ರಾಜ್ಯ ಬಜೆಟ್ 2022: ಮುಖ್ಯಮಂತ್ರಿ ಬೊಮ್ಮಾಯಿ ತವರು ಜಿಲ್ಲೆಗೆ ಕೊಡುಗೆಗಳ ಸುರಿಮಳೆ!
ಬೆಂಗಳೂರು, ಮಾ.4: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಮ್ಮ ತವರು ಜಿಲ್ಲೆ ಹಾವೇರಿಗೆ ಹಲವು ಕಾರ್ಯಕ್ರಮ, ಅನುದಾನ ಘೋಷಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಪ್ರಸ್ತುತ ಸಾಲಿನ ಆಯವ್ಯಯದಲ್ಲಿ ಹಿರೇಕೆರೂರಿನಲ್ಲಿ ಗೋವಿನ ಜೋಳ ಸಂಶೋಧನಾ ಕೇಂದ್ರ ಸ್ಥಾಪನೆ, ಹಾನಗಲ್‍ನಲ್ಲಿ ಮಾವು ಸಂಸ್ಕರಣಾ ಘಟಕ ನಿರ್ಮಾಣ, ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ ಮಾಡಲಾಗುತ್ತದೆ.
ಹಾವೇರಿ ಸೇರಿ 7 ಜಿಲ್ಲೆಗಳಲ್ಲಿ ವಿನೂತನ ಮಾದರಿಯ ವಿವಿ ಸ್ಥಾಪನೆಯಾಗಲಿದೆ. ಹಾವೇರಿ ಸೇರಿ 4 ಜಿಲ್ಲೆಗಳಲ್ಲಿ ‘ಮುಖ್ಯಮಂತ್ರಿ ಆರೋಗ್ಯ ವಾಹಿನಿ’ ಸಂಚಾರಿ ಕ್ಲಿನಿಕ್ ಜಾರಿಯಾಗಲಿದೆ. ಶಿಗ್ಗಾವಿ ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು 250 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಬೊಮ್ಮಾಯಿ ಪ್ರಕಟಿಸಿದ್ದಾರೆ.
ಅದೇ ರೀತಿ, ಸವಣೂರು ತಾಲೂಕಿನಲ್ಲಿ ಹೊಸ ಆಯುರ್ವೇದ ಕಾಲೇಜು ಸ್ಥಾಪನೆ ಹಾಗೂ ಚರ್ಮ ಕುಶಲಕರ್ಮಿಗಳಿಗೆ ಸಾಮಾನ್ಯ ಸೌಲಭ್ಯ ಸಮುಚ್ಛಯ ಸ್ಥಾಪನೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರುಗಳಿಗೆ ರೈಲು ಮಾರ್ಗ ಯೋಜನೆ, ಹಾವೇರಿಯಲ್ಲಿ ಕೈಗಾರಿಕೆ ಸ್ಥಾಪಿಸಲು ಉತ್ತೇಜನ ನೀಡಲಾಗುತ್ತದೆ.
ರಾಣೆಬೆನ್ನೂರಿನಲ್ಲಿ ನೂತನ ಜವಳಿ ಪಾರ್ಕ್ ಮತ್ತು ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ 20 ಕೋಟಿ ರೂ ಅನುದಾನ ನೀಡಲಾಗುತ್ತದೆ. ಡಾ.ಮಹಾದೇವ ಬಣಕಾರರ ಸಾಂಸ್ಕøತಿಕ ಭವನಕ್ಕೆ 2 ಕೋಟಿ ರೂ. ನೀಡಲಾಗುತ್ತದೆ. ಶಿಗ್ಗಾಂವಿಯಲ್ಲಿ ಬಸ್ ಘಟಕ ಮತ್ತು ಚಾಲನಾ ತರಬೇತಿ ಕೇಂದ್ರಕ್ಕೆ 28 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.