3ವರ್ಷ ಕಳೆದರೂ ಅತಿವೃಷ್ಟಿ ಸಂತ್ರಸ್ತರಿಗೆ ನಿವೇಶನ, ಹಕ್ಕುಪತ್ರ ನೀಡಲು ಜಿಲ್ಲಾಡಳಿತ ನಿರ್ಲಕ್ಷ್ಯ: ಆರೋಪ
ಕಳಸ, ಮಾ.2: ಕಳೆದ ಮೂರು ವರ್ಷಗಳ ಹಿಂದೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಸಂತ್ರಸ್ತರಾದ ಕುಟುಂಬಗಳಿಗೆ ಇದುವರೆಗೂ ನಿವೇಶನ ಹಾಗೂ ಹಕ್ಕುಪತ್ರಗಳನ್ನು ನೀಡಿಲ್ಲ ಎಂದು ಆರೋಪಿಸಿ ಬುಧವಾರ ಅತಿವೃಷ್ಟಿ ಸಂತ್ರಸ್ತರು ಪಟ್ಟಣದ ನಾಡಕಚೇರಿ ಎದುರು ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರ ಬೆಂಬಲದೊಂದಿಗೆ ಧರಣಿ ನಡೆಸಿದರು.
ಸಾಮಾಜಿಕ ಕಾರ್ಯಕರ್ತ ರವಿ ರೈ ಹಾಗೂ ಸಿಪಿಐ ಮುಖಂಡ ಗೋಪಾಲ್‍ಶೆಟ್ಟಿ ಮತ್ತಿತರರ ನೇತೃತ್ವದಲ್ಲಿ ಪಟ್ಟಣದ ನಾಡಕಚೇರಿ ಎದುರು ಸಮಾವೇಶಗೊಂಡ ಸಂತ್ರಸ್ಥರು, ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿಯಿಂದ ಮನೆ, ಜಮೀನು ಸೇರಿದಂತೆ ಕುಟುಂಬಸ್ಥರನ್ನು ಕಳೆದುಕೊಂಡ ನಿರಾಶ್ರಿತರಿಗೆ ಜಿಲ್ಲಾಡಳಿತ ನಿವೇಶನ, ಹಕ್ಕುಪತ್ರ ಹಾಗೂ ಮನೆ ಬಾಡಿಗೆ ನೀಡದೇ ಸತಾಯಿಸುತ್ತಿದೆ ಎಂದು ಆರೋಪಿಸಿ ಸರಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅತಿವೃಷ್ಟಿ ಸಂತ್ರಸ್ತರು, ಕಳೆದ ಮೂರು ವರ್ಷಗಳ ಹಿಂದೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಳಸ ಹೋಬಳಿ ವ್ಯಾಪ್ತಿಯ ಚೆನ್ನಡ್ಲು, ಮರಸಣಿಗೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭೂ ಕುಸಿತ ಸಂಭವಿಸಿದ್ದು, ಈ ವೇಳೆ ಹಲವಾರು ಮನೆಗಳು ನೆಲಸಮಗೊಂಡಿದ್ದವು. ಚೆನ್ನಡ್ಲು ಗ್ರಾಮದಲ್ಲಿ ವೇದ ಎಂಬವರ ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯೊಬ್ಬರು ಮನೆಯಲ್ಲಿದ್ದ ವೇಳೆ ಮನೆ ಕುಸಿದು ಅವರು ಮಣ್ಣು ಪಾಲಾಗಿದ್ದರು. ಭೂ ಕುಸಿತ ಸಂಭವಿಸಿದ ಸ್ಥಳದಲ್ಲಿ ಜನವಸತಿ ಸಾಧ್ಯವಿಲ್ಲ ಎಂದು ಹೇಳಿದ್ದ ಜಿಲ್ಲಾಡಳಿತ ಬೇರೆಡೆ ನಿವೇಶನ ನೀಡುವುದಾಗಿ ಹೇಳಿತ್ತು. ಅಲ್ಲದೇ ಸಂತ್ರಸ್ಥರಾದ ಕುಟುಂಬಗಳಿಗೆ ಬೇರೆಡೆ ನಿವೇಶನ, ಮನೆ ಸೌಲಭ್ಯ ಕಲ್ಪಿಸಲಾಗುವುದು. ಅಲ್ಲಿಯವರೆಗೂ ಸಂತ್ರಸ್ಥರು ಬಾಡಿಗೆ ಮನೆಗಳಲ್ಲಿ ವಾಸವಾಗಿರಲು ಸೂಚಿಸಿ ಬಾಡಿಗೆ ಕಟ್ಟಲು 50 ಸಾವಿರ ರೂ. ನೀಡುವುದಾಗಿಯೂ ಸರಕಾರ ಹಾಗೂ ಜಿಲ್ಲಾಡಳಿತ ತಿಳಿಸಿತ್ತು. ಆದರೆ ಇದುವರೆಗೂ ಜಿಲ್ಲಾಡಳಿ ನೀಡಿದ್ದ ಭರವಸೆ ಕೇವಲ ಘೋಷಣೆಯಾಗಿ ಉಳಿದಿದೆ ಎಂದು ಆರೋಪಿಸಿದರು.
