×
Ad

ಮೇಕೆದಾಟು ಯೋಜನೆಯಲ್ಲಿ ವಿಳಂಬ ಮಾಡಿದ್ದು ಯಾರು: ಕಾಂಗ್ರೆಸ್ ನಾಯಕರಿಗೆ ಸಚಿವ ಗೋವಿಂದ ಕಾರಜೋಳ ಪ್ರಶ್ನೆ

Update: 2022-03-02 21:05 IST

ಬೆಂಗಳೂರು, ಮಾ.2: ಮೇಕೆದಾಟು ಯೋಜನೆ ಕುರಿತು ಸತ್ಯದ ಮಾಹಿತಿ ರಾಜ್ಯ ಸರಕಾರದ ಜಲಸಂಪನ್ಮೂಲ ಇಲಾಖೆಯ ಕಡತಗಳಲ್ಲಿ ಲಭ್ಯವಿದೆ. ಯಾರ ಆಡಳಿತದ ಕಾಲದಲ್ಲಿ ಎಷ್ಟು ವಿಳಂಬವಾಗಿದೆ ಎಂಬ ವಿವರಗಳು ಸಂಪೂರ್ಣವಾಗಿ ಲಭ್ಯವಿವೆ. ಯಾರು ಇದರಲ್ಲಿ ಸುಳ್ಳು ಹೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರದ ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯನ್ನು ಸುಳ್ಳು ಎಂದು ಕಾಂಗ್ರೆಸಿಗರು ಪ್ರತಿಪಾದಿಸುತ್ತಿದ್ದಾರೆ. ಅಧಿಕಾರವಿದ್ದಾಗ ಅವರು ತೋರಿದ ಆಲಸ್ಯತನ ಮತ್ತು ಹೊಣೆಗೇಡಿತನದಿಂದ ರಾಜ್ಯಕ್ಕೆ ಆದ ಅನ್ಯಾಯ ಬಯಲಿಗೆ ಬರುತ್ತದೆ ಎಂದು ಈ ರೀತಿ ಸುಳ್ಳುಗಳನ್ನು ಬಿತ್ತರಿಸುತ್ತಿದ್ದಾರೆ ಎಂದು ಟೀಕಿಸಿದರು. 

ಮೇಕೆದಾಟು ಪಾದಯಾತ್ರೆ ಒಂದು ಯೋಜನೆಯ ಅನುಷ್ಠಾನಕ್ಕೆ ನೈಜವಾದ ಪಾದಯಾತ್ರೆಯಲ್ಲ. ಅದೊಂದು ಪ್ರಚಾರ ಯಾತ್ರೆ. ಆದರೆ, ನಮ್ಮ ಆದ್ಯತೆ ಮೇಕೆದಾಟು, ಮಹಾದಾಯಿ ಹಾಗೂ ಕೃಷ್ಣಾ. ಸದ್ಯ ಈ ಮೂರು ಯೋಜನೆಗಳ ಬಗ್ಗೆ ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣ ಇದೆ. ನಮ್ಮ ವಕೀಲರ ತಂಡ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಾಡುತ್ತಿದೆ. ನಾವು ಕೇಂದ್ರ ಸಚಿವರು, ಸಿಡಬ್ಲ್ಯುಸಿ ಮೇಲೆ ನಿರಂತರ ಒತ್ತಡ ಹೇರುವ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಮೇಕೆದಾಟು ವಿಳಂಬ: 2013ರ ನವೆಂಬರ್‍ನಲ್ಲಿ ಡಿಪಿಆರ್ ತಯಾರಿಸಲು 4ಜಿ ವಿನಾಯಿತಿಗೆ ಅರ್ಜಿ ಸಲ್ಲಿಸಲು 6 ತಿಂಗಳು, 2014ರ ಎಪ್ರಿಲ್‍ನಲ್ಲಿ 4ಜಿ ವಿನಾಯಿತಿ ಅರ್ಜಿ ತಿರಸ್ಕೃತವಾಯಿತು. ಅಕ್ಟೋಬರ್‍ನಲ್ಲಿ ಜಾಗತಿಕ ಟೆಂಡರ್‍ಗೆ ಆಹ್ವಾನ ನೀಡಿದರು. ಇದರಲ್ಲಿ ಇಐ ಟೆಕ್ನಾಲಜೀಸ್ ಕಂಪೆನಿ ಟೆಂಡರ್‍ನಲ್ಲಿ ಭಾಗವಹಿಸಿತು. ಇಲ್ಲಿ 13 ತಿಂಗಳು ವ್ಯರ್ಥವಾಯಿತು ಎಂದು ಅವರು ಹೇಳಿದರು.

2015ರ ನವೆಂಬರ್‍ನಲ್ಲಿ ಮೊತ್ತ ಅಧಿಕವೆಂದು ಟೆಂಡರ್ ತಿರಸ್ಕಾರವಾಯಿತು, ಡಿಸೆಂಬರ್‍ನಲ್ಲಿ  4ಜಿ ವಿನಾಯಿತಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದರು. 2016ರ ಫೆಬ್ರವರಿಯಲ್ಲಿ 4ಜಿ ವಿನಾಯಿತಿಗೆ ಸರಕಾರ ಒಪಿಗೆ ನೀಡಿತು ಹಾಗೂ ಡಿಪಿಆರ್ ತಯಾರಿಸಲು ಇಐ ಟೆಕ್ನಾಲಜೀಸ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿತು ಎಂದು ಅವರು ತಿಳಿಸಿದರು.

2016ರ ಜೂನ್‍ನಲ್ಲಿ 5612 ಕೋಟಿ ರೂ. ಡಿಪಿಆರ್ ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಲಾಯಿತು. 2017ರ ಮಾರ್ಚ್‍ನಲ್ಲಿ ಸರಕಾರದಿಂದ ತಾತ್ವಿಕ ಅನುಮೋದನೆ. ಜೂನ್ ತಿಂಗಳಲ್ಲಿ ಕೇಂದ್ರ ಜಲ ಆಯೋಗಕ್ಕೆ ಡಿಪಿಆರ್ ಶೀರ್ಷಿಕೆಯಡಿ ದಾಖಲೆ ಸಲ್ಲಿಕೆ ಮಾಡಲಾಯಿತು ಎಂದು ಅವರು ಹೇಳಿದರು.

2018ರ ಮಾರ್ಚ್‍ನಲ್ಲಿ ಕೇಂದ್ರ ಜಲ ಆಯೋಗದ ಸೂಚನೆಯಂತೆ ಡಿಪಿಆರ್ ಬದಲಿಗೆ ಪೂರ್ವ ಕಾರ್ಯಸಿದ್ಧತಾ ವರದಿ(ಪಿಎಫ್‍ಆರ್) ಎಂದು ನಾಮಕರಣ. 2019ರ ಜನವರಿ ತಿಂಗಳಲ್ಲಿ ವಿವರವಾದ ಡಿ.ಪಿ.ಆರ್ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಕೆ ಮಾಡಲಾಗಿದೆ. ಈ ರೀತಿ ಈ ಯೋಜನೆಗಾಗಿ ಕಾಂಗ್ರೆಸ್ ಸರಕಾರ ಯಾವ ರೀತಿ ಕಾಲಹರಣ ಮಾಡಿದೆ ಅನ್ನೋದು ದಾಖಲೆಗಳಲ್ಲೆ ಇದೆ ಎಂದು ಗೋವಿಂದ ಕಾರಜೋಳ ಹೇಳಿದರು.

ಮೇಕೆದಾಟು ಪಾದಯಾತ್ರೆ ಉದ್ದಕ್ಕೂ ಕೇವಲ ನಿಂದನಾತ್ಮಕ ಭಾವದ ಮೂದಲಿಕೆಯ ಮಾತುಗಳನ್ನು ಆಡುತ್ತಿರುವ ಕಾಂಗ್ರೆಸಿಗರಿಗೆ ಕರ್ನಾಟಕದ ಮತದಾರರು ಮತ್ತೊಮ್ಮೆ ಪಾಠ ಕಲಿಸುತ್ತಾರೆ. ಕೃಷ್ಣಾ ಕಣಿವೆಯಲ್ಲಿ 2013ರಲ್ಲಿ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದು ಕಾಂಗ್ರೆಸಿಗರು ಕೃಷ್ಣಾ ಕಣಿವೆಯ ಭಾಗಕ್ಕೆ ಅನ್ಯಾಯವೆಸಗಿದರು. ಈಗ ಕಾವೇರಿ ಕಣಿವೆಯಲ್ಲಿ ಪಾದಯಾತ್ರೆ ಮಾಡಿ ಮತ್ತಷ್ಟು ಅನ್ಯಾಯಕ್ಕೆ ಕಾರಣವಾಗುತ್ತಿದ್ದಾರೆ ಎಂದು ಅವರು ದೂರಿದರು.

ವಿರೋಧ ಪಕ್ಷವಾಗಿ ಮಾಡಿದ ಹೋರಾಟದ ಸಂದರ್ಭದಲ್ಲಿ ಮಾಡಲಾದ ಹೇಳಿಕೆಗಳಿಗೆ ಬದ್ಧತೆ ತೋರುವ ಅಥವಾ ಅವುಗಳನ್ನು ಅನುಷ್ಠಾನ ಮಾಡುವ ಜಾಯಮಾನ ಕಾಂಗ್ರೆಸಿನದಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಬ್ರಿಟಿಷ್ ಆಡಳಿತಕ್ಕಿಂತ ಕಾಂಗ್ರೆಸ್ಸಿಗರ ಆಡಳಿತ ಕೆಟ್ಟದಾಗಿದೆ. ಈಗಾಗಲೆ ಜನ ನಿಮ್ಮನ್ನು ಮನೆಗೆ ಕಳುಹಿಸಿದ್ದಾರೆ. 2023ರ ಚುನಾವಣೆ ನಂತರ ಇನ್ನಷ್ಟು ಕೆಳಕ್ಕೆ ಹೋಗುತ್ತೀರಾ, ಆನಂತರ ನಿಮ್ಮ ಅಡ್ರೆಸ್ ಇರುವುದಿಲ್ಲ ಎಂದು ಕಾರಜೋಳ ತಿಳಿಸಿದರು.

ಕೃಷ್ಣಾ ಪಾದಯಾತ್ರೆಯ ಸಂದರ್ಭದಲ್ಲಿ ವಾರ್ಷಿಕ 10 ಸಾವಿರ ಕೋಟಿ ರೂ.ಗಳನ್ನು ಕೃಷ್ಣಾ ಕಣಿವೆಯ ಯೋಜನೆಗಳಿಗೆ ನೀಡುತ್ತೇವೆ ಎಂದು ವಾಗ್ದಾನ ಮಾಡಿ 5 ವರ್ಷಗಳಲ್ಲಿ 7,728 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಿ ಕೃಷ್ಣಾ  ಕಣಿವೆಗೆ ಮಾಡಿದ ಅನ್ಯಾಯ ಇನ್ನೂ ಜನಮನದಲ್ಲಿ ಹಚ್ಚ ಹಸಿರಾಗಿದೆ. ಕೃಷ್ಣಾ  ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗಳಿಗೆ ಕೇವಲ 2370 ಕೋಟಿ ರೂ.ಮಾತ್ರ ಖರ್ಚು ಮಾಡಿದ್ದರು ಎಂದು ಅವರು ದೂರಿದರು.

ರಾಜ್ಯದ ನೀರಾವರಿ ಯೋಜನೆಗಳಲ್ಲಿ ಭಾರತೀಯ ಜನತಾ ಪಕ್ಷ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಕಡತಗಳಲ್ಲಿಯೇ ಲಭ್ಯವಿದೆ. ವಿಶ್ವಾಸಾರ್ಹತೆ ಕೊರತೆಯಿರುವುದು ಕಾಂಗ್ರೆಸಿಗೇ ಹೊರತು ಸರಕಾರಕ್ಕಾಗಲಿ ಅಥವಾ ಬಿಜೆಪಿಗಾಗಲೀ ಅಲ್ಲ ಎಂದು ಅವರು ಹೇಳಿದರು.

ನೀರಿನ ಹಂಚಿಕೆಯಾಗದೆ ನದಿ ಜೋಡನೆಗೆ ಅವಕಾಶವಿಲ್ಲ

ಕೇಂದ್ರ ಸರಕಾರವು ಪ್ರಸ್ತಾಪಿಸಿರುವ ನದಿಗಳ ಜೋಡಣೆ ವಿಚಾರದಲ್ಲಿ, ನಮ್ಮ ರಾಜ್ಯದ ಪಾಲಿನ ನೀರಿನ ಹಂಚಿಕೆ ಅಂತಿಮವಾಗದೆ ನದಿಗಳ ಜೋಡಣೆ ಯೋಜನೆಗೆ ಅವಕಾಶ ನೀಡುವುದಿಲ್ಲ. ಈಗಾಗಲೆ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ.

ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News