ಹಸಿವು ನಿವಾರಿಸುವಲ್ಲಿ ನೆರೆ ರಾಜ್ಯಗಳಿಗಿಂತ ಹಿಂದುಳಿದ ಕರ್ನಾಟಕ: ವರದಿ
ಮೈಸೂರು: ಭಾರತ ಶುದ್ಧ ಮತ್ತು ಕೈಗೆಟುಕುವ ಇಂಧನ ಪೂರೈಸುವ ಜತೆಗೆ 2030ರ ಒಳಗಾಗಿ ದೇಶದಲ್ಲಿ ಹಸಿವು ಮತ್ತು ಅಪೌಷ್ಟಿಕತೆಯನ್ನು ನಿರ್ಮೂಲನೆಗೊಳಿಸುವ ಗುರಿ ಹಾಕಿಕೊಂಡಿದೆ. ಈ ಗುರಿಗಳ ಈಡೇರಿಕೆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಲಾಗಿದೆ. ಆದರೆ ವಿಜ್ಞಾನ ಮತ್ತು ಪರಿಸರ ಕೇಂದ್ರ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಸ್ವಚ್ಛ ಮತ್ತು ಕೈಗೆಟುವ ಇಂಧನ ಉಪಕ್ರಮಗಳಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿದ್ದರೂ, ಹಸಿವು ಮತ್ತು ಅಪೌಷ್ಟಿಕತೆ ನಿಭಾಯಿಸುವಲ್ಲಿ ತನ್ನ ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿಗಿಂತ ಹಿಂದಿದೆ ಎಂದು timesofindia ವರದಿ ಮಾಡಿದೆ.
ಭಾರತದ ಪರಿಸರ ವಾರ್ಷಿಕ ಸ್ಥಿತಿ-2022 ವರದಿಯ ಪ್ರಕಾರ, ಹಸಿವು ಮುಕ್ತ ಸೂಚ್ಯಂಕದಲ್ಲಿ ಕರ್ನಾಟಕ 100 ಅಂಕಗಳ ಪೈಕಿ ಕೇವಲ 53 ಅಂಕ ಪಡೆದಿದೆ. ಎಲ್ಲ ವರ್ಗದ ಜನರಿಗೆ ಅದರಲ್ಲೂ ಪ್ರಮುಖವಾಗಿ ಮಕ್ಕಳಿಗೆ ಆಹಾರ ಪೂರೈಸಲು ಕೈಗೊಂಡ ಕ್ರಮಗಳು, ಕೃಷಿ ಉತ್ತೇಜನ ಪ್ರಯತ್ನಗಳು, ಸಣ್ಣ ರೈತರಿಗೆ ನೀಡುವ ನೆರವು ಮತ್ತು ಭೂಮಿಯ ಲಭ್ಯತೆ ಇತ್ಯಾದಿ ಅಂಶಗಳನ್ನು ಪ್ರಮುಖವಾಗಿ ಈ ಸೂಚ್ಯಂಕಕ್ಕೆ ಪರಿಗಣಿಸಲಾಗಿದೆ.
ಬಡತನ ನಿರ್ಮೂಲನೆ ಕ್ಷೇತ್ರದಲ್ಲಿ ಕರ್ನಾಟಕ 68 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ. ಗುಣಮಟ್ಟದ ಶಿಕ್ಷಣ ಮತ್ತು ಸಮಾನತೆಯಲ್ಲಿ ಆರನೇ ಸ್ಥಾನದಲ್ಲಿದ್ದರೆ, ಸ್ವಚ್ಛ ನೀರು ಪೂರೈಕೆ ಮತ್ತು ನೈರ್ಮಲ್ಯದಲ್ಲಿ 11ನೇ ಸ್ಥಾನದಲ್ಲಿದ್ದು, ಒಟ್ಟಾರೆ 100 ಅಂಕಗಳ ಪೈಕಿ 85 ಅಂಕ ಪಡೆದಿದೆ.
ಸಾಮಾಜಿಕ- ಆರ್ಥಿಕ ಅಸಮಾನತೆ ಕಡಿಮೆ ಮಾಡಲು ಕೈಗೊಂಡ ಕ್ರಮಗಳ ವಿಚಾರದಲ್ಲಿ 12ನೇ ಸ್ಥಾನದಲ್ಲಿದೆ. ಭೂಮಿಯ ಮೇಲಿನ ಜೀವನ ವರ್ಗದಲ್ಲಿ ಕೂಡಾ ಇದೇ ರ್ಯಾಂಕಿಂಗ್ ಪಡೆದಿದೆ ಎಂದು ವರದಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ವಿವಿಯ ಸೆಂಟರ್ ಫಾರ್ ಸೋಶಿಯಲ್ ಎಕ್ಸ್‌ಕ್ಲೂಶನ್, ಸಹ ಪ್ರಾಧ್ಯಾಪಕ ಡಿ.ಸಿ.ನಂಜುಂಡ ಅವರು, ಸುಸ್ಥಿರ ಅಭಿವೃದ್ಧಿಗೆ, ಕರ್ನಾಟಕಕ್ಕಿಂತ ಕೇರಳ ಮತ್ತು ತಮಿಳುನಾಡಿನಲ್ಲಿ ಪೂರಕ ವಾತಾವರಣವಿದೆ. ಸೌಲಭ್ಯವಂಚನೆ ಹಾಗೂ ಆದಾಯದಲ್ಲಿ ಅಸಮಾನತೆ ಕರ್ನಾಟಕದಲ್ಲಿ ಅಧಿಕವಾಗಿದೆ. ಈ ಎರಡೂ ರಾಜ್ಯಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಮೂಲಸೌಕರ್ಯ ಅತ್ಯುತ್ತಮವಾಗಿದೆ. 1980 ಮತ್ತು 90ರ ದಶಕದಲ್ಲೇ ಕೇರಳ ಅಭಿವೃದ್ಧಿ ಮಾದರಿ ಗಮನ ಸೆಳೆದಿತ್ತು ಎಂದು ವಿವರಿಸಿದ್ದಾರೆ.
ಸುಸ್ಥಿರ ಗುರಿ ತಲುಪುವಲ್ಲಿ ಕರ್ನಾಟಕ ಒಟ್ಟಾರೆ ರ್ಯಾಂಕಿಂಗ್‌ನಲ್ಲಿ ಆರನೇ ಸ್ಥಾನ ಪಡೆದಿದ್ದರೂ, ಸಾಮಾಜಿಕ- ಆರ್ಥಿಕ ಪ್ರಗತಿ ಸೇರಿದಂತೆ ಏಳು ಕ್ಷೇತ್ರಗಳಲ್ಲಿ ಸಾಧನೆ ಆತಂಕಕಾರಿಯಾಗಿದೆ ಎಂದು ಪರಿಸರ ಸಂಪನ್ಮೂಲಕ ಘಟಕದ ಯೋಜನಾ ನಿರ್ದೇಶಕ ಕಿರಣ್ ಪಾಂಡೆ ಹೇಳುತ್ತಾರೆ.