ಸಲಹೆ ನೀಡಿದರು.

ಈ ಎಲ್ಲ ವಿಚಾರಗಳ ಬಗ್ಗೆ ರಾಜ್ಯ ಸರ್ಕಾರ ವಿದ್ಯಾರ್ಥಇಗಳ ಪೋಷಕರಿಗೆ ಸ್ಪಷ್ಟತೆ ನೀಡಬೇಕು. ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರದ Evacuation policy ಏನು ಎಂದು ಪೋಷಕರಿಗೆ ತಿಳಿಸಬೇಕು. ವಿದ್ಯಾರ್ಥಿಗಳು ಎಲ್ಲಿಗೆ ಬರಬೇಕು, ಯಾರನ್ನು ಸಂಪರ್ಕಿಸಬೇಕು, ಅವರು ತವರಿಗೆ ಮರಳಲು ಇರುವ ಅವಕಾಶಗಳೇನು ಎಂಬ ಎಲ್ಲ ಮಾಹಿತಿಗಳನ್ನು ಸರ್ಕಾರ ಪೋಷಕರಿಗೆ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News