ಕೊಲೆ ಯತ್ನ ಪ್ರಕರಣದಲ್ಲಿ ವಕೀಲ ಜಗದೀಶ್‍ಗೆ ಜಾಮೀನು: ಮತ್ತೆರಡು ಪ್ರಕರಣದ ವಿಚಾರಣೆ ಬಾಕಿ
ಬೆಂಗಳೂರು, ಮಾ. 5: ನ್ಯಾಯಾಲಯದ ಆವರಣದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ವಕೀಲ ಕೆ.ಎನ್.ಜಗದೀಶ್ ಮಹದೇವ್ ಅವರ ಜಾಮೀನು ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯವು, ಜಾಮೀನು ಮಂಜೂರು ಮಾಡಿದೆ. ಆದರೆ, ಮತ್ತೆರಡು ಪ್ರಕರಣಗಳಲ್ಲಿ ಜಾಮೀನು ಲಭ್ಯವಾಗದ ಹಿನ್ನೆಲೆಯಲ್ಲಿ ಸದ್ಯಕ್ಕೆ ಅವರು ಬಂಧಮುಕ್ತರಾಗುವಂತಿಲ್ಲ.
ನಗರದ ನ್ಯಾಯಾಲಯದ ಆವರಣದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ವಕೀಲರೊಬ್ಬರ ಮರ್ಮಾಂಗಕ್ಕೆ ಒದ್ದು, ಕೊಲೆಗೆ ಯತ್ನಿಸಿದ ಆರೋಪದಡಿ ವಕೀಲ ಜಗದೀಶ್ ಅವರನ್ನು ಹಲಸೂರು ಗೇಟ್ ಠಾಣೆಯ ಪೋಲಿಸರು ಬಂಧಿಸಿದ್ದರು. ಪ್ರಕರಣದಲ್ಲಿ ಜಾಮೀನು ಕೋರಿ ಜಗದೀಶ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಿದೆ. ಇದರ ನಡುವೆ ಜಾತಿ ನಿಂದನೆ ಪ್ರಕರಣ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧ ಜಗದೀಶ್ ವಿರುದ್ಧ ಮತ್ತೆರಡು ಪ್ರಕರಣ ದಾಖಲಾಗಿದ್ದವು. ಅವುಗಳ ವಿಚಾರಣೆ ಬಾಕಿ ಇದೆ.
ಜಾತಿ ನಿಂದನೆ ಪ್ರಕರಣ: ಕುಮಾರಸ್ವಾಮಿ ಲೇಔಟ್‍ನ ನಿವಾಸಿ ಮುತ್ತಯ್ಯ ಎಂಬವರು ಫೆ. 14 ರಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯಿದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್ ಅಡಿ ಕೊಡಿಗೇಹಳ್ಳಿ ಠಾಣೆಯಲ್ಲಿ ಜಗದೀಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ 68ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಗುರುವಾರ ನಡೆದಿದ್ದು, ನ್ಯಾ. ಕಾಶಿಂ ಚೂರಿಖಾನ್ ಪೀಠ ವಿಚಾರಣೆ ನಡೆಸಿತು.
ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿತ ವಕೀಲ ಕೆ.ಎಂ. ಜಗದೀಶ್ ಅವರನ್ನು ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತನಿಖಾಧಿಕಾರಿಯು ವಿಚಾರಣೆ ನಡೆಸಲು ಅನುಮತಿ ಕೋರಲಾಯಿತು. ಅನುಮತಿ ನೀಡಿ ಸಿಟಿ ಸಿವಿಲ್ ನ್ಯಾಯಾಲಯ ಆದೇಶಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ.7ರಂದು ತೀರ್ಪು ಕಾಯ್ದಿರಿಸಿರುವುದರಿಂದ ಅಲ್ಲಿಯವರೆಗೆ ಅವರು ನ್ಯಾಯಾಂಗ ಬಂಧನದಲ್ಲಿ ಮುಂದುವರೆಸಲಿದ್ದಾರೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಪೇದೆ ರಮೇಶ್ ಎಂಬುವರನ್ನು ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಫೆ.13 ರಂದು ಜಗದೀಶ್ ವಿರುದ್ಧ ಐಪಿಸಿ ಸೆಕ್ಷನ್ 506, 290, 353ರ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಜಗದೀಶ್ ಅವರನ್ನು ಬಾಡಿ ವಾರಂಟ್ ಆಧಾರದ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಯಿದೆ.