ಕೇಂದ್ರದ ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ಆದಷ್ಟು ಅನ್ಯಾಯ ಬೇರೆ ಯಾವ ರಾಜ್ಯಕ್ಕೂ ಆಗಿಲ್ಲ: ಸಿದ್ದರಾಮಯ್ಯ
ಬೆಂಗಳೂರು, ಮಾ. 7: ‘ಕರ್ನಾಟಕವೊಂದರಿಂದಲೇ ಕೇಂದ್ರ ಸರಕಾರ ವಿವಿಧ ರೀತಿಯ ತೆರಿಗೆ ರೂಪದಲ್ಲಿ ಸುಮಾರು 3ಲಕ್ಷ ಕೋಟಿ ರೂ.ಹಣವನ್ನು ವಾರ್ಷಿಕವಾಗಿ ಸಂಗ್ರಹಿಸುತ್ತದೆ. ನಮ್ಮ ಪಾಲಿನ ತೆರಿಗೆಯಲ್ಲಿ ಶೇ.42ರಷ್ಟು ಪಾಲು ನಮಗೆ ನೀಡಿದರೆ 1,26,000 ಕೋಟಿ ರೂ.ಗಳನ್ನು ರಾಜ್ಯಕ್ಕೆ ಕೇಂದ್ರ ಸರಕಾರ ನೀಡಬೇಕು. ಆದರೆ, ಅವರು ಕೊಡುತ್ತಿರುವುದು ಕೇವಲ 44ಸಾವಿರ ಕೋಟಿ ರೂ.ಅಷ್ಟೇ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ಆಕ್ರೋಶ ಹೊರಹಾಕಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ 2022-23ನೆ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘15ನೆ ಹಣಕಾಸು ಆಯೋಗದ ವರದಿಯಲ್ಲಿ ನಮ್ಮ ರಾಜ್ಯಕ್ಕಾದಷ್ಟು ಅನ್ಯಾಯ ಬೇರೆ ಯಾವ ರಾಜ್ಯಕ್ಕೂ ಆಗಿಲ್ಲ. ಅದೇ ಕಾರಣಕ್ಕೆ ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ 5,495 ಕೋಟಿ ರೂ.ವಿಶೇಷ ಅನುದಾನ ನೀಡುವಂತೆ ಹಣಕಾಸು ಆಯೋಗ ಶಿಫಾರಸ್ಸು ಮಾಡಿತ್ತು, ಅಂತಿಮ ವರದಿಯಲ್ಲಿ ಆ ಶಿಫಾರಸ್ಸೇ ಇರಲಿಲ್ಲ.
ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ, ವಿತ್ತ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ಈ ಶಿಫಾರಸ್ಸನ್ನು ತಿರಸ್ಕರಿಸಿದರು, ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 25 ಮಂದಿ ಬಿಜೆಪಿ ಸಂಸದರು ಈ ಅನ್ಯಾಯವನ್ನು ಖಂಡಿಸುವ ಧೈರ್ಯ ತೋರಿಸಿಲ್ಲ. ಹೀಗಾಗಿ ಆ ಹಣ ನಮ್ಮ ರಾಜ್ಯಕ್ಕೆ ಬರಲೇ ಇಲ್ಲ. 14 ಮತ್ತು 15ನೆ ಹಣಕಾಸು ಆಯೋಗದ ವರದಿಗಳ ನಡುವೆ ನಮ್ಮ ತೆರಿಗೆ ಪಾಲು ಶೇ.1.07 ಕಡಿಮೆಯಾಯಿತು' ಎಂದು ಸಿದ್ದರಾಮಯ್ಯ ಆರೋಪಿಸಿದರು.
ಮಿತಿ ಮೀರಿದ ಸಾಲ: ‘ಕೇಂದ್ರ ಸರಕಾರವೂ ಮಿತಿಮೀರಿ ಸಾಲ ಮಾಡುತ್ತಿದೆ. ಸ್ವಾತಂತ್ರ್ಯ ಬಂದ ನಂತರದಿಂದ ಮನಮೋಹನ್‍ಸಿಂಗ್‍ರ ಸರಕಾರದ ಕೊನೆವರ್ಷ ದೇಶದ ಮೇಲಿನ ಒಟ್ಟು ಸಾಲ 53,11,000 ಕೋಟಿ ರೂ., ಈ ವರ್ಷದ ಬಜೆಟ್‍ನಲ್ಲಿ ಕೇಂದ್ರ ಸರಕಾರವೇ ನೀಡಿರುವ ಮಾಹಿತಿ ಪ್ರಕಾರ ದೇಶದ ಮೇಲಿನ ಸಾಲ 153 ಲಕ್ಷ ಕೋಟಿ ರೂ.ಗಳು ಎಂದರೆ ಬಿಜೆಪಿ ಸರಕಾರ ಕೇವಲ ಎಂಟು ವರ್ಷಗಳಲ್ಲಿ ಸುಮಾರು 100 ಲಕ್ಷ ಕೋಟಿ ರೂ.ಸಾಲ ಮಾಡಿದೆ' ಎಂದು ಸಿದ್ದರಾಮಯ್ಯ ವಿವರಿಸಿದರು.
‘ರಾಜ್ಯದಲ್ಲಿ ಒಂದೆಡೆ ಸಾಲ ಏರಿಕೆಯಾಗುತ್ತಿದೆ, ಇನ್ನೊಂದೆಡೆ ರಾಜ್ಯದ ಜಿಎಸ್‍ಡಿಪಿ ಕಡಿಮೆಯಾಗುತ್ತಿದೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ? 2020-21ರಲ್ಲಿ ಆಸ್ತಿ ಸೃಜನೆಗೆ ಖರ್ಚು ಮಾಡಿರುವ ಬಂಡವಾಳ ವೆಚ್ಚ 48,075 ಕೋಟಿ ರೂ., 2021-22ಕ್ಕೆ 44,237 ಕೋಟಿ ರೂ., ಇದು ಪರಿಷ್ಕøತಗೊಂಡು 42,366 ಕೋಟಿ ರೂ.ಗಳಾಯಿತು. ಮುಂದಿನ ವರ್ಷ 46,955 ಕೋಟಿ ರೂ.ಖರ್ಚು ಮಾಡುತ್ತೇವೆಂದು ಹೇಳಿದ್ದಾರೆ. 2023-24ಕ್ಕೆ 20,729 ಕೋಟಿ ರೂ.ಗಳಿಗೆ ಇಳಿದಿದೆ. 2024-25ಕ್ಕೆ 23,776 ಕೋಟಿ ರೂ., 2025-26ಕ್ಕೆ 26,847 ಕೋಟಿ ರೂ.ಗಳಾಗಲಿದೆ. ಎಂದರೆ ಕಳೆದ ವರ್ಷಕ್ಕೆ ಮತ್ತು 2025ಕ್ಕೆ ಬಂಡವಾಳ ವೆಚ್ಚ ಶೇ.50 ಕಡಿಮೆಯಾಗುತ್ತದೆ. ಸುಮಾರು 70ಸಾವಿರ ಕೋಟಿ ರೂ.ಸಾಲ ಪಡೆದು 20ಸಾವಿರ ಕೋಟಿ ರೂ.ಗಳನ್ನು ಆಸ್ತಿ ಸೃಜನೆಗೆ ಖರ್ಚು ಮಾಡಿ, ಇನ್ನುಳಿದದ್