ಪ್ರಮುಖ ಇಲಾಖೆಗಳಿಗೆ ನ್ಯಾಯಯುತ ಅನುದಾನ ನೀಡಿ: ಮುಖ್ಯಮಂತ್ರಿ ಬೊಮ್ಮಾಯಿಗೆ ಸಿದ್ದರಾಮಯ್ಯ ಪತ್ರ

Update: 2022-03-02 15:12 GMT

ಬೆಂಗಳೂರು, ಮಾ.2: ಪ್ರಸ್ತುತ ವಾರ್ಷಿಕ ಸಾಲಿನ ಬಜೆಟ್‍ನಲ್ಲಿ ದುಡಿಯುವ ವರ್ಗ ಸೇರಿದಂತೆ ಪ್ರಮುಖರಿಗೆ ನ್ಯಾಯಯುತ ಅನುದಾನವನ್ನು ಒದಗಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಬುಧವಾರ ಈ ಕುರಿತು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಹಿಂದುಳಿದ ವರ್ಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವಜನರಕಲ್ಯಾಣ, ಕೃಷಿ ಮತ್ತು ಪೂರಕ ಇಲಾಖೆಗಳು, ಸಣ್ಣ ಕೈಗಾರಿಕೆಗಳು, ಕುಶಲ ಕರ್ಮಿ ವರ್ಗಗಳು, ದುಡಿಯುವ ವರ್ಗಗಳು ಸೇರಿದಂತೆ ಇನ್ನಿತರರಿಗೂ ಪ್ರಸ್ತುತ ಬಜೆಟ್‍ನಲ್ಲಿ ನ್ಯಾಯಯುತ ಅನುದಾನವನ್ನು ಒದಗಿಸುವಂತೆ ಆಗ್ರಹಿಸಿದ್ದಾರೆ.

ಜನರ ಕಲ್ಯಾಣಕ್ಕೆ ಖರ್ಚು ಮಾಡುವ ಹಣವನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡಲಾಗುತ್ತಿದೆ. 2017-18ರಲ್ಲಿ ರಾಜ್ಯದ ಬಜೆಟ್ ಗಾತ್ರ 18,6561 ಕೋಟಿ. ಇದು 2021-22 ರಲ್ಲಿ 24,6207 ಕೋಟಿಗಳಿಗೆ ಏರಿಕೆಯಾಗಿದೆ. 2017-18ಕ್ಕೆ ಹೋಲಿಕೆ ಮಾಡಿದರೆ 2021-22ರ ಬಜೆಟ್ ಗಾತ್ರ 59,646 ಕೋಟಿಗಳಷ್ಟು ಹೆಚ್ಚಾಗಿದೆ.

ಆದರೆ ಈ 7 ಪ್ರಮುಖ ಕಲ್ಯಾಣ ಇಲಾಖೆಗಳಿಗೆ 2017-18ರಲ್ಲಿ ನಮ್ಮ ಸರಕಾರದ ಅವಧಿಯಲ್ಲಿ 17,102 ಕೋಟಿಗಳನ್ನು ಒದಗಿಸಿದ್ದೆವು. ಆದರೆ 2021-22ರಲ್ಲಿ 14,181 ಕೋಟಿಗಳನ್ನು ಮಾತ್ರ ನೀಡಲಾಗಿದ್ದು, ಒಟ್ಟಾರೆ 2,921 ಕೋಟಿ ರೂಪಾಯಿಗಳನ್ನು ಕಡಿಮೆ ಮಾಡಿದಂತಾಗಿದೆ ಎಂದು ಆರೋಪಿಸಿದ್ದಾರೆ.

ಪರಿಶಿಷ್ಟ ಜಾತಿ, ಪಂಗಡಗಳ ಕಲ್ಯಾಣದ ವಿಷಯದಲ್ಲಿ ರಾಜ್ಯದ ಬಿಜೆಪಿ ಸರಕಾರ ಅನ್ಯಾಯ ಮಾಡುತ್ತಿದ್ದು, 2017-18ಕ್ಕೆ ಹೋಲಿಸಿದರೆ 2021-22ರ ಬಜೆಟ್ ಗಾತ್ರ ಸುಮಾರು 60 ಸಾವಿರ ಕೋಟಿಗಳಷ್ಟು ಹೆಚ್ಚಾಗಿದೆ. 2017-18ಕ್ಕೆ ಹೋಲಿಸಿದರೆ ಶೇ.24.5 ರಷ್ಟು ಬಜೆಟ್ ಗಾತ್ರ ಹೆಚ್ಚಾಗಿದೆ. ಆದರೆ ಇದೇ ಸಮಯದಲ್ಲಿ 20.59 ರಷ್ಟು ಈ 7 ಇಲಾಖೆಗಳಿಗೆ ಅನುದಾನ ಕಡಿಮೆಯಾಗಿದೆ. ಈ ವರ್ಗಗಗಳಿಗೆ ನೀಡುವ ಅನುದಾನವನ್ನು ಕಡಿಮೆ ಮಾಡುವುದನ್ನು ಸಾಧನೆ ಎಂದು ಹೇಳಬೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಕೋವಿಡ್ ನೆಪವನ್ನು ಉಲ್ಲೇಖಿಸುವ ಸರಕಾರವು, ಯಾವ ಕಡೆಯಿಂದ ಲೆಕ್ಕ ಹಾಕಿದರೂ ನಮ್ಮ ರಾಜ್ಯದಲ್ಲಿ 2020ರ ಎಪ್ರಿಲ್‍ನಿಂದ ಇದುವರೆಗೆ ಕೊರೋನ ನಿರ್ವಹಣೆಗಾಗಿ 8ರಿಂದ10 ಸಾವಿರ ಕೋಟಿಗಳು ಮಾತ್ರ ಖರ್ಚು ಮಾಡಲಾಗಿದೆ. ಪಕ್ಕದ ಕೇರಳ ರಾಜ್ಯ 40 ಸಾವಿರ ಕೋಟಿ, ತಮಿಳುನಾಡು 30 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಿವೆ ಎಂದ ಅವರು, ಬಿಜೆಪಿ ಸರಕಾರ ಕೊರೋನ ಹೆಸರು ಹೇಳಿಕೊಂಡು ರೈತರು, ದಲಿತರು, ಹಿಂದುಳಿದವರು, ಮಹಿಳೆಯರು, ಯುವಜನರು, ಕುಶಲಕರ್ಮಿ ವರ್ಗಗಳ ಜನರು ಮತ್ತು ಸಣ್ಣಕೈಗಾರಿಕಾ ಇಲಾಖೆಗಳಿಗೆ  ದೊಡ್ಡ ರೀತಿಯಲ್ಲಿ ಅನುದಾನ ಕಡಿಮೆ ಮಾಡಿದೆ ಎಂದು ದೂರಿದರು.

ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 2017-18ರಲ್ಲಿ 3,112 ಕೋಟಿ ಕೋಟಿ ಕೊಟ್ಟಿದ್ದೆವು. ಈಗ ಆ ಪ್ರಮಾಣ 2,315 ಕೋಟಿಗೆ ಇಳಿಕೆಯಾಗಿದೆ. ಸುಮಾರು 797 ಕೋಟಿ ರೂಗಳಷ್ಟು ಇಳಿಕೆಯಾಗಿದೆ. ಬಿಜೆಪಿ ಸರಕಾರ ಪರಿಶಿಷ್ಟ ಜಾತಿ, ಪಂಗಡ ಮತ್ತು ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ವಿರೋಧಿಗಳು ಅಷ್ಟೆ ಅಲ್ಲ, ಹಿಂದುಳಿದ ವರ್ಗ, ಮಹಿಳೆಯರು, ಯುವಜನರು, ಕುಶಲ ಕರ್ಮಿ ಜಾತಿಗಳ ಜನರಿಗೆ ಮತ್ತು ಕೃಷಿ, ಸಣ್ಣಕೈಗಾರಿಕಾ ಇಲಾಖೆಗಳನ್ನು ದಮನ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಪ್ರಮುಖವಾಗಿ ಹಿಂದುಳಿದ ವರ್ಗಗಳ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಲೆಮಾರಿ, ಅರೆಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ 12 ಕೋಟಿ ರೂಪಾಯಿಗಳನ್ನು ಬಜೆಟ್‍ನಲ್ಲಿ ಮೀಸಲಿರಿಸಲಾಗಿದೆ. ಆದರೆ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ. ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿಗಳು ಆಶ್ರಮ ಶಾಲೆಗಳಲ್ಲಿದ್ದರೆ ಅವರಿಗೆ ಶುಚಿ ಕಿಟ್‍ಅನ್ನು ನೀಡಲಾಗುತ್ತಿತ್ತು. ಸೋಪು, ಬಾಚಣಿಗೆ, ತಲೆಗೆ ಎಣ್ಣೆ ಇತ್ಯಾದಿಗಳಿರುವ ಕಿಟ್ ಅದು. ಇದಕ್ಕಾಗಿ 22 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಒಟ್ಟಾರೆ, ಈ ವರ್ಷದ ಬಜೆಟ್‍ನಲ್ಲಿ ದಲಿತ, ದಮನಿತ, ರೈತ, ಮಹಿಳೆ, ಯುವಜನ, ಪಶುಪಾಲಕ, ಕುಶಲಕರ್ಮಿ ಜಾತಿ, ವರ್ಗಗಳು ಸೇರಿದಂತೆ ಎಲ್ಲ ದುಡಿಯುವ ಜನರಿಗೆ ಆದ್ಯತೆಯನ್ನು ನೀಡಿ ನ್ಯಾಯಯುತ ಅನುದಾನಗಳನ್ನು ನೀಡಬೇಕೆಂದು ಅವರು ಒತ್ತಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News