11 ಸಾವಿರ ಕಲಾವಿದರಿಗೆ ಮಾಸಾಶನ: ಸಚಿವ ಸುನೀಲ್‍ಕುಮಾರ್
ಬೆಂಗಳೂರು, ಮಾ.7: ರಾಜ್ಯದಲ್ಲಿ 11,830 ಮಂದಿ ಕಲಾವಿದರಿಗೆ ತಲಾ 2 ಸಾವಿರ ರೂ.ಗಳಂತೆ ರಾಜ್ಯ ಸರಕಾರ ಮಾಸಾಶನ ನೀಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃ ತಿ ಇಲಾಖೆ ಸಚಿವ ವಿ.ಸುನೀಲ್‍ಕುಮಾರ್ ಹೇಳಿದರು.
ಸೋಮವಾರ ವಿಧಾನ ಪರಿಷತ್ತಿನಲ್ಲಿ ಅವರು, ಮಾಸಾಶನ ಸಂಬಂಧ ರಾಜ್ಯ ಸರಕಾರ ಇದಕ್ಕಾಗಿ ವಾರ್ಷಿಕವಾಗಿ 27 ಕೋಟಿ, 37 ಲಕ್ಷ ರೂ. ಖರ್ಚು ಮಾಡುತ್ತಿದೆ. ಅಲ್ಲದೆ, ಕಲಾವಿದರಿಗೆ ಮಾಸಾಶನ ಕೊಡುವುದು ಮಾಸಾಶನದಿಂದಲೇ ಜೀವನ ನಿರ್ವಹಣೆ ಮಾಡಿ ಎಂದಲ್ಲ. ನಿಮ್ಮ ಜತೆ ನಾವಿದ್ದೇವೆ ಎನ್ನುವ ಮಾನಸಿಕ ಧೈರ್ಯ ತುಂಬಲು ಎಂದರು.
ರಾಜ್ಯದಲ್ಲಿ ಮಾಸಾಶನ ನೀಡಲು 58 ವರ್ಷ ಆಗಿರಬೇಕು. ಅದೇರೀತಿ ಕೇಂದ್ರ ಸರಕಾರ ಕೊಡುವ ಮಾಸಾಶನ ಪಡೆಯಲು 60 ವರ್ಷ ಆಗಿರಬೇಕು ಎನ್ನುವುದು ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಿದೆ. ಈ ಕಾರಣಕ್ಕಾಗಿಯೇ ಹೆಚ್ಚಿನ ಕಲಾವಿದರು ಕೇಂದ್ರದ ಮಾಸಾಶನ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ನಿಯಮಗಳನ್ನು ಸರಳೀಕರಣ ಮಾಡುವಂತೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.
ರಾಜ್ಯಾದ್ಯಂತ ತಮಟೆ ಕಲಾವಿದರಿಗೆ ವೈಯಕ್ತಿಕವಾಗಿ ಮಾಸಾಶನ ನೀಡಲು ಸಾಧ್ಯವಿಲ್ಲ. ಆದರೆ, ಗುಂಪು ಅಥವಾ ಸಂಘಗಳ ಹೆಸರಿನಲ್ಲಿ ಮಾಸಾಶನ ನೀಡಲಾಗುವುದು ಎಂದು ಹೇಳಿದರು.