×
Ad

ಮತ್ಯ್ಸಾಶ್ರಯ ಯೋಜನೆಯಡಿ ಮೀನುಗಾರರಿಗೆ ಮನೆ ನಿರ್ಮಾಣ ವಿಳಂಬ ಸರಿಯಲ್ಲ: ಸ್ಪೀಕರ್ ಕಾಗೇರಿ ಅಸಮಾಧಾನ

Update: 2022-03-07 17:51 IST

ಬೆಂಗಳೂರು, ಮಾ. 7: ‘ಮತ್ಸ್ಯಾಶ್ರಯ' ಯೋಜನೆಯಡಿ 2018-19ನೆ ಸಾಲಿನಲ್ಲಿ ಆಯ್ಕೆಯಾದ ಮೀನುಗಾರರ ಮನೆ ನಿರ್ಮಾಣಕ್ಕೆ ಈವರೆಗೂ ಅನುದಾನ ಬಿಡುಗಡೆ ಮಾಡದಿರುವುದು ಸರಿಯಲ್ಲ' ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದಿಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಪ್ರತಿಪಕ್ಷದ ಉಪ ನಾಯಕ ಯು.ಟಿ.ಖಾದರ್ ಕೇಳಿದ ಪ್ರಶ್ನೆಗೆ ಸಚಿವ ಎಸ್.ಅಂಗಾರ ಪರವಾಗಿ ಸಚಿವೆ ಶಶಿಕಲಾ ಜೊಲ್ಲೆ ಅವರು ನೀಡಿದ ಉತ್ತರಕ್ಕೆ ಆಕ್ಷೇಪಿಸಿದ ಸ್ಪೀಕರ್ ಅವರು, ‘ಫಲಾನುಭವಿಗಳನ್ನು ಆಯ್ಕೆ ಮಾಡಿ ಹಲವು ವರ್ಷಗಳೇ ಕಳೆದಿವೆ. ಆದರೆ ಅವರಿಗೆ ಮನೆ ಮಂಜೂರು ಮಾಡದಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಎಲ್ಲರೂ ಗಮನಹರಿಸಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

‘2018-19ರಲ್ಲಿ ಮೀನುಗಾರರಿಗೆ ಮನೆ ಕಟ್ಟಿಸಿಕೊಡುವುದಾಗಿ ಘೋಷಣೆ ಮಾಡಲಾಗಿದೆ. ತಾಂತ್ರಿಕ ಕಾರಣಗಳನ್ನು ವೊಡ್ಡಿ ಮನೆಗಳನ್ನೇ ಮಂಜೂರು ಮಾಡಿಲ್ಲ. ನಮಗೆ ಮನೆ ಸಿಗುತ್ತದೆ ಎಂದು ಆಸೆ ಇಟ್ಟುಕೊಂಡಿರುತ್ತಾರೆ. ಈ ಬಗ್ಗೆ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಚಿವರು ಗಮನಹರಿಸಬೇಕು' ಎಂದು ಕಾಗೇರಿ ಸೂಚನೆ ನೀಡಿದರು.

ಬಳಿಕ ಉತ್ತರಿಸಿದ ಸಚಿವ ಸೋಮಣ್ಣ, ‘ವಸತಿ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರ ವಸತಿ ಇಲಾಖೆಗೆ ಇರುವುದಿಲ್ಲ. ಆಯಾ ಕ್ಷೇತ್ರಗಳ ಶಾಸಕರು ಸಭೆ ನಡೆಸಿ ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಬೇಕು. ನಾನು ಈ ಸದನದ ಮೂಲಕ ಮನವಿ ಮಾಡುತ್ತೇನೆ. ತಕ್ಷಣವೇ ಎಲ್ಲ ಶಾಸಕರು ನಿಮ್ಮ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿದರೆ ಕಾಲಮಿತಿಯೊಳಗೆ ಅನುದಾನವನ್ನು ಅನುಷ್ಠಾನ ಮಾಡುತ್ತೇವೆ' ಎಂದು ವಿವರಣೆ ನೀಡಿದರು
‘ಫಲಾನುಭವಿಗಳ ಪಟ್ಟಿಯನ್ನು ಕಳುಹಿಸಿದ ಬಳಿಕ ಜಿಲ್ಲಾ ಮಟ್ಟದಲ್ಲಿ ಡಿಸಿ, ತಾಲೂಕು ಮಟ್ಟದಲ್ಲಿ ಇಒ, ಪಿಡಿಒಗಳು ಸೇರಿದಂತೆ ಕೆಳಹಂತದ ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕು. ಆದರೆ ಅಧಿಕಾರಿಗಳು ಎಷ್ಟು ಬಾರಿ ಸೂಚಿಸಿದರೂ ನಿರ್ಲಕ್ಷ್ಯ ತೋರುತ್ತಾರೆ. ಹೀಗಾಗಿ ಯೋಜನೆ ವಿಳಂಬವಾಗಿದೆ ಎಂದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ಉಪನಾಯಕ ಯು.ಟಿ.ಖಾದರ್, ‘2018-19ನೆ ಸಾಲಿನಲ್ಲಿ ಮತ್ಯ್ಸಾಶ್ರಯ ಯೋಜನೆಯಡಿ ಮಂಗಳೂರು ಕ್ಷೇತ್ರಕ್ಕೆ 35 ಮನೆಗಳನ್ನು ಮಂಜೂರು ಮಾಡಿದ್ದು, ಇದರಲ್ಲಿ 29 ಮನೆಗಳು ಹಿಂದಿನ ಸಾಲುಗಳಿಂದ ಮರು ಹಂಚಿಕೆ ಮೂಲಕ ಅನುಮೋದನೆಯಾಗಿರುತ್ತವೆ. ಮೂರು ವರ್ಷಗಳಾದರೂ ಬಿಡುಗಡೆಯಾಗಿಲ್ಲ' ಎಂದು ದೂರಿದರು.

‘ಬಡ ಮೀನುಗಾರರು ತಮಗೊಂದು ಮನೆ ಸಿಗುತ್ತದೆ ಎಂದು ಆಸೆಗಣ್ಣಿನಿಂದ ನೋಡುತ್ತಾರೆ. ಎರಡು-ಮೂರು ವರ್ಷಗಳಾದರೂ ಮನೆ ಸಿಗಲಿಲ್ಲ ಎಂದರೆ ಹೇಗೆ? ಕೂಡಲೇ ಮೀನುಗಾರರ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಬೇಕು. ಮೀನುಗಾರರು ಬಡವರು ಆಗಿರುವ ಕಾರಣ ಮನೆ ನಿರ್ಮಿಸಿಕೊಳ್ಳಲು ಕೆಲ ವಿನಾಯಿತಿ ನೀಡಬೇಕು' ಎಂದು ಮನವಿ ಮಾಡಿದರು.

ಬಳಿಕ ಉತ್ತರಿಸಿದ ಸಚಿವೆ ಶಶಿಕಲಾ ಜೊಲ್ಲೆ, ‘ಮತ್ಸ್ಯಾಶ್ರಯ ಯೋಜನೆಯಡಿ ಮೀನುಗಾರರಿಗೆ ಮನೆ ಕಲ್ಪಿಸಿಕೊಡುವುದು ನಮ್ಮ ಸರಕಾರದ ಕರ್ತವ್ಯ. ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿರಬಹುದು. ಸಂಬಂಧಪಟ್ಟ ಎಲ್ಲ ಸಚಿವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಸದನಕ್ಕೆ ಆಶ್ವಾಸನೆ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News