ಎಲ್ಲರನ್ನು ಒಳಗೊಳ್ಳುವ, ಅಭಿವೃದ್ದಿಗೆ ಪೂರಕ, ಭರವಸೆಯ ಆಯವ್ಯಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2022-03-04 15:18 GMT

ಬೆಂಗಳೂರು, ಮಾ. 4:‘ಕೋವಿಡ್ ಸಂಕಷ್ಟ, ಆದಾಯ ಕೊರತೆ ನಡುವೆಯೂ ಹೆಚ್ಚಿನ ಮೊತ್ತದ ಬಜೆಟ್ ಮಂಡಿಸಿದ್ದು, ಭರವಸೆ ಈಡೇರುವ ಬಜೆಟ್ ಅನ್ನೇ ಮಂಡಿಸಿದ್ದೇನೆ. ನಮ್ಮ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವ ಬಗ್ಗೆ ಉತ್ತರ ನೀಡಲಿದ್ದು, ಎಲ್ಲರನ್ನೂ ಒಳಗೊಳ್ಳುವ ಭರವಸೆಯ ಆಯವ್ಯಯ ಇದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶುಕ್ರವಾರ ಬಜೆಟ್ ಮಂಡನೆ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್, ನೆರೆ ವಿಕೋಪಗಳಿಂದ ಆರ್ಥಿಕ ಹಿನ್ನಡೆ, 2021-22ರ ಬಳಿಕ ಆರ್ಥಿಕ ಚೇತರಿಕೆ ರಾಜಸ್ವ ಸಂಗ್ರಹ, ಸ್ವೀಕೃತಿಗಳು ನಮ್ಮ ಗುರಿ ಮುಟ್ಟಲಿವೆ. 2022-23ರ ಬಜೆಟ್ ಗಾತ್ರ 2,65,720 ಕೋಟಿ ರೂ.ಆಗಿದೆ. ಇದು ಉತ್ತಮ ಹಣಕಾಸು ನಿರ್ವಹಣೆ' ಎಂದು ತಿಳಿಸಿದರು.

‘ಆರ್ಥಿಕ ಶಿಸ್ತು ಪಾಲನೆ, ಸಂಪನ್ಮೂಲಗಳ ಕ್ರೋಡೀಕರಣ, ಅನಗತ್ಯ ವೆಚ್ಚ ಕಡಿತ ನಮ್ಮ ಗುರಿಯಾಗಿದೆ. ರಾಜಸ್ವ ಸ್ವೀಕೃತಿಗಳು 1,89,888 ಕೋಟಿ ರೂ.ಆಗಿದೆ. ಜಿಎಸ್ಪಿ ಪರಿಹಾರ ಈ ಬಜೆಟ್‍ನಲ್ಲಿ ಲೆಕ್ಕ ಹಾಕಿಕೊಂಡಿಲ್ಲ, ಜಿಎಸ್ಟಿ ಪರಿಹಾರ 11-13 ಸಾವಿರ ಕೋಟಿ ರೂ.ವಾರ್ಷಿಕ ಸಿಕ್ತಿತ್ತು. ಜಿಎಸ್ಪಿ ಪರಿಹಾರ ಬರುವುದು ಈ ವರ್ಷ ನಿಲ್ಲುತ್ತದೆ, ಇನ್ನೂ 3 ವರ್ಷ ಜಿಎಸ್ಟಿ ತೆರಿಗೆ ಪರಿಹಾರ ಮುಂದುವರೆಸಲು ಮನವಿ ಮಾಡಿದ್ದೇವೆ' ಎಂದು ಅವರು ತಿಳಿಸಿದರು.

ಸೂಕ್ಷ್ಮ ಬಜೆಟ್: ನಾನು ಮಂಡಿಸಿರುವುದು ಒಂದು ರೀತಿಯ ಸೂಕ್ಷ್ಮ ಬಜೆಟ್, ಗಿಡ, ಮರ ಪರಿಸರವನ್ನೂ ಗಮನಿಸಿ, ಪ್ರತಿವರ್ಷ ಪರಿಸರ ಎಷ್ಟು ನಷ್ಟವಾಗಲಿದೆ ಎಂದು ಅಧ್ಯಯನ ಮಾಡಿ ಪರಿಸರ ಸ್ನೇಹಿ ಬಜೆಟ್ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ. ಪರಿಸರ ಉಳಿಸುವ ಬಜೆಟ್ ನಾವೇ ಮೊದಲು ಮಾಡುತ್ತಿದ್ದೇವೆ, ಇದು ಸರಕಾರದ ಸೂಕ್ಷ್ಮತೆ ತೋರಿಸಲಿದೆ ಎಂದರು. 

ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆ, ಕೃಷಿಕರಿಗೆ, ದುಡಿಯುವವರಿಗೆ, ಮಹಿಳೆ, ಯುವಜನ, ಹೊಸ ತಂತ್ರಜ್ಞಾನಕ್ಕೆ ಅವಕಾಶ ನೀಡಲಾಗಿದೆ. ಹೊಸ ವಿಚಾರಗಳಿಗೂ ಆದ್ಯತೆ ನೀಡಲಾದ ಬಜೆಟ್ ನಮ್ಮದಾಗಿದೆ. 19 ಸಾವಿರ ಕೋಟಿ ರೂ.ಗೂ ಹೆಚ್ಚಿನ ಬಜೆಟ್ ಅನ್ನು ವಿತ್ತೀಯ ಕೊರತೆ ಮಿತಿಯೊಳಗೆ ಮಂಡಿಸಿದ್ದೇನೆ. ಸರಕಾರಿ ನೌಕರರ ಹಿತಾಸಕ್ತಿ ಈಡೇರಿಸುವ ಜವಾಬ್ದಾರಿ ನಮ್ಮದು, ಸೂಕ್ತ ಸಮಯದಲ್ಲಿ ಸಮಿತಿ ರಚಿಸಲಾಗುತ್ತದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News