ಸಂಸದ ತೇಜಸ್ವಿ ಸೂರ್ಯ ಫೋನ್ ರಿಸೀವ್ ಮಾಡಿಲ್ಲ: ಉಕ್ರೇನ್ ನಲ್ಲಿ ಸಿಲುಕಿದ್ದ ವಿದ್ಯಾರ್ಥಿಯ ಪೋಷಕರ ಆರೋಪ
ಬೆಂಗಳೂರು/ಹೊಸದಿಲ್ಲಿ: ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರಿಗೆ ಮೆಸೇಜ್ ಮಾಡಿದ್ದೆ ಆದರೆ, ಅದಕ್ಕೆ ಇದುವರೆಗೂ ಯಾವುದೇ ರಿಪ್ಲೈ ಮಾಡಿಲ್ಲ, ಫೋನ್ ಮಾಡಿದ್ರೆ ರಿಸೀವ್ ಮಾಡಿಲ್ಲ' ಎಂದು ಉಕ್ರೇನ್ ನಲ್ಲಿ ಸಿಲುಕಿದ್ದ ವಿದ್ಯಾರ್ಥಿಯ ಪೋಷಕರೊಬ್ಬರು ಆರೋಪಿಸಿದ್ದಾರೆ.
ಗುರುವಾರ ಹಂಗೇರಿ ಗಡಿ ಮೂಲಕ ದೆಹಲಿಗೆ ಸುರಕ್ಷಿತವಾಗಿ ಆಗಮಿಸಿರುವ ಬೆಂಗಳೂರು ಮೂಲದ ವಿದ್ಯಾರ್ಥಿ ಅನೀಶ್ ಜಯಂತ್ ಅವರ ತಂದೆ ಹನುಮಂತಯ್ಯ ಎಂಬವರು ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರಕಾರಕ್ಕೆ ಉಕ್ರೇನ್ ಗೆ ಕಾಲಿಡುವ ಧೈರ್ಯವೇ ಇಲ್ಲ: ದೆಹಲಿಗೆ ತಲುಪಿದ ಕನ್ನಡಿಗ ವಿದ್ಯಾರ್ಥಿಯ ಆಕ್ರೋಶ
''ತೇಜಸ್ವಿ ಸೂರ್ಯ ಅವರು ನಮ್ಮ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರು, ಅವರ ಬಗ್ಗೆ ನಮಗೆ ನಿರೀಕ್ಷೆ ಇತ್ತು. ಆದರೆ, ಅವರಿಗೆ ಮೆಸೇಜ್ ಮಾಡಿದ್ದೆ ಆದರೆ, ಅದಕ್ಕೆ ಇದುವರೆಗೂ ಯಾವುದೇ ರಿಪ್ಲೈ ಮಾಡಿಲ್ಲ, ಫೋನ್ ಮಾಡಿದ್ರೆ ರಿಸೀವ್ ಮಾಡಿಲ್ಲ'' ಎಂದು ಹೇಳಿದರು.
'ಅವರು ನಮ್ಮ ಸ್ಥಳೀಯ ಸಂಸದರಾಗಿದ್ದು, ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಅವರಲ್ಲಿ ಕೇಳದೆ ಬೇರೆ ಯಾರಲ್ಲಿ ಕೇಳಬೇಕು ನಾವು? ಎಂಪಿಯಾದವರು ಅವರದ್ದೇ ಸರಕಾರ ಇದ್ದರೂ ಸ್ಪಂದಿಸದೇ ಇದ್ದರೆ ಎಂಪಿಯವರು ಮತ್ತೆ ನಮಗೆ ಯಾಕೆ ಬೇಕಾಗಿತ್ತು?' ಎಂದು ಪ್ರಶ್ನಿಸಿದ್ದಾರೆ.
'ನಾವು ನನ್ನ ಮಗ ಸಿಲುಕಿರುವ ಬಗ್ಗೆ ಸರಕಾರಕ್ಕೆ ದೂರು ಕೊಟ್ಟು 7ದಿನಗಳು ಕಳೆದಿದೆ. ಆದರೆ, 7 ದಿನಗಳ ಬಳಿಕ ರಿಪ್ಲೇ ಮಾಡಿ ವಿಚಾರಿಸುತ್ತಿದ್ದಾರೆ. ಹೀಗಾದ್ರೆ ಮಕ್ಕಳು ಅಲ್ಲಿ ಸತ್ತು ಹೋಗಿರ್ತಾರೆ ಅಷ್ಟೇ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ದಯವಿಟ್ಟು ಉಕ್ರೇನ್ ಸರಕಾರ ಮತ್ತು ರಶ್ಯಾದ ಪುಟಿನ್ ಅವರ ಜೊತೆ ಕೇಂದ್ರ ಸರಕಾರ ತಕ್ಷಣ ಮಾತನಾಡಿ ಅಲ್ಲಿ ಸಿಲುಕಿರುವ ನಮ್ಮ ದೇಶದ ಎಲ್ಲ ವಿದ್ಯಾರ್ಥಿಗಳನ್ನು ವಾಪಸ್ ತರೋದಕ್ಕೆ ಕ್ರಮ ಕೈಗೊಳ್ಳಬೇಕು , ಜೀವ ಹೋಗೋದಕ್ಕಿಂತ ಮುಂಚೆಯಾದರೂ ಅವರನ್ನೆಲ್ಲ ಸುರಕ್ಷಿತವಾಗಿ ಈಚೆಗೆ ತನ್ನಿ' ಎಂದು ಒತ್ತಾಯಿಸಿದರು.