ತಾ.ಪಂ, ಜಿ.ಪಂ ಗಡಿ ನಿರ್ಣಯ ಆಯೋಗ ಸಮರ್ಥಿಸಿಕೊಂಡ ಸರಕಾರ: ಹೈಕೋರ್ಟ್ ಗೆ ಆಕ್ಷೇಪಣೆ ಸಲ್ಲಿಕೆ
ಬೆಂಗಳೂರು, ಮಾ.7: ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದು, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಿರುವ ಕ್ರಮವನ್ನು ರಾಜ್ಯ ಸರಕಾರ ಸಮರ್ಥಿಸಿಕೊಂಡಿದೆ. ಹೈಕೋರ್ಟ್ ವಿಚಾರಣೆಯನ್ನು ಎಪ್ರಿಲ್ 12ಕ್ಕೆ ಮುಂದೂಡಿತು.
ಅಧಿಕಾರ ಹಿಂಪಡೆದ ಕ್ರಮ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‍ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಅಂತಿಮವಾಗಿ ಆಕ್ಷೇಪಣೆ ಸಲ್ಲಿಸಿರುವ ಸರಕಾರ, ಸೀಮಾ ನಿರ್ಣಯ ಆಯೋಗ ರಚಿಸಲು ಕಾಯ್ದೆಗೆ ತಿದ್ದುಪಡಿ ತಂದಿರುವುದರ ಹಿಂದೆ ಸಾಕಷ್ಟು ಪಾರದರ್ಶಕ ಮತ್ತು ವೈಜ್ಞಾನಿಕ ನಡವಳಿಕೆ ಅಡಗಿದೆ ಎಂದು ತಿಳಿಸಿದೆ. ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರಕಾರದ ಪರ ವಕೀಲರು ಸಲ್ಲಿಸಿದ ಆಕ್ಷೇಪಣೆ ಪರಿಶೀಲಿಸಿದ ಪೀಠ ವಿಚಾರಣೆಯನ್ನು ಎಪ್ರಿಲ್ 12ಕ್ಕೆ ಮುಂದೂಡಿತು.
ಭೌಗೋಳಿಕ ಪ್ರದೇಶ ಮತ್ತು ಕ್ಷೇತ್ರ ಸಮೀಕ್ಷೆ ಮುಖಾಂತರ ಗ್ರಾಮೀಣ ಪ್ರದೇಶದಲ್ಲಿನ ಸದ್ಯದ ಜನಸಂಖ್ಯೆಯ ಅಧ್ಯಯನ ಮಾಡಲಾಗುವುದು. ಈ ನಿಟ್ಟಿನಲ್ಲಿ ಸೂಕ್ತ ಸಲಹೆಗಳನ್ನು ನೀಡಿದ ನಂತರ ವೈಜ್ಞಾನಿಕವಾಗಿ ಪುನರ್ ವಿಂಗಡಣೆ ಮಾಡಲಾಗುವುದು. ಈ ಪ್ರಕ್ರಿಯೆಯು ಪಾರದರ್ಶಕವಾಗಿರಲಿದ್ದು, ವ್ಯಾಜ್ಯಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿದೆ ಎಂದು ಸರಕಾರದಿಂದ ವಿವರಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರಕಾರ, ತಾ.ಪಂ ಹಾಗೂ ಜಿ.ಪಂ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದು, ಈ ಕಾರ್ಯವನ್ನು ನಿರ್ವಹಣೆ ಮಾಡಲು ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ಮುಂದಾಗಿದೆ.
ಇದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಮೆಟ್ಟಿಲೇರಿದ್ದು, ರಾಜ್ಯದ ಹಲವು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಅವಧಿ ಮುಗಿದಿದೆ. ಆಯೋಗ ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡ ಬಳಿಕ ಕಾಯ್ದೆಗೆ ತಿದ್ದುಪಡಿ ತಂದಿದೆ. ಹೀಗಾಗಿ ತಿದ್ದುಪಡಿ ಕಾಯ್ದೆಯನ್ನು ಅಸಿಂಧು ಎಂದು ಘೋಷಿಸಬೇಕು ಹಾಗೂ ಚುನಾವಣೆ ನಡೆಸಲು ಅವಕಾಶ ಮಾಡಿಕೊಡುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದಿದೆ.