×
Ad

ಇದು ಅಭಿವೃದ್ಧಿ ವಿರೋಧಿ, ಅಡ್ಡ ಕಸುಬಿ ಬಜೆಟ್: ಸಿದ್ದರಾಮಯ್ಯ ಟೀಕೆ

Update: 2022-03-04 20:06 IST

ಬೆಂಗಳೂರು, ಮಾ. 4: ‘ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಮಾಡುತ್ತೇವೆ', ಭವಿಷ್ಯಕ್ಕಾಗಿ ದೃಢ ಹೆಜ್ಜೆ ಇಡುತ್ತೇವೆ' ಎಂದು ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಯವ್ಯಯ ನೋಡಿದ ಮೇಲೆ ಅವರ ಮಾತುಗಳು ಹುಸಿಯಾಗಿವೆ. ಇದು ಅತ್ಯಂತ ನೀರಸ, ಅಭಿವೃದ್ಧಿಯ ವಿರೋಧಿ, ದೂರದೃಷ್ಟಿ ಇಲ್ಲದ ಬಜೆಟ್ ಆಗಿದೆ. ಅತ್ಯಂತ ನಿರಾಶಾದಾಯಕ, ಅಡ್ಡ ಕಸುಬಿ ಆಯವ್ಯಯ. ಈ ಬಜೆಟ್‍ಗೆ ಅಭಿವೃದ್ಧಿಯ ಮುನ್ನೋಟವೇ ಇಲ್ಲ. ಬಿಜೆಪಿಯವರ ಮಾತುಗಳಿಗೆ ಈ ಬಜೆಟ್ ವಿರುದ್ಧವಾಗಿದೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ ಬಳಿಕ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಜೆಟ್ ಎಂದರೆ ಜನರಿಗೆ ಕನಸು ಕಟ್ಟಿಕೊಡುವಂತಿರಬೇಕು, ನಾಡಿನ ಎಲ್ಲ ಜನರ ಭವಿಷ್ಯದ ಮುನ್ಸೂಚನೆಯಂತಿರಬೇಕು. ನಮ್ಮ ಸರಕಾರದ ಅವಧಿಯಲ್ಲಿ ಇಲಾಖಾವಾರು ಮಾಹಿತಿಯನ್ನು ಜನರಿಗೆ ಪಾರದರ್ಶಕವಾಗಿ ಕೊಡುತ್ತಿದ್ದೆವು. ಹಿಂದಿನ ಬಜೆಟ್‍ನಲ್ಲಿ ಯಾವ ಇಲಾಖೆಗೆ ಎಷ್ಟು ಹಣ ನೀಡಿದ್ದೆವು, ಎಷ್ಟು ಖರ್ಚಾಗಿತ್ತು, ಮುಂದೆ ಎಷ್ಟು ನೀಡುತ್ತಿದ್ದೇವೆ, ಹೀಗೆ ಇಲಾಖೆಯ ಪ್ರಗತಿಯನ್ನು ಪಾರದರ್ಶಕವಾಗಿ ನೀಡಿದ್ದೆವು, ಈಗ ಹಾಗಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಮೇಲಿಂದ ವಲಯವಾರು ಬಜೆಟ್ ಮಂಡನೆ ಮಾಡಲು ಆರಂಭಿಸಿದರು. ಇದರಿಂದ ಹಿಂದೆ ಇದ್ದ ಪಾರದರ್ಶಕತೆ ಈಗ ಇಲ್ಲವಾಗಿದೆ' ಎಂದು ಟೀಕಿಸಿದರು.