ಸದ್ಯ ಕಳಸ ತಾಲೂಕು ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಕಳಸ ಸಮೀಪದ ಕುಂಬಳಡಿಕೆ ಎಂಬಲ್ಲಿ ನಿವೇಶನ ಕಲ್ಪಿಸಲು ಜಾಗ ಗುರುತಿಸಲಾಗಿದ್ದು, ಅಲ್ಲಿ ಸಂತ್ರಸ್ಥರಿಗೆ 17 ನಿವೇಶನಗಳನ್ನೂ ಗುರುತಿಸಲಾಗಿದೆ. ಆದರೆ ಜಾಗ ಗುರುತಿಸಿ 2 ವರ್ಷವಾದರೂ ಇನ್ನೂ ನಿವೇಶನವನ್ನು ಸಂತ್ರಸ್ಥರಿಗೆ ಹಸ್ತಾಂತರ ಮಾಡಿಲ್ಲ. ನಿವೇಶನಕ್ಕೆ ಹಕ್ಕುಪತ್ರಗಳನ್ನೂ ನೀಡಿಲ್ಲ. ಅಲ್ಲದೇ ಸಂತ್ರಸ್ಥರಿಗೆ ಬಾಡಿಗೆ ಹಣವನ್ನೂ ನೀಡಿಲ್ಲ. ಈ ಬಗ್ಗೆ ಹಲವು ಬಾರಿ ಧರಣಿ, ಮನೆ ನೀಡಿದ್ದು, ಈ ವೇಳೆ ಕೇವಲ ಭರವಸೆ ಮಾತ್ರ ಸಿಗುತ್ತಿದ್ದೆಯೇ ಹೊರತು ಭರವಸೆಯನ್ನು ಈಡೇರಿಸುತ್ತಿಲ್ಲ. ಕ್ಷೇತ್ರ ಶಾಸಕ ಎಂ.ಪಿ.ಕುಮಾರಸ್ವಾಮಿ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ನಿರ್ಲಕ್ಷಿಸಿದ್ದಾರೆ. ಪರಿಣಾಮ ವಿವಿಧ ಗ್ರಾಮಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಸಂತ್ರಸ್ತರು ಬಾಡಿಗೆ ಕಟ್ಟಲಾಗದೇ, ಮನೆಯೂ ಸಿಗದೇ ಅತಂತ್ರರಾಗಿದ್ದಾರೆ. ಅತಿವೃಷ್ಟಿ ಸಂತ್ರಸ್ಥರ ಅಳಲನ್ನೂ ಯಾರೂ ಕೇಳುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಕಳಸ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಡಿಸಿ ರಮೇಶ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅತಿವಷ್ಟಿ ಸಂತ್ರಸ್ತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸಂತ್ರಸ್ತರಿಗೆ ಮುಂದಿನ 1 ವಾರದೊಳಗೆ ನಿವೇಶನ ಹಾಗೂ ಹಕ್ಕುಪತ್ರ ನೀಡಲಾಗುವುದು ಎಂದು ಡಿಸಿ ಭರವಸೆ ನೀಡಿದ್ದರು. ಆದರೆ 10 ದಿನ ಕಳೆದರೂ ಇದುವರೆಗೂ ಜಿಲ್ಲಾಧಿಕಾರಿ ತಮ್ಮ ಮಾತಿನಂತೆ ನಡೆದುಕೊಂಡಿಲ್ಲ. ಜಿಲ್ಲಾಡಳಿತ ಹಾಗೂ ಶಾಸಕರ ನಿರ್ಲಕ್ಷ್ಯಕ್ಕೆ ಬೇಸತ್ತು ನಾಡಕಚೇರಿ ಎದುರು ಅನಿರ್ದಿಷ್ಟಾವಧಿಗೆ ಧರಣಿ ಹಮ್ಮಿಕೊಂಡಿದ್ದೇವೆ. ಬೇಡಿಕೆ ಈಡೇರದ ಹೊರತು ಧರಣಿಯನ್ನು ಕೈಬಿಡಲ್ಲ ಎಂದು ಎಚ್ಚರಿಸಿದರು.
ಈ ವೇಳೆ ಧರಣಿನಿರತರು ಹಾಗೂ ಮುಖಂಡರೊಂದಿಗೆ ಸ್ಥಳೀಯ ನಾಡಕಚೇರಿ ಅಧಿಕಾರಿಗಳು ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಿ ವಿಫಲರಾದರು. ಬಳಿಕ ಮೂಡಿಗೆರೆ ತಹಶೀಲ್ದಾರ್ ಅವರು ಮುಖಂಡರೊಂದಿಗೆ ಮೊಬೈಲ್‍ನಲ್ಲಿ ಮಾತನಾಡಿದಾಗ ಮುಖಂಡರು ತಹಶೀಲ್ದಾರ್ ಅವರನ್ನು ತರಾಟೆಗೆ ಪಡೆದರು. ಕೆಲವೇ ದಿನಗಳಲ್ಲಿ ಸಂತ್ರಸ್ಥರಿಗೆ ನಿವೇಶನ, ಹಕ್ಕುಪತ್ರ ಕಲ್ಪಿಸಲು ಕ್ರಮವಹಿಸುವುದಾಗಿ ತಹಶೀಲ್ದಾರ್ ಮನವರಿಕೆ ಮಾಡಿದರೂ ಸಂತ್ರಸ್ತರು, ಮುಖಂಡರು ಇದಕ್ಕೆ ಸೊಪ್ಪು ಹಾಕದೇ ಡಿಸಿ, ಶಾಸಕರು ಸ್ಥಳಕ್ಕೆ ಬಂದು ಸ್ಥಳದಲ್ಲೇ ಹಕ್ಕುಪತ್ರ ನೀಡಿ ಸಂತ್ರಸ್ಥರ ಸಮಸ್ಯೆ ಪರಿಹರಿಸಬೇಕು ಎಂದು ಪಟ್ಟು ಹಿಡಿದು ಧರಣಿಯನ್ನು ಮುಂದುವರಿಸಿದರು.
ಧರಣಿಯಲ್ಲಿ ಸಂತ್ರಸ್ತರಾದ ವೇದಾ, ಅವಿನಾಶ್, ದೂಜ ಕುಮಾರ್, ಸುರೇಶ್, ಸುರೇಶ್ ಕೋಟ್ಯಾನ್, ಮಂಜು, ಅನಿತಾ, ಜಯಲಕ್ಷ್ಮೀ, ಜಗದೀಶ್ ಪೂಜಾರಿ, ಸುಲೋಚನಾ ಸೇರಿದಂತೆ ಚೆನ್ನಡ್ಲು, ಮರಸಣಿಗೆ ಭಾಗದ ಅತಿವೃಷ್ಟಿ ಸಂತ್ರಸ್ಥರೊಂದಿಗೆ ಜೆಡಿಎಸ್ ಮುಖಂಡ ಜ್ವಾಲನಯ್ಯ, ಕಚ್ಚಾನೆ ರತ್ನಾಕರ್, ಬ್ರಹ್ಮದೇವ್, ಹಿನಾರಿ ಸಂತೋಷ್, ಆಟೊ ಸಂಘದ ಜಗದೀಶ್‍ಭಟ್, ಇಡಕಣಿ ಗ್ರಾಪಂ ಜಗಧೀಶ್ ಭಂಡಾರಿ, ಕಾಂಗ್ರೆಸ್ ಮುಖಂಡ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.
