ವಕ್ಫ್ ಆಸ್ತಿ ಗುರುತಿಗೆ ಡ್ರೋನ್ ಸಮೀಕ್ಷೆ ಶೀಘ್ರ ಆರಂಭ: ಸಚಿವೆ ಶಶಿಕಲಾ ಜೊಲ್ಲೆ
ಹೊಸಪೇಟೆ(ವಿಜಯನಗರ), ಮಾ. 6: ಒತ್ತುವರಿ ತಡೆಗಟ್ಟುವ ನಿಟ್ಟಿನಲ್ಲಿ ದೇವಸ್ಥಾನ ಮತ್ತು ವಕ್ಫ್ ಆಸ್ತಿ ಗಡಿ ಗುರುತು ಮಾಡುವ ಡ್ರೋನ್ ಮೂಲಕ ಸಮೀಕ್ಷೆಯನ್ನು ಶೀಘ್ರವೇ ಆರಂಭ ಮಾಡಲಾಗುವುದು ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ರವಿವಾರ ಹರಪನಹಳ್ಳಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ ಮತ್ತು ಬಿ ದರ್ಜೆ ದೇವಸ್ಥಾನಗಳ ವಿವರಗಳ ವೆಬ್ ಸೈಟ್‍ಗೆ ಚಾಲನೆ ನೀಡಲಾಗಿದೆ. ಎ ದರ್ಜೆಯ 25 ದೇವಸ್ಥಾನಗಳಲ್ಲಿ ಮಾಸ್ಟರ್ ಪ್ಲಾನ್ ರಚಿಸಿ ಸುಸಜ್ಜಿತ ರಸ್ತೆ, ಮೂಲಸೌಕರ್ಯ, ಪಾಕಿರ್ಂಗ್ ವ್ಯವಸ್ಥೆ ಕಲ್ಪಿಸುವ ಯೋಜನೆಗೆ 1,140 ಕೋಟಿ ರೂ.ನಿಗದಿಪಡಿಸಲಾಗಿದೆ ಎಂದು ಹೇಳಿದರು.
34 ಸಾವಿರ ದೇವಾಲಯಗಳ ಪೈಕಿ ಪ್ರತಿ ಜಿಲ್ಲೆಗೆ 50ರಂತೆ ರಾಜ್ಯದ 1,500 ಸಿ ದರ್ಜೆ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲು 10 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಎ ದರ್ಜೆ ದೇವಸ್ಥಾನಗಳಿರುವ ಪ್ರದೇಶದಲ್ಲಿ ಅಭಿವೃದ್ಧಿಗೆ ಪ್ರಾಚ್ಯವಸ್ತು, ಪುರಾತತ್ವ ಇಲಾಖೆಗಳು ಅಡ್ಡಿಪಡಿಸುತ್ತಿವೆ. ಉಚ್ಚಂಗಿದುರ್ಗದಲ್ಲೂ ಇದೇ ಸಮಸ್ಯೆ ಆಗಿದೆ ಎನ್ನುವ ಕಾರಣಕ್ಕೆ ಶೀಘ್ರ ಹೊಸದಿಲ್ಲಿಗೆ ತೆರಳಿ ಸಂಬಂಧಪಟ್ಟ ಸಚಿವರ ಬಳಿ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸುತ್ತೇನೆ ಎಂದರು.
ಬಜೆಟ್‍ನಲ್ಲಿ ಘೋಷಣೆ ಮಾಡದಿದ್ದರೂ ಮುಂದಿನ ದಿನಗಳಲ್ಲಿ ವಿಜಯನಗರ ಜಿಲ್ಲೆ ಸರ್ವಾಂಗೀಣ ಪ್ರಗತಿಗೆ ಹೆಚ್ಚಿನ ಅನುದಾನ ಕಲ್ಪಿಸಿ ಜಿಲ್ಲೆಯ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದರು. ಈ ವೇಳೆ ಶಾಸಕ ಜಿ.ಕರುಣಾಕರ ರೆಡ್ಡಿ ಇದ್ದರು.