‘ಬಜೆಟ್‍ನ ಅಂಶಗಳು ತಾವೇ ತಿಳಿಸಿರುವ ‘ಪಂಚಸೂತ್ರ'ಗಳಿಗೆ ತದ್ವಿರುದ್ಧವಾಗಿದೆ. ಸ್ವಾತಂತ್ರ್ಯ ಬಂದ ನಂತರದಿಂದ 2018-19ರ ನಮ್ಮ ಸರಕಾರದ ಕೊನೆಯ ಬಜೆಟ್ ವರೆಗೆ ರಾಜ್ಯದ ಮೇಲಿದ್ದ ಒಟ್ಟು ಸಾಲ 2.42ಲಕ್ಷ ಕೋಟಿ ರೂ., ಮುಂದಿನ ವರ್ಷದ ಮಾರ್ಚ್ ವೇಳೆಗೆ ರಾಜ್ಯದ ಒಟ್ಟು ಸಾಲ 5.18 ಲಕ್ಷ ಕೋಟಿ ಆಗುತ್ತೆ. 2017-18ರಲ್ಲಿ ಸಾಲದ ಮೇಲಿನ ಬಡ್ಡಿ 13ಸಾವಿರ ಕೋಟಿ ರೂ.ಇತ್ತು, ಈಗದು 29ಸಾವಿರ ಕೋಟಿ ರೂ.ಗಳಿಗೂ ಹೆಚ್ಚಾಗಿದೆ. ಅಸಲು ಸೇರಿದರೆ ಸುಮಾರು 45ಸಾವಿರ ಕೋಟಿ ರೂ.ಪ್ರತಿ ವರ್ಷ ಪಾವತಿ ಮಾಡಬೇಕಿದೆ. ಈಗಿನ ಬಜೆಟ್ ಗಾತ್ರ 2,65,720 ಕೋಟಿ ರೂ.ಇದೆ. ಬಿಜೆಪಿ ನಾಲ್ಕು ವರ್ಷಗಳ ಅವಧಿಯಲ್ಲಿ 2,66,000 ಕೋಟಿ ರೂ.ಸಾಲ ಮಾಡಿದೆ' ಎಂದು ಅವರು ಅಂಕಿ-ಅಂಶಗಳನ್ನು ನೀಡಿದರು.

‘ನಮ್ಮ ಐದು ವರ್ಷಗಳ ಆಡಳಿತದಲ್ಲಿ ರಾಜಸ್ವ ಉಳಿಕೆ ಬಜೆಟ್ ಇತ್ತು, ಬಿಜೆಪಿ ಬಂದಮೇಲೆ ರಾಜಸ್ವ ಕೊರತೆ ಆರಂಭವಾಗಿದೆ. ಇದು ನಮ್ಮ ಮತ್ತು ಬಿಜೆಪಿ ಸರಕಾರದ ನಡುವಿನ ವ್ಯತ್ಯಾಸ. ಈಗ ರಾಜಸ್ವ ಕೊರತೆ ಇರುವುದರಿಂದ ಸಾಲ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಆಸ್ತಿ ಸೃಜನೆಗೆ ಹಣ ಖರ್ಚು ಮಾಡುವಂತಾಗಿದೆ. ಮುಂಬರುವ ಸಾಲಿನಲ್ಲಿ 15ಸಾವಿರ ಕೋಟಿ ರೂ.ರಾಜಸ್ವ ಕೊರತೆ ಆಗುತ್ತೆ ಎಂದು ಬಜೆಟ್‍ನಲ್ಲಿ ಹೇಳಿದ್ದಾರೆ. ಕಳೆದ ಬಾರಿ ಬದ್ಧತಾ ಖರ್ಚು ಶೇ.102ರಷ್ಟು ಆಗಿತ್ತು ಎಂದು ಹೇಳಿದ್ದರು, ಆದರೆ ಈ ಬಾರಿ ಅದರ ಬಗ್ಗೆ ಎಲ್ಲೂ ಮಾಹಿತಿ ನೀಡಿಯೇ ಇಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಬದ್ಧತಾ ಖರ್ಚು ಸುಮಾರು ಶೇ.80ರಷ್ಟು ಇತ್ತು. 

ಜಿಎಸ್ಪಿ ವಿಸ್ತರಣೆಗೆ ಒತ್ತಾಯಿಸದ ಹೇಡಿಗಳ ಸರಕಾರ: ಈ ವರ್ಷದ ಜೂನ್ 30ರ ವರೆಗೆ ಮಾತ್ರ ನಮ್ಮ ರಾಜ್ಯಕ್ಕೆ ಜಿಎಸ್ಪಿ ಪರಿಹಾರ ಸಿಗುತ್ತದೆ. ಹಾಗಾಗಿ ಮುಂದಿನ ದಿನಗಳು ಇನ್ನಷ್ಟು ಕಷ್ಟದಾಯಕವಾಗಿರಲಿದೆ. ಇದೇ ಕಾರಣಕ್ಕೆ ಜಿಎಸ್ಪಿ ಪರಿಹಾರವನ್ನು ಇನ್ನೂ ಐದು ವರ್ಷ ಮುಂದುವರೆಸಲು ಕೇಂದ್ರ ಸರಕಾರವನ್ನು ಒತ್ತಾಯ ಮಾಡಿ ಎಂದು ನಾನು ಸಲಹೆ ನೀಡಿದ್ದೆ. ಆದರೆ, ಈ ಬಾರಿಯ ಕೇಂದ್ರದ ಬಜೆಟ್‍ನಲ್ಲಿ ಇದನ್ನು ಮುಂದುವರೆಸುವ ಬಗ್ಗೆ ಯಾವ ಪ್ರಸ್ತಾಪವೂ ಇಲ್ಲ, ರಾಜ್ಯ ಸರಕಾರ ಮೂರು ವರ್ಷ ಮುಂದುವರೆಸಲು ಮನವಿ ಮಾಡಿದ್ದೀವಿ ಎಂದಷ್ಟೇ ಹೇಳಿದೆ. ಒಂದು ವೇಳೆ ಕೇಂದ್ರ ಸರಕಾರ ಜಿಎಸ್ಪಿ ಪರಿಹಾರ ಕೊಡದೆ ಹೋದರೆ ರಾಜಸ್ವ ಸಂಗ್ರಹ ಕಡಿಮೆಯಾಗಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತವೆ. ವರ್ಷಕ್ಕೆ ಸುಮಾರು 10ರಿಂದ 12 ಸಾವಿರ ಕೋಟಿ ರೂ.ನಷ್ಟವಾಗುತ್ತದೆ. ಜಿಎಸ್ಪಿಸಭೆಯಲ್ಲಿ ಎಲ್ಲ ಮುಖ್ಯಮಂತ್ರಿಗಳು ಸೇರಿ ಗಲಾಟೆ ಮಾಡಿ ಇನ್ನೂ 5 ವರ್ಷ ಮುಂದುವರೆಸುವಂತೆ ಒತ್ತಾಯ ಮಾಡಬೇಕಿತ್ತು. ಇವರು ಅದನ್ನು ಮಾಡಿಲ್ಲ. ಇದೇ ಕಾರಣಕ್ಕೆ ನಾನು ಈ ಸರಕಾರವನ್ನು ಹೇಡಿಗಳ ಸರಕಾರ ಎಂದು ಕರೆದದ್ದು. 

ಬಿಜೆಪಿಯವರು ನೀರಾವರಿ ಬಗ್ಗೆ ಬಹಳ ಮಾತಾಡುತ್ತಿದ್ದರು. 2018ರ ನಮ್ಮ ಬಜೆಟ್‍ನಲ್ಲಿ ನೀರಾವರಿ ಯೋಜನೆಗಳಿಗೆ ಇಟ್ಟಿದ್ದ ಹಣ 18,112 ಕೋಟಿ ರೂ. ಈ ಸರಕಾರ ಬಜೆಟ್ ನಲ್ಲಿ ಇಟ್ಟಿರುವ ಹಣ 20,601 ಕೋಟಿ ರೂ., ನಮ್ಮ ಬಜೆಟ್ ಗಾತ್ರ 2.02 ಲಕ್ಷ ಕೋಟಿ ರೂ., ಈಗಿನ ಬಜೆಟ್ ಗಾತ್ರ 2.65 ಲಕ್ಷ ಕೋಟಿ ರೂ., 10ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಬಾಕಿ ಬಿಲ್‍ಗಳಿವೆ. ಅದನ್ನೂ ಕೊಟ್ಟರೆ ಹೊಸ ನೀರಾವರಿ ಯೋಜನೆಗಳಿಗೆ ಉಳಿಯೋದು ಕೇವಲ 10ಸಾವಿರ ಕೋಟಿ ರೂ., ಇದರಲ್ಲಿ ಸಣ್ಣ ನೀರಾವರಿ ಯೋಜನೆಗಳು ಬೇರೆ ಸೇರಿದೆ. ಅದಕ್ಕೆ 3ಸಾವಿರ ಕೋಟಿ ರೂ.ಬೇಕು. ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಬೊಮ್ಮಾಯಿ ಅವರ ಬಡಾಯಿ ಬಜೆಟ್ ಇದು.

‘ಮೇಕೆದಾಟು ಯೋಜನೆ ಜಾರಿಯಾಗಬೇಕೆಂಬುದು ನಮ್ಮ ಒತ್ತಾಯ. ಆದರೆ ಪರಿಸರ ಅನುಮತಿ ಪತ್ರ ಪಡೆಯದೆ ಯೋಜನೆ ಹೇಗೆ ಆರಂಭ ಮಾಡುತ್ತಾರೆ? ಬಜೆಟ್‍ನಲ್ಲಿ ಹಣ ಇಟ್ಟ ಕೂಡಲೆ ಯೋಜನೆ ಆರಂಭ ಆಗುತ್ತಾ? ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಾವ ಸಮಸ್ಯೆ ಇಲ್ಲ. ಆದರೂ ಅದನ್ನೂ ಆರಂಭ ಮಾಡಿಲ್ಲ. ಬಹಳಷ್ಟು ಇಲಾಖೆಗಳಿಗೆ ನಾವು 2018ರ ಬಜೆಟ್‍ನಲ್ಲಿ ಕೊಟ್ಟಷ್ಟು ಹಣವನ್ನೂ ಕೊಟ್ಟಿಲ್ಲ ಎಂದು ದೂರಿದರು.

ಎಸ್ಸಿ-ಎಸ್ಟಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಎಸ್‍ಸಿಪಿ/ಟಿಎಸ್‍ಪಿ ಯೋಜನೆಗೆ ನಾವು ಹಣ ಮೀಸಲಿಡುತ್ತಿದ್ದೆವು. ನಮ್ಮ ಸರಕಾರದ ಬಜೆಟ್‍ನಲ್ಲಿ ಈ ವರ್ಗದವರಿಗೆ 29ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ನೀಡಿದ್ದೆ. ಈ ಸರಕಾರ ನಾಲ್ಕು ವರ್ಷದ ನಂತರ 28ಸಾವಿರ ಕೋಟಿ ರೂ.ನಲ್ಲೇ ಇದೆ. ಬಜೆಟ್ ಗಾತ್ರ ಹೆಚ್ಚಾದಂತೆ ಈ ಯೋಜನೆಗೆ ನೀಡುವ ಹಣವೂ ಹೆಚ್ಚಾಗಬೇಕು. ನನ್ನ ಪ್ರಕಾರ ಈ ಸಲದ ಬಜೆಟ್‍ನಲ್ಲಿ ಕನಿಷ್ಟ 40 ಸಾವಿರ ಕೋಟಿ ರೂ.ಗಳಾದರೂ ಆಗಬೇಕಿತ್ತು. ಹಿಂದುಳಿದ ಜಾತಿಗಳ ಕಲ್ಯಾಣದ ಅನುದಾನ ಕಡಿಮೆಯಾಗಿದೆ, ಇನ್ನು ಅಲ್ಪಸಂಖ್ಯಾತರ ಹೆಸರೇ ಹೇಳಲ್ಲ ಇವರು. ನಮ್ಮ ಸರಕಾರದ 2018ರ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಕಲ್ಯಾಣಕ್ಕಾಗಿ 3,150 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದೆ' ಎಂದು ಸಿದ್ಧರಾಮಯ್ಯ ವಿವರಣೆ ನೀಡಿದರು.

‘ಜಿಎಸ್ಪಿ ಪರಿಹಾರವನ್ನು ಇನ್ನೂ 5ವರ್ಷ ಮುಂದುವರಿಸಲು ಕೇಂದ್ರವನ್ನು ಒತ್ತಾಯ ಮಾಡಿ ಎಂದು ಸಲಹೆ ನೀಡಿದ್ದೆ. ಆದರೆ, ಈ ಬಾರಿಯ ಕೇಂದ್ರದ ಬಜೆಟ್‍ನಲ್ಲಿ ಇದನ್ನು ಮುಂದುವರೆಸುವ ಬಗ್ಗೆ ಯಾವ ಪ್ರಸ್ತಾಪವೂ ಇಲ್ಲ, ರಾಜ್ಯ ಸರಕಾರ 3ವರ್ಷ ಮುಂದುವರೆಸಲು ಮನವಿ ಮಾಡಿದ್ದೇವೆ ಎಂದಷ್ಟೇ ಹೇಳಿದೆ. ಒಂದು ವೇಳೆ ಕೇಂದ್ರಜಿಎಸ್ಪಿ ಪರಿಹಾರ ಕೊಡದೆ ಹೋದರೆ ರಾಜಸ್ವ ಸಂಗ್ರಹ ಕಡಿಮೆಯಾಗಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತವೆ. ವರ್ಷಕ್ಕೆ ಸುಮಾರು 10ರಿಂದ 12 ಸಾವಿರ ಕೋಟಿ ರೂ.ನಷ್ಟವಾಗುತ್ತದೆ. ಜಿಎಸ್ಪಿಸಭೆಯಲ್ಲಿ ಎಲ್ಲ ಸಿಎಂ ಸೇರಿ ಗಲಾಟೆ ಮಾಡಿ ಇನ್ನೂ 5 ವರ್ಷ ಮುಂದುವರಿಸುವಂತೆ ಒತ್ತಾಯ ಮಾಡಬೇಕಿತ್ತು. ಇವರು ಅದನ್ನು ಮಾಡಿಲ್ಲ. ಇದೇ ಕಾರಣಕ್ಕೆ ನಾನು ಈ ಸರಕಾರವನ್ನು ಹೇಡಿಗಳ ಸರಕಾರ ಎಂದು ಕರೆದಿದ್ದೇ'

-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News