×
Ad

ಏಳನೇ ವೇತನ ಆಯೋಗ ಜಾರಿ ಮಾಡದಿರುವುದು ನೌಕರ ವಿರೋಧಿ ಕ್ರಮ: ನೌಕರರ ಒಕ್ಕೂಟ

Update: 2022-03-04 21:49 IST

ಬೆಂಗಳೂರು, ಮಾ. 4: ‘ಸರಕಾರಿ ನೌಕರರಿಗೆ ಏಳನೆ ವೇತನ ಆಯೋಗದ ಕುರಿತಂತೆ ಸರಕಾರ ಭ್ರಮೆ ಹುಟ್ಟಿಸುತ್ತಾ ಹೋರಾಟದ ನೈತಿಕತೆಯನ್ನೇ ಕಳೆದುಕೊಂಡಿರುವ ನೌಕರ ಸಂಘಗಳ ಮಾತುಗಳಿಗೆ ಬಲಿಯಾಗದೆ, ಮುಂದಿನ ದಿನಗಳಲ್ಲಿ ನೌಕರರ ಬೇಡಿಕೆಗಳಿಗಾಗಿ ಇಲಾಖಾ ಸಂಘಗಳು ಮತ್ತು ಕೇಡರ್ ಸಂಘಗಳು ಒಗ್ಗೂಡಿ ಐಕ್ಯ ಹೋರಾಟಕ್ಕೆ ಸಜ್ಜಾಗಬೇಕು' ಎಂದು ಎಂದು ಅಖಿಲ ಕರ್ನಾಟಕ ಸರಕಾರಿ ನೌಕರರ ಒಕ್ಕೂಟವು ಕರೆ ನೀಡಿದೆ.

ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ 2022-23ನೆ ಸಾಲಿನ ಆಯವ್ಯಯ ಸರಕಾರಿ ನೌಕರರಿಗೆ ತೀವ್ರ ನಿರಾಸೆ ಉಂಟು ಮಾಡಿದೆಯಲ್ಲದೆ, ಇದು ನೌಕರ-ವಿರೋಧಿ ಮಾತ್ರವಲ್ಲ, ಜನ-ವಿರೋಧಿ. ಜಂಟಿ ಅಧಿವೇಶನ ಸಂದರ್ಭದಲ್ಲಿ ಶಾಸಕರ ವೇತನ ಸೌಲಭ್ಯವನ್ನು ಯಾವುದೇ ಚರ್ಚೆಯಿಲ್ಲದೆ ಹೆಚ್ಚಳ ಮಾಡಿಕೊಳ್ಳಲು ಅಂಗೀಕಾರ ಮಾಡಲಾಗಿರುತ್ತದೆ. ಕೇಂದ್ರ ಸರಕಾರಿ ನೌಕರರು, ಕೇರಳ, ತೆಲಂಗಾಣ, ತಮಿಳುನಾಡು, ಇನ್ನಿತರ ರಾಜ್ಯಗಳ ವೇತನ ಸೌಲಭ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯ ಸರಕಾರಿ ನೌಕರರು ಅತಿ ಕಡಿಮೆ ವೇತನ ಪಡೆಯುತ್ತಿದ್ದಾರೆ. ಜುಲೈ 2022ಕ್ಕೆ ವೇತನ ಪರಿಷ್ಕರಣೆಯಾಗಿ 5 ವರ್ಷಗಳಾಗುತ್ತದೆ.

ಈ ಹಿನ್ನೆಲೆಯಲ್ಲಿ, ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ವೇತನ ಆಯೋಗ ರಚಿಸುವಂತೆ ಹಾಗೂ ರಾಜಾಸ್ತಾನ ಮಾದರಿಯಂತೆ ಎನ್‍ಪಿಎಸ್ ರದ್ದುಪಡಿಸುವಂತೆ ಒಕ್ಕೂಟವು ಆಗ್ರಹಿಸಿತ್ತು. ಆದರೆ, 2022-23ನೆ ಸಾಲಿನ ಬಜೆಟ್‍ನಲ್ಲಿ ಸರಕಾರಿ ನೌಕರರ ವೇತನ ಪರಿಷ್ಕರಣೆಯ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ. ಬದಲಿಗೆ, ಇಲಾಖೆ/ ನಿಗಮ/ ಮಂಡಳಿಗಳ ವಿಲೀನದ ಹೆಸರಿನಲ್ಲಿ ಹುದ್ದೆಗಳ ಕಡಿತ ಮಾಡುವಂತೆ ತಿಳಿಸಿರುವ ಕರ್ನಾಟಕ ಆಡಳಿತ ಸುಧಾರಣೆಗಳ ಆಯೋಗ-2ರ ಶಿಫಾರಸ್ಸುಗಳನ್ನು ಜಾರಿಗೊಳಿಸುವುದಾಗಿ ಘೋಷಿಸಲಾಗಿದೆ. ಈ ಜನ-ವಿರೋಧಿ ಕ್ರಮವನ್ನು ಒಕ್ಕೂಟವು ಒಕ್ಕೊರಲಿನಿಂದ ಖಂಡಿಸುತ್ತದೆ. 

ಕೋವಿಡ್ 19ರ ಸಂಕಷ್ಟ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ನೌಕರರಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ನೌಕರರ ಬದುಕಿಗೆ ಕಂಟಕವಾಗಿರುವ ಎನ್‍ಪಿಎಸ್ ಪದ್ದತಿ ಮತ್ತು ಆಡಳಿತ ಸುಧಾರಣೆಗಳ ಶಿಫಾರಸ್ಸುಗಳ ವಿರುದ್ದ ಧ್ವನಿ ಎತ್ತದೆ, ಮೂಗಿಗೆ ತುಪ್ಪ ಸವರುವಂತಹ ಮರಣ ಭತ್ಯೆ, ಶಿಶುಪಾಲನಾ ರಜೆ ಇತ್ಯಾದಿಯಂತಹ ಸಣ್ಣಪುಟ್ಟ ಆದೇಶಗಳು, ವೈಭವೋಪೇತ ನೌಕರ ಅತಿಥಿಗೃಹ ನಿರ್ಮಾಣ, ಇತ್ಯಾದಿಗಳು ನೌಕರರ ಹೊಟ್ಟೆ ತುಂಬಿಸುವುದಿಲ್ಲ ಎಂದು ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News