×
Ad

ಗುಂಡ್ಲುಪೇಟೆ ಬಿಳಿಕಲ್ಲು ಕ್ವಾರಿ ದುರಂತ: ಮೂವರ ಮೃತದೇಹಗಳನ್ನು ಹೊರತೆಗೆದ ರಕ್ಷಣಾ ತಂಡ

Update: 2022-03-07 09:44 IST

ಚಾಮರಾಜನಗರ, ಮಾ.7: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗುಮ್ಮಕಲ್ಲುಗುಡ್ಡದಲ್ಲಿ ಬಿಳಿಕಲ್ಲು ಗಣಿಗಾರಿಕೆ ಕ್ವಾರಿ ಕುಸಿತ ದುರಂತದಲ್ಲಿ ಸಿಲುಕಿರುವವರ ಶೋಧ ಕಾರ್ಯ ರವಿವಾರ ರಾತ್ರಿ ವೇಳೆ ಮುಕ್ತಾಯ ಕಂಡಿದೆ. ಕಲ್ಲುಗಳಡಿಯಲ್ಲಿ ಸಿಲುಕಿದ್ದ ಮೂವರ ಮೃತದೇಹಗಳನ್ನು ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆಯುವಲ್ಲಿ ಯಶಸ್ವಿಯಾದರು.

ಎರಡನೇ ದಿನದ ಶೋಧ ಕಾರ್ಯಾಚರಣೆಯಲ್ಲಿ ಕ್ವಾರಿ ಕಾರ್ಮಿಕರು, ಇಟಾಚಿ ಆಪರೇಟರ್‌ಗಳ ಸಹಕಾರದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಎರಡು ಮೃತದೇಹಗಳನ್ನು ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ಅಗ್ನಿಶಾಮಕ ದಳದವರು ಹೊರ ತೆಗೆದರು. ಇಟಾಚಿ ಆಪರೇಟರ್‌ ಮಿರಾಜ್‌(24)ರ ಮೃತದೇಹ ರವಿವಾರ ಸಂಜೆ 4 ಗಂಟೆ ವೇಳೆ ಹಾಗೂ ಸರ್ಫರಾಝ್‍(18)ರ ಮೃತದೇಹವನ್ನು ರಾತ್ರಿ 8 ಗಂಟೆ ವೇಳೆ ಹೊರತೆಗೆದಿದ್ದಾರೆ. ಅಝೀಂ ಉಲ್ಲಾ ಎಂಬವವರ ಮೃತದೇಹವನ್ನು ಶನಿವಾರ ಹೊರ ತೆಗೆಯಲಾಗಿತ್ತು. ಮೃತರೆಲ್ಲ ಉತ್ತರ ಪ್ರದೇಶ ಮೂಲದವರಾಗಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ 25 ಎನ್.ಡಿ.ಆರ್.ಎಫ್, 25 ಎಸ್.ಡಿ.ಆರ್.ಎಫ್ ಹಾಗೂ 50 ಅಗ್ನಿಶಾಮಕ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕ್ವಾರಿಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದ್ದು, ಮೂವರ ವಿರುದ್ಧ ಎಫ್ಐಆರ್ ದಾಖಲಿಸಿ ಒಬ್ಬನನ್ನು ಬಂಧಿಸಲಾಗಿದೆ‌‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News