ಕಳೆದ ಮೂರು ವರ್ಷಗಳಿಂದ ಸಂತ್ರಸ್ತರಿಗೆ ನಿವೇಶನ, ಹಕ್ಕುಪತ್ರ ಮನೆ ಸೌಲಭ್ಯವನ್ನು ಜಿಲ್ಲಾಡಳಿತ ನೀಡದೇ ಸತಾಯಿಸುತ್ತಿದೆ. ಮೂಡಿಗೆರೆ ಶಾಸಕ ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಅತಿವೃಷ್ಟಿ ಸಂತ್ರಸ್ತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಫೆ.19ರಂದು ಕಳಸಕ್ಕೆ ಬಂದಿದ್ದ ಜಿಲ್ಲಾಧಿಕಾರಿ 1 ವಾರದಲ್ಲಿ ಹಕ್ಕುಪತ್ರ ನೀಡುವುದಾಗಿ ತಿಳಿಸಿದ್ದರು. ಆದರೆ 10 ದಿನ ಕಳೆದರೂ ಕ್ರಮ ಆಗಿಲ್ಲ. ಕಾಣದ ಕೈಗಳು ಹಕ್ಕುಪತ್ರ ನೀಡುವುದನ್ನು ತಡೆಯುತ್ತಿರುವ ಶಂಕೆ ಇದೆ. ಸಂತ್ರಸ್ತರಿಗೆ ಬಾಡಿಗೆ ಮನೆಯ ಹಣವನ್ನೂ ನೀಡಿಲ್ಲ. ಅವರ ಪರಿಸ್ಥಿತಿ ದೇವರಿಗೆ ಪ್ರೀತಿಯಂತಾಗಿದೆ. ಕೆಲ ತಿಂಗಳುಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಆಗ ಸಂತ್ರಸ್ಥರು ಹೇಗೆ ಬದುಕಬೇಕು. ಸಂತ್ರಸ್ತರ ಅತಂತ್ರ ಸ್ಥಿತಿಗೆ ಜಿಲ್ಲಾಡಳಿತ ಹಾಗೂ ಶಾಸಕ ಕುಮಾರಸ್ವಾಮಿಯೇ ಕಾರಣ. ಸಂತ್ರಸ್ತರ ಸ್ಥಿತಿಗೆ ಮರುಗಿ ಕಳಸ ತಾಲೂಕಿನ ಎಲ್ಲ ಸಂಘಟನೆಗಳು, ಪಕ್ಷಗಳು ಪಕ್ಷಬೇಧ ಮರೆತು ಬೆಂಬಲ ನೀಡಿದ್ದಾರೆ. ಸಂತ್ರಸ್ಥರಿಗೆ ನಿವೇಶನ, ಹಕ್ಕುಪತ್ರ ನೀಡದ ಹೊರತು ಧರಣಿಯನ್ನು ಹಿಂಪಡೆಯಲ್ಲ. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಸ್ಥಳದಲ್ಲೇ ಸಂತ್ರಸ್ಥರಿಗೆ ಹಕ್ಕುಪತ್ರ ಹಾಗೂ ಬಾಕಿ ಪರಿಹಾರಧನ, ಬಾಡಿಗೆ ಮನೆ ಹಣವನ್ನು ವಿತರಣೆ ಮಾಡಬೇಕು.
- ಗೋಪಾಲ್‍ಶೆಟ್ಟಿ, ಸಿಪಿಐ ಮುಖಂಡ