ದೇಶದಲ್ಲಿ ಶಿಕ್ಷಣದ ಮೂಲಕ ಸಾಂಸ್ಕೃತಿಕ ಬಿಕ್ಕಟ್ಟುಗಳು ಉಂಟಾಗುತ್ತಿದೆ: ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆತಂಕ

Update: 2022-03-06 15:51 GMT

ಮೈಸೂರು,ಮಾ.6: ನಮ್ಮ ದೇಶದಲ್ಲಿ ಶಿಕ್ಷಣದ ಮೂಲಕ ಸಾಂಸ್ಕೃತಿಕ ಬಿಕ್ಕಟ್ಟುಗಳು ಉಂಟಾಗುತ್ತಿದ್ದು, ವಿಶ್ವಪ್ರಜ್ಞೆ ಮೂಡಿಸಬೇಕಾದ ಮಕ್ಕಳ ಮನಸ್ಸಿನಲ್ಲಿ  ಹಿಜಾಬ್ ಮತ್ತು ಕೇಸರಿಯಂತಹ ವಿಷವನ್ನು ತುಂಬುತ್ತಿದ್ದೇವೆ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮಾನಸ ಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ರವಿವಾರ ಆಯೋಜಿಸಿದ್ದ ಪ್ರಸ್ತುತ ಸಾಂಸ್ಕೃತಿಕ ಬಿಕ್ಕಟ್ಟುಗಳು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಡಮರುಗ ಬಾರಿಸುವ ಮೂಲಕ ಉದ್ಘಾಟಿಸಿ ನಂತರ ಅವರು ಮಾತನಾಡಿದರು.

ಶಾಲೆಗಳಲ್ಲಿ ಭಾರತೀಯ ಜನನತಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ, ಸರ್ವಜನಾಂಗದ ಶಾಂತಿಯ ತೋಟ ಎಂಬ  ನಾಡಗೀತೆಯನ್ನು ಮಕ್ಕಳ ಬಳಿ ಹಾಡಿಸುತ್ತಿದ್ದೇವೆ ಆದರೆ ಅದೇ ಮಕ್ಕಳು ಏನಗುತ್ತಿದ್ದಾರೆ. ಕೇಸರಿ ಮತ್ತು ಹಿಜಾಬ್ ಎನ್ನುತ್ತಿದ್ದು, ಎಂತಹ ವಿಷವನ್ನು ಮಕ್ಕಳಲ್ಲಿ ತುಂಬಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳಿಗೆ ವಿಶ್ವಪ್ರಜ್ಞೆಯ ಶಿಕ್ಷಣವಾಗುತ್ತಿಲ್ಲ, ಮಾನವೀಯ ಸಂವೇದನಾ ಶಿಕ್ಷಣ ಸಿಗುತ್ತಿಲ್ಲ, ಮಾಹಿತಿಯನ್ನು ತುಂಬುವ ಮತ್ತು ಅವರ ಮನಸ್ಸುಗಳನ್ನು ಕೋಮುವಾದದ ವಿಷಮಯ ಮಾಡುವ ಮನಸ್ಸುಗಳನ್ನು ನಾವು ಕಾಣುತ್ತಿದ್ದೇವೆ. ಕೋಮುವಾದದ ಮೂಲಕ ದೇಶ ಭಕ್ತಿ ಎಂದು ತುಂಬುತ್ತಿದ್ದೇವೆ. ಸತ್ಯವನ್ನು ತಿರುಚಿ ಹೇಳುವ ಪಾಠ ಅದು ಪಾಠವಾಗುವುದಿಲ್ಲ  ಅದು ವಿಷವಾಗುತ್ತದೆ ಎಂದು ಹೇಳಿದರು.

ನಮ್ಮ ರಾಜ್ಯದ ಸಂಸ್ಕೃತಿಯನ್ನು ಕಾಪಾಡಲು ಭಾಷಿಕ ಅಕಾಡೆಮಿ ಮತ್ತು ಪ್ರಾಧಿಕಾರಗಳು ಸೇರಿದಂತೆ  ಹಲವು ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. ಆ ಯಲ್ಲ ಆಕಾಡೆಮಿಗಳಿಗೆ ಸ್ವಾಯತ್ತತೆ ಇದೆ. ಅದೆಲ್ಲವೂ ಸಾಂಸ್ಕøತಿಕ ಸ್ವಾಯತ್ತದೆ. ಆದರೆ ಅಂತಹ ಸ್ವಾಯತ್ತತ್ತ ವಲಯಗಳಿಗೆ ದೊಡ್ಡ ಧಕ್ಕೆಯುಂಟಾಗುವ ರೀತಿಯ ವಿಷಮನಸ್ಸುಗಳು ಬಂದು ಬೆರೆತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

1915 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದರು. ಅಂತಹ ಸಾಹಿತ್ಯ ಪರಿಷತ್ತಿನೊಳಗೆ ಮಿರ್ಜಾ ಇಸ್ಮಾಯಿಲ್, ವಿಶ್ವೇಶ್ವರಯ್ಯ ಇದ್ದರು ಅವರೆನ್ನೆಲ್ಲಾ ಕೂಡ ಆಡಳಿತವಾಗಿ ಇಟ್ಟು ಕೊಂಡು ಕಾರ್ಯರೂಪಕ್ಕೆ ತಂದರು. ಆದರೆ ಅದರ ಮೂಲಾ ಆಶಯವನ್ನು ನಾಲ್ವಡಿ ಹೊಂದಿದ್ದರು.

ಅವರು ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ ಪ್ರಭುತ್ವ ಮುಖವಾಣಿ ಯಾಗಬೇಕು ಎಂದು ಭಯಸಿದವರಲ್ಲ, ಅಷ್ಟೊಂದು ಚೆನ್ನಾಗಿ ಬೆಳೆಸಿ ಪ್ರಭುತ್ವದೊಳಗೆ ಸಾಂಸ್ಕೃತಿಕ ಸ್ವಾಯತ್ತತೆ ಉಳಿಸಿಕೊಂಡ ಸಾಹಿತ್ಯ ಪರಿಷತ್ ಜಾತಿ ರಾಜಕಾರಣದೊಳಗೆ ಬಂದರೂ ಎಂದೂ ತನ್ನ ಸ್ವಾಯತ್ತತೆ ಕಳೆದುಕೊಂಡಿರಲಿಲ್ಲ. 

ಜಿ.ನಾರಾಯಣ ಅವರು ಕಾಂಗ್ರೆಸ್ ಪಕ್ಷದಿಂದ ಬಂದು ಅಧ್ಯಕ್ಷರಾಗಿದ್ದರೂ ಅವರು ಎಂದು ಪಕ್ಷವನ್ನು ಸಾಹಿತ್ಯ ಪರಿಷತ್ತಿನೊಳಗೆ ತಂದಿರಲಿಲ್ಲ, ಆದರೆ ಕಳೆದ ಚುನಾವಣೆಯಲ್ಲಿ ಕೋಮುವಾದಿ ಪಕ್ಷ ಇಡೀ ಚುನವಣೆಯನ್ನು ಕೈಗಿತ್ತಿಕೊಂಡು ನಡೆದುಕೊಂಡ ರೀತಿ ಮತ್ತು ನಡೆಸಿಕೊಂಡ ವಿಧಾನ ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಕøತಿ ಸ್ವಾಯತ್ತತೆಗೆ ಬಹುದೊಡ್ಡ ಧಕ್ಕೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ನಾನು ವೈಯಕ್ತಿವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಆಯ್ಕೆಯನ್ನು ಮಾನ್ಯ ಮಾಡುವುದಿಲ್ಲ. ಆ ಚುನಾವಣೆ ನಡೆದ ಬೆಳಿಗ್ಗೆಯಿಂದಲೇ ಬೈಲ ಬದಲಾಯಿಸುತ್ತೇನೆ ಎಂದು ಹೊರಟು ವಿಕೇಂದ್ರಿಕರಣದೊಂದಿಗೆ ಕೇಂದ್ರದಿಂದ ಅನಕ್ಷರಸ್ಥರ ಮನೆಯ ಬಾಗಿಲವರೆಗೆ ವಿಸ್ತರಿಸಿಕೊಂಡಿದ್ದ ಸಾಹಿತ್ಯ ಪರಿಷತ್ತು ಎಲ್ಲಾ ವಿಕೇಂದ್ರಿಕರಣ ನೀತಿಯನ್ನು ಕಳಚಿ ಕೇಂದ್ರಿಕೃತವಾಗುತ್ತ ಸರ್ವಾಧಿಕಾರಿ ಯಾಗುತ್ತಿದೆಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯರಾಗಿದ್ದರೂ ಕೂಡ ಸಾಹಿತಿಗಳಾಗಿದ್ದರೂ ನಾವು ಮೌನವಾಗಿದ್ದೇವೆ. ಹಿಂದಿನ ಅಧ್ಯಕ್ಷರು ಮಾಡಿದ ಎಡವಟ್ಟು ಇಂದಿನ ಅಧ್ಯಕ್ಷರ ಸರ್ವಾಧಿಕಾರಿಣಿ ದೋರಣೆಗೆ ಕಾರಣವಾಗಿದೆ. ಹಿಂದಿನ ಅಧ್ಯಕ್ಷರ ಆಯ್ಕೆಯಲ್ಲಿ ಕೈಜೋಡಿಸಿದ್ದ ಹಿಪಾಕ್ರೆಟಿಕ್ ಸಾಹಿತಿಗಳಿಂದ ಕಲುಷಿತಗೊಂಡಿದೆ ಎಂದು ಕಿಡಿಕಾರಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ರಂಗಾಯಣದ ಮಾಜಿ ನಿರ್ದೇಶಕ ಬಸವಲಿಂಗಯ್ಯ ಕೆಲವು ಮತೀಯ ಶಕ್ತಿಗಳು ಬೌದ್ಧ ಧರ್ಮವನ್ನು ಈ ದೇಶದಿಂದ ಓಡಿಸುವ ಪ್ರಯತ್ನ ಮಾಡಿದರು. ಅದು ಅಂಬೇಡ್ಕರ್ ಮತ್ತೆ ದೇಶದಲ್ಲಿ ಜಾಗ ಪಡೆದು ವಿಜೃಂಭಿಸುತ್ತಿದೆ. ಬಸವ ಧರ್ಮ ಅನುಸರಿಸಬೇಕಾದ ಮಠಗಳು ಇಂದು ಯಜ್ಞಾ ಯಾಗಾದಿಗಳನ್ನು ಮಾಡುತ್ತಿರುವುದು ವಿಷಾಧನೀಯ ಎಂದು ಹೇಳಿದರು.

ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಜೆ.ಲೋಕೇಶ್ ಮಾತನಾಡಿ, ಸಾಂಸ್ಕೃತಿಕ ಬಿಕ್ಕಟ್ಟು ನಮ್ಮ ಮನಸ್ಸಿನಲ್ಲಿದೆ ಅದನ್ನು ಬದಲಾಯಿಸಿಕೊಳ್ಳದ ಹೊರತು ನಾವು ಯಾವುದೇ ಸಂಘಟನೆ ಮತ್ತು ಕಾರ್ಯಕ್ರಮ ಮಾಡಿದರೆ ಆಗುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೈಗೊಂಡ ಕೆಲವು ನಿರ್ಣಯಗಳು

- ದೆಹಲಿಯ ಜೆಎನ್ ಯು ವಿಶ್ವವಿದ್ಯಾಲಯ, ರಾಷ್ಟ್ರೀಯ ನಾಟಕ ಶಾಲೆಯನ್ನೂ ಒಳಗೊಂಡಂತೆ ದೇಶದ ಸಾಂಸ್ಕೃತಿಕ ವಲಯದ ಮೇಲೆ , ಜನರ ಸಾಂವಿಧಾನಿಕ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಾಗೂ ಕರ್ನಾಟಕದ ಎಲ್ಲ ಜನಪದೀಯ ಮತ್ತು ಸಮಕಾಲೀನ ಸಾಂಸ್ಕೃತಿಕ ನೆಲೆಗಳ ಮೇಲೆ, ಸ್ವಾಯತ್ತ ಸಂಸ್ಥೆಗಳ ಮೇಲೆ ನಡೆಯುತ್ತಿರುವ ಬಲಪಂಥೀಯ ಫ್ಯಾಸಿಸ್ಟ್ ಧಾಳಿಯನ್ನು ಮತ್ತು ಸಂಘಪರಿವಾರದ ಸಾಂಸ್ಕೃತಿಕ ಆಕ್ರಮಣವನ್ನು ಈ ಸಮಾವೇಶವು  ಒಕ್ಕೊರಲಿನಿಂದ ಖಂಡಿಸುತ್ತದೆ. 

-  ಮೈಸೂರಿನ ಪ್ರತಿಷ್ಠಿತ ರಂಗಸಂಸ್ಥೆಯಾದ  ರಂಗಾಯಣದ ಸ್ವಾಯತ್ತತೆ ಮತ್ತು ಅದರ ಸಾಂಸ್ಕೃತಿಕ ಸ್ವರೂಪವನ್ನು ವಿರೂಪಗೊಳಿಸುವ ಸಂಘಪರಿವಾರದ, ಬಲಪಂಥೀಯ ರಾಜಕಾರಣದ ಹುನ್ನಾರವನ್ನು ಈ ಸಮಾವೇಶವು ಖಂಡಿಸುತ್ತದೆ. 

- ಪ್ರಜಾಪ್ರಭುತ್ವದ ನೆಲೆಯಲ್ಲಿ ಬಹುಸಂಸ್ಕೃತಿಯನ್ನು ಸಮಾಜಮುಖಿಯಾಗಿ ಬೆಳೆಸುವ ಬದಲು ಸಂಘ ಪರಿವಾರದ ಜನವಿರೋಧಿ ಏಕ ಸಂಸ್ಕೃತಿಯನ್ನು ಪ್ರತಿಪಾದಿಸುತ್ತಾ ಮೈಸೂರಿನ ಸಾಂಸ್ಕೃತಿಕ ಮನಸ್ಸುಗಳನ್ನು ನಿಕೃಷ್ಟವಾಗಿ ನಿಂದಿಸಿ ಅಸಾಂಸ್ಕೃತಿಕ ದುರ್ವರ್ತನೆಯ ಸಮಾಜವಿರೋಧಿ ನಿಲುವುಗಳೊಂದಿಗೆ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ರಂಗಾಯಣ ಹಾಲಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರನ್ನು ಸರ್ಕಾರ ತುರ್ತಾಗಿ ವಜಾಗೊಳಿಸಿ ರಂಗಾಯಣವನ್ನು ಉಳಿಸಬೇಕೆಂದು ಈ ರಾಜ್ಯ ಮಟ್ಟದ ಸಮಾವೇಶ ಒತ್ತಾಯಿಸುತ್ತದೆ. 

- ಸಂವಿಧಾನದ ಹಕ್ಕುಗಳು ಮತ್ತು ಸಾಂವಿಧಾನಿಕ ದಾರ್ಮಿಕ ಸ್ವಾತಂತ್ರ್ಯವನ್ನು ಧ್ವಂಸಗೊಳಿಸುತ್ತಿರುವ , ಜನ ಸಮುದಾಯಗಳ ಸೌಹಾರ್ದತೆಯನ್ನು ನಾಶಗೊಳಿಸಿ ಕೋಮು ದಳ್ಳುರಿಯನ್ನು ಬಿತ್ತುತ್ತಿರುವ ವಿಕೃತ ಮತಾಂಧ ಸಂಘಟನೆಗಳನ್ನು ನಿಷೇಧಿಸಬೇಕೆಂದು ಸಮಾವೇಶವು ಒಕ್ಕೊರಲಿನಿಂದ ಒತ್ತಾಯಿಸುತ್ತದೆ 

 - ಜನಸಮುದಾಯಗಳು ಎದುರಿಸುತ್ತಿರುವ ಸಾಂಸ್ಕೃತಿಕ ರಾಜಕಾರಣದ ಅಪಾಯಗಳನ್ನು ಸಮರ್ಪಕವಾಗಿ ಎದುರಿಸಲು, ದೇಶಾದ್ಯಂತ ಸೃಷ್ಟಿಸಲಾಗಿರುವ ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು, ಪ್ರಕ್ಷುಬ್ಧತೆ ಎದುರಿಸಲು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಎಲ್ಲ ಜನಪರ ಚಳುವಳಿಗಳೂ ಒಂದಾಗಿ ಮುನ್ನಡೆಯಲು ಈ ರಾಜ್ಯಮಟ್ಟದ ಸಮಾವೇಶ ಧೃಡ ಸಂಕಲ್ಪ ಮಾಡುತ್ತದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಮಾಜವಾದಿ ಪ.ಮಲ್ಲೇಶ ವಹಿಸಿದ್ದರು. ಕಾರ್ಯಕ್ರಮದ ಸ್ವಾಗವನ್ನು ಕೆ.ಆರ್.ಗೋಪಾಲಕೃಷ್ಣ ಮಾಡಿದರೆ ಸುಮತಿ ಕೆ.ಆರ್. ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಜನಾರ್ಧನ್ ಜನ್ನಿ, ಕೃಷ್ಣಪ್ರಸಾದ್,  ಪ್ರೊ.ಕಾಳೇಗೌಡ ನಾಗವಾರ, ಎಚ್.ಎಸ್.ಉಮೇಶ್, ನಾ.ದಿವಾಕರ, ಬಡಗಲಪುರ ನಾಗೇಂದ್ರ, ಪತ್ರಕರ್ತ ಟಿ.ಗುರುರಾಜ್, ಎನ್.ಕೆ.ಮೋಹನ್‍ರಾಮ್, ಶಂಕರಯ್ಯ ಘಂಟಿ, ನಟರಾಜ ಹೊನ್ನಾಳಿ, ಮೋಹನ್ ಕುಮಾರ್ ಗೌಡ, ಗುರುಪ್ರಸಾದ್ ಕೆರಗೋಡು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News