ಶಾಸಕರ ವೇತನ, ಭತ್ಯೆ ಹೆಚ್ಚಳ ಕಾಯ್ದೆಗೆ ರಾಜ್ಯಪಾಲರ ಅಂಕಿತ

Update: 2022-03-06 13:44 GMT

ಬೆಂಗಳೂರು, ಮಾ. 6: ವಿಧಾನಸಭೆ ಸ್ಪೀಕರ್, ಉಪ ಸಭಾಧ್ಯಕ್ಷ, ಸಭಾಪತಿ, ಉಪ ಸಭಾಪತಿ, ವಿಪಕ್ಷ ನಾಯಕ, ಸರಕಾರಿ ಮುಖ್ಯ ಸಚೇತಕ, ವಿಪಕ್ಷದ ಮುಖ್ಯ ಸಚೇತಕರು, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರ ವೇತನ ಮತ್ತು ಭತ್ಯೆ ಹೆಚ್ಚಳಕ್ಕೆ ಅವಕಾಶ ಕಲ್ಪಿಸುವ ತಿದ್ದುಪಡಿ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು  ಸಹಿ ಹಾಕಿದ್ದಾರೆ.

ಇತ್ತೀಚೆಗೆ ಜರುಗಿದ ವಿಧಾನ ಮಂಡಲ ಅಧಿವೇಶನದಲ್ಲಿ ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ  ಕಾಂಗ್ರೆಸ್ ಸದಸ್ಯರು ಧರಣಿ, ಗದ್ದಲದಲ್ಲಿ ನಡುವೆಯೇ ಯಾವುದೇ ಚರ್ಚೆ ಇಲ್ಲದೆ ಉಭಯ ಸದನಗಳಲ್ಲಿ ‘ಕರ್ನಾಟಕ ವಿಧಾನ ಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಕಾಯ್ದೆ’ಗೆ ಧ್ವನಿಮತದ ಅಂಗೀಕಾರ ನೀಡಲಾಗಿತ್ತು. 

‘ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಶಾಸಕರು ಸಂಕಷ್ಟ ಅನುಭವಿಸುತ್ತಿದ್ದು, 2015ರಿಂದ ಶಾಸಕರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಆಗಿರಲಿಲ್ಲ. ಹೀಗಾಗಿ, ಶಾಸಕರ ವೇತನ ಹೆಚ್ಚಿಸಲು ಅನುವು ಆಗುವಂತೆ ಕಾಯ್ದೆ ತಿದ್ದುಪಡಿಗೆ ಉದ್ದೇಶಿಸಲಾಗಿದೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಕಾಯ್ದೆ ಮಂಡನೆಯನ್ನು ಸಮರ್ಥಿಸಿದ್ದರು.

ಈ ಮಧ್ಯೆ ಶಾಸಕರ ವೇತನ, ಭತ್ಯೆ ಹೆಚ್ಚಳ ಕಾಯ್ದೆಯನ್ನು ಯಾವುದೇ ಚರ್ಚೆ ಇಲ್ಲದೆ ವಿಧಾನ ಮಂಡಲದಲ್ಲಿ ಅಂಗೀಕಾರ ಮಾಡಿದ ಬಗ್ಗೆ ರಾಜ್ಯದಲ್ಲಿ ಭಾರೀ ಚರ್ಚೆ ಏರ್ಪಟ್ಟಿತ್ತು. ‘ಕೋವಿಡ್ ಸೋಂಕಿನ ಸಂದರ್ಭದಲ್ಲಿ ಜನತೆ ಸಂಕಷ್ಟಕ್ಕೆ ಸಿಲುಕಿರುವ ವೇಳೆ ಶಾಸಕರ ವೇತನ, ಭತ್ಯೆ ಹೆಚ್ಚಳ ಅಗತ್ಯವಿತ್ತೇ? ಅವರೇನು ಬಡವರೇ?' ಎಂಬ ಆಕ್ರೋಶವೂ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News