ಗುಂಡ್ಲುಪೇಟೆ: ಬಿಳಿಕಲ್ಲು ಕ್ವಾರಿ ಕುಸಿತ ಪ್ರಕರಣ: ಮೂವರ ಮೃತದೇಹ ಪತ್ತೆ
ಚಾಮರಾಜನಗರ, ಮಾ.5: ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಬಿಳಿಕಲ್ಲು ಕ್ವಾರಿಯಲ್ಲಿ ಗುಡ್ಡ ಕುಸಿತ ಪ್ರಕರಣದಲ್ಲಿ ಮೂವರು ಮೃತಪಟ್ಟಿರುವುದನ್ನು ರಕ್ಷಣಾ ಕಾರ್ಯಾಚರಣೆ ತಂಡ ಖಚಿತಪಡಿಸಿದೆ.
ಇಂದು ಬೆಳಗ್ಗೆ 6:30ರಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ವೇಳೆ ಮಣ್ಣು, ಬಂಡೆಗಳ ಅಡಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಇಬ್ಬರ ದೇಹ ನಜ್ಜು ಗುಜ್ಜಾಗಿರುವ ಹಿಟಾಚಿಗಳಲ್ಲಿ ಸಿಲುಕಿಕೊಂಡಿದ್ದು, ಅದನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ. ಉತ್ತರ ಪ್ರದೇಶದ ಗೋರಖ್ ಪುರದ ಅಝೀಂ ಉಲ್ಲ (24), ಮಿರಾಜ್ (28) ಹಾಗೂ ಸರ್ಫ್ ರಾಝ್ (18) ಎಂಬವರು ಮಣ್ಣಿನ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರ ಪೈಕಿ ಅಝೀಂ ಉಲ್ಲ (24), ಮಿರಾಜ್ ಅವರು ಹಿಟಾಚಿ ಆಪರೇಟರ್ ಆಗಿದ್ದರೆ, ಸರ್ಫರಾಝ್ ಸಹಾಯಕರಾಗಿದ್ದರು ಎಂದು ತಿಳಿದುಬಂದಿದೆ.
ಈ ಕಲ್ಲಿನ ಕ್ವಾರಿಯಲ್ಲಿ ನಿನ್ನೆ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲೆ ಏಕಾಏಕಿ ಕುಸಿತ ಸಂಭವಿಸಿದೆ.
ಗುಮ್ಮಕಲ್ಲು ಗುಡ್ಡ ಕುಸಿದ ಕ್ವಾರಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ನವೀದ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇದೇವೇಳೆ ಗಣಿ ಮಾಲಕ ಬೊಮ್ಮಲಾಪುರ ಮಹೇಂದ್ರ ಹಾಗೂ ಉಪ ಗುತ್ತಿಗೆದಾರ ಕ್ಯಾಲಿಕಟ್ ಹಕೀಂ ಎಂಬವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.