ಕಳಸ: ದಲಿತ ಕುಟುಂಬದ ಹೆಸರಿನಲ್ಲಿರುವ ಗ್ರಾಮ ಠಾಣಾ ಜಾಗ ಕಬಳಿಕೆಗೆ ಹುನ್ನಾರ ಆರೋಪ

Update: 2022-03-04 16:39 GMT

ಚಿಕ್ಕಮಗಳೂರು, ಮಾ.4: ಜಿಲ್ಲೆಯ ಕಳಸ ಪಟ್ಟಣದಲ್ಲಿ ತನ್ನ ತಂದೆಯ ಸ್ವಾಧೀನದಲ್ಲಿರುವ 12/12 ಅಳತೆಯ ಗ್ರಾಮ ಠಾಣಾ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಲ್ಯಾಂಪ್ಸ್ ಸೊಸೈಟಿ ಹುನ್ನಾರ ಮಾಡಿದ್ದು, ಇದಕ್ಕೆ ಗ್ರಾಮ ಪಂಚಾಯತ್ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ನೊಂದ ಕುಟುಂಬದ ಸದಸ್ಯ ಪೃಥ್ವಿ ಆರೋಪಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸ ಪಟ್ಟಣದ ನಿವಾಸಿಯಾಗಿರುವ ಡಿ.ಪಿ.ಮೋಹನ್ ಪರಿಶಿಷ್ಟಜಾತಿ ಸಮುದಾಯದವರಾಗಿದ್ದು, ಪಟ್ಟಣದ ಮೀನು ಮಾರುಕಟ್ಟೆ ರಸ್ತೆಯಲ್ಲಿರುವ ಗಿರಿಜನ ಸೊಸೈಟಿ ಪಕ್ಕದಲ್ಲಿ ಕಳಸ ಗ್ರಾಪಂ ಅಸೆಸ್‍ಮೆಂಟ್ ನಂ.1714ರ 12/12 ಅಳತೆಯ ಗ್ರಾಮಠಾಣಾ ಜಾಗದಲ್ಲಿ ಸುಮಾರು 25 ವರ್ಷಗಳಿಂದ ಚಮ್ಮಾರ ವೃತ್ತಿ ಮಾಡುತ್ತಿದ್ದಾರೆ. ಈ ಜಾಗಕ್ಕೆ ಕಳೆದ 25 ವರ್ಷಗಳಿಂದಲೂ ಕಂದಾಯ ಪಾವತಿ ಮಾಡುತ್ತಿದ್ದು, ವಿದ್ಯುತ್ ಬಿಲ್‍ಅನ್ನೂ ಪಾವತಿ ಮಾಡಲಾಗುತ್ತಿದೆ. ಈ ಜಾಗ ಸದ್ಯ ತನ್ನ ತಂದೆ ಮೋಹನ್ ಅವರ ಸ್ವಾಧೀನದಲ್ಲೇ ಇದ್ದು, ಕರ್ನಾಟಕ ಬ್ಯಾಂಕ್ ವ್ಯಾಪಾರ ವಹಿವಾಟಿಗೆ ಈ ಜಾಗದ ಆಧಾರದ ಮೇಲೆ 1 ಲಕ್ಷ ರೂ. ಸಾಲವನ್ನೂ ನೀಡಿದೆ. ಆದರೆ ಗಿರಿಜನ ಸೊಸೈಟಿಯವರು ಇತ್ತೀಚೆಗೆ ತನ್ನ ತಂದೆಯ ಸ್ವಾಧೀನದಲ್ಲಿರುವ ಜಾಗ ತಮಗೆ ಸೇರಿದ್ದೆಂದು ಹೇಳುತ್ತಾ ಜಾಗವನ್ನು ಖುಲ್ಲಾ ಮಾಡುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಗಿರಿಜನ ಸೊಸೈಟಿ ಪಕ್ಕದಲ್ಲಿ ತನ್ನ ತಂದೆಯ ಸ್ವಾಧೀನದಲ್ಲಿರುವ ಗ್ರಾಮ ಠಾಣಾ ಜಾಗಕ್ಕೆ 2005ರಲ್ಲಿ 1714 ಅಸೆಸ್‍ಮೆಂಟ್ ನಂಬರ್‍ನ ದೃಢೀಕರಣ ಪತ್ರ ನೀಡಿದ್ದು, ಈ ದೃಢೀಕರಣ ಪತ್ರದಲ್ಲಿ 1714 ಅಸೆಸ್‍ಮೆಂಟ್‍ನ ಜಾಗದಲ್ಲಿರುವ ಕಟ್ಟಡ ಮೋಹನ್ ಬಿನ್ ಫಕೀರಪ್ಪ ಎಂಬವರಿಗೆ ಸೇರಿದ್ದು ಎಂದು ಗ್ರಾಪಂ ಅಧಿಕಾರಿಗಳೇ ದೃಢೀಕರಣ ಪತ್ರ ನೀಡಿದ್ದಾರೆ. ಆದರೆ ಸದ್ಯ ಈ ಅಸೆಸ್‍ಮೆಂಟ್ ನಂಬರ್‍ನ ಬಗ್ಗೆ ಮಾಹಿತಿಯನ್ನು ಗ್ರಾಪಂ ಬಳಿ ಮಾಹಿತಿ ಹಕ್ಕಿನಡಿ ಕೇಳಿದರೇ ಮಾಹಿತಿ ಇಲ್ಲ ಎಂಬ ಉತ್ತರ ನೀಡುತ್ತಿದ್ದಾರೆ. ಈ ಮೂಲಕ ಗ್ರಾಪಂ ಅಧಿಕಾರಿಗಳೂ ಗಿರಿಜನ ಸೊಸೈಟಿಯವರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ತನ್ನ ಕುಟುಂಬದ ಸ್ವಾಧೀನದಲ್ಲಿರುವ ಜಾಗವನ್ನು ಗಿರಿಜನ ಸೊಸೈಟಿ ಕಳಸ ಗ್ರಾಪಂ ಸಹಕಾರದೊಂದಿಗೆ ವಶಕ್ಕೆ ಪಡೆಯಲು ನೀಡುತ್ತಿರುವ ಕಿರುಕುಳದ ಬಗ್ಗೆ ತಾಪಂ ಇಒ, ಜಿಪಂ ಸಿಇಒ, ಡಿಸಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಗಿರಿಜನ ಸೊಸೈಟಿಯವರು ತಮ್ಮ ತಂದೆಯ ಸ್ವಾಧೀನದಲ್ಲಿರುವ ಚಪ್ಪಲಿ ಅಂಗಡಿಯ ಜಾಗದ ಸುತ್ತ ಮೂರು ದಿಕ್ಕುಗಳಲ್ಲೂ ಮಣ್ಣು ತೆಗೆದು ಹೊರ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಇದರಿಂದ ತನ್ನ ಕುಟುಂಬಕ್ಕೆ ಸೇರಿರುವ ಚಪ್ಪಲಿ ಅಂಗಡಿ ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳಲಿದ್ದು, ಇದರಿಂದ ತನ್ನ ಕುಟುಂಬ ಬೀದಿಪಾಲಾಗಲಿದೆ. ಆದ್ದರಿಂದ ಸಂಬಂಧಿಸಿದ ಇಲಾಖಾಧಿಕಾರಿಗಳು ಕೂಡಲೇ ತನ್ನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ನೊಂದ ಕುಟುಂಬದ ಸದಸ್ಯ ಪೃಥ್ವಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮೋಹನ್, ಸುಧಾ, ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಉಪಸ್ಥಿತರಿದ್ದರು.

ಕಳಸ ಪಟ್ಟಣದ ಹೃದಯ ಭಾಗದಲ್ಲಿರುವ ಗ್ರಾಮ ಠಾಣಾ ಜಾಗದಲ್ಲಿ ದಲಿತ ಕುಟುಂಬವೊಂದು ಚಪ್ಪಲಿ ಅಂಗಡಿ ಇಟ್ಟುಕೊಂಡಿರುವುದನ್ನು ಮೇಲ್ವರ್ಗದವರು ಸಹಿಸುತ್ತಿಲ್ಲ. ಇದರಿಂದ ಜಾಗ ಖುಲ್ಲಾ ಮಾಡಿಸಲು ಗಿರಿಜನ ಸೊಸೈಟಿಯವರನ್ನು ಛೂ ಬಿಡಲಾಗಿದೆ. ಇದಕ್ಕೆ ಕಳಸ ಗ್ರಾಪಂ ಅಧಿಕಾರಿಗಳು, ಮೇಲ್ವರ್ಗದ ಜನಪ್ರತಿನಿಧಿಗಳು, ಕ್ಷೇತ್ರದ ಶಾಸಕರು ಸಹಕಾರ ನೀಡುತ್ತಿದ್ದು, ದಲಿತ ಕುಟುಂಬಕ್ಕೆ ಈ ಹಿಂದೆ ಗ್ರಾಮ ಪಂಚಾಯತ್ ನೀಡಿದ್ದ ಜಾಗದಿಂದಲೇ ದಲಿತ ಕುಟುಂಬವನ್ನು ಹೊರ ಹಾಕುವ ಕೆಲಸ ನಡೆಯುತ್ತಿದೆ. ಇದು ದಲಿತ ಮೇಲೆ ಸರಕಾರ ಹಾಗೂ ಮೇಲ್ವರ್ಗದವರು ಮಾಡುತ್ತಿರುವ ದೌರ್ಜನ್ಯವಾಗಿದೆ.

- ಕಲ್ಮನೆ ಮಂಜುನಾಥ್, ಸಾಮಾಜಿಕ ಕಾರ್ಯಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News