ವಿಟಿಯು ಘಟಿಕೋತ್ಸವ: 16 ಚಿನ್ನದ ಪದಕಗಳನ್ನು ಪಡೆದು ನೂತನ ದಾಖಲೆ ನಿರ್ಮಿಸಿದ ರಾಯಚೂರಿನ ಬುಶ್ರಾ ಮತೀನ್
ಬೆಳಗಾವಿ: ರಾಯಚೂರಿನ ಎಸ್‌ಎಲ್‌ಎನ್ ಕಾಲೇಜು ಬಿಇ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಬುಶ್ರಾ ಮತೀನ್ ವಿಟಿಯುನ ಒಟ್ಟು 16 ಚಿನ್ನದ ಪದಕಗಳನ್ನು ಪಡೆದು ದಾಖಲೆ ಬರೆದಿದ್ದಾರೆ.
ವಾರ್ಷಿಕ ಘಟಿಕೋತ್ಸವದ ಕುರಿತು ಪತ್ರಿಕಾಗೋಷ್ಟಿ ನಡೆಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ, 21ನೇ ವರ್ಷದ ಘಟಿಕೋತ್ಸವವನ್ನು ಮಾರ್ಚ್ 10 ರಂದು ‘ಜ್ಞಾನಸಂಗಮ’ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟು 16 ಚಿನ್ನದ ಪದಕಗಳನ್ನು ಪಡೆದಿರುವ ಬುಶ್ರಾ ಮತೀನ್ ದಾಖಲೆ ಬರೆದಿದ್ದು, ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಇದು ಮೊದಲ ದಾಖಲೆ. ಈವರೆಗೆ ಅತಿ ಹೆಚ್ಚು ಅಂದರೆ 13 ಚಿನ್ನದ ಪದಕಗಳನ್ನು ಗಳಿಸಿದ ದಾಖಲೆ ಇತ್ತು ಎಂದು ಕುಲಪತಿ ತಿಳಿಸಿದ್ದಾರೆ.
ಬೆಂಗಳೂರು ಬಿ.ಎನ್.ಎಂ. ತಾಂತ್ರಿಕ ಸಂಸ್ಥೆಯ ಇ ಅಂಡ್ ಸಿ ವಿಭಾಗದ ಸ್ವಾತಿ ದಯಾನಂದ, ಬೆಳಗಾವಿಯ ಕೆ.ಎಲ್.ಇ. ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿವೇಕ್ ಭದ್ರಕಾಳಿ, ಬಳ್ಳಾರಿಯ ಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ ಇ ಅಂಡ್ ಇ ವಿಭಾಗದ ಚಂದನಾ ಎಂ. ತಲಾ 7 ಚಿನ್ನದ ಪದಕ ಪಡೆದಿದ್ದಾರೆ.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಸಭೆ ಸಭಾಪತಿ ಓಂ ಬಿರ್ಲಾ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕುಲಪತಿ ತಿಳಿಸಿದ್ದಾರೆ.