ಕೋಮುಭಾವನೆ ಬಿತ್ತುವವರನ್ನು ದೂರವಿಡಿ: ಶಾಸಕ ಪ್ರಿಯಾಂಕ್ ಖರ್ಗೆ
ಕಲಬುರಗಿ: ಉರ್ದು ಮಾಧ್ಯಮದ ಶಾಲೆ ಉದ್ಘಾಟನೆ ಹಿಂದೂ ಸಂಪ್ರದಾಯದಂತೆ ನಡೆದಿದೆ. ಇದು ನಮ್ಮೊಳಗೆ ಭ್ರಾತೃತ್ವತೆ ಹಾಗೂ ಸಹೋದರತೆ ಇನ್ನೂ ಬಲಿಷ್ಠವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ, ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ದಿಗ್ಗಾಂವ ಗ್ರಾಮದಲ್ಲಿ ರೂ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಾ ಬಾಬು ಜಗಜೀವನ ರಾಂ ಭವನದ, ರೂ 40 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಸರ್ಕಾರಿ ಶಾಲಾ ಕೊಠಡಿ, ರೂ 84 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಉರ್ದು ಮಾಧ್ಯಮ ಶಾಲೆಯ ಕೊಠಡಿಗಳ ಉದ್ಘಾಟನೆ ಹಾಗೂ ರೂ 66.70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿಸಿರಸ್ತೆಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಧರ್ಮಗಳ ನಡುವೆ ಭಾತೃತ್ವತೆ ಬಲಿಷ್ಠವಾಗಿದೆ. ಎಲ್ಲರೂ ಒಂದೇ ಎನ್ನುವ ಸಂವಿಧಾನದ ಆಶಯದಂತೆ ಎಲ್ಲವೂ ನಡೆದಿದೆ. ಆದರೂ, ಈ ನಡುವೆ ಹಿಜಾಬ್- ಕೇಸರಿ ಗಲಾಟೆ ನಡೆದಿದ್ದು ದುರದೃಷ್ಟಕರ. ಮಕ್ಕಳ ಕೈಗೆ ಕೇಸರಿ ಶಾಲು ಕೊಟ್ಟವರು ಯಾರು? ಮಕ್ಕಳಿಗೆ ಉತ್ಕೃಷ್ಟ ಶಿಕ್ಷಣ ಕೊಡಿಸುವ ಬದಲು ಕೇಸರಿ ಹಿಜಾಬ್ ಎಂದು ನಡೆಯುತ್ತಿರುವ ಗಲಾಟೆಗೆ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
ಧರ್ಮದ ಆಚರಣೆಗಳು ಆಯಾ ವ್ಯಕ್ತಿಗಳ ನಡುವೆ ನಡೆಯುವ ವೈಯಕ್ತಿಕ ವಿಷಯವಾಗಿದೆ. ನಾನು ನಾಸ್ತಿಕ ನನಗೆ ದೇವರು, ಪೂಜೆ ಇತ್ಯಾದಿ ಬಗ್ಗೆ ಒಲವಿಲ್ಲ. ನನಗೆ ಬಸವಣ್ಣನವರ ತತ್ವದ ಮೇಲೆ ನಂಬಿಕೆ ಇದೆ. ನಾನು ಸಂವಿಧಾನವನ್ನು ಗೌರವಿಸುತ್ತೇನೆ. ಆದರೆ, ಯಾವುದೇ ಧಾರ್ಮಿಕ ಆಚರಣೆ ಮಾಡುವವರಿಗೆ ನನ್ನ ವಿರೋಧವಿಲ್ಲ. ನನಗೆ ಯಾವ ಧರ್ಮದವರು ಕರೆಯುತ್ತಾರೋ ಅಲ್ಲಿಗೆ ಹೋಗುತ್ತೇನೆ. ನೀವು ಕೂಡಾ ಶೈಕ್ಷಣಿಕ ಕ್ಷೇತ್ರದಲ್ಲಿ ಧರ್ಮವನ್ನು ಬೆರಸಬೇಡಿ. ಮಕ್ಕಳಿಗೆ ವೈಜ್ಞಾನಿಕತೆ ಬೆಳೆಸಿ, ಕೋಮುಭಾವನೆ ಬಿತ್ತುವವರನ್ನು ನಮ್ಮ ಚಿತ್ತಾಪುರ ಕ್ಷೇತ್ರದಿಂದ ದೂರವಿಡಿ ಎಂದು ಮನವಿ ಮಾಡಿದರು.
ವೇದಿಕೆಯ ಮೇಲೆ ಭೀಮಣ್ಣ ಸಾಲಿ, ಮುಕ್ತಾರ್ ಪಟೇಲ್, ಶಿವರುದ್ರ ಭೇಣಿ, ಸಿದ್ದು ಪಾಟೀಲ್, ಸೇರಿದಂತೆ ಮತ್ತಿತರಿದ್ದರು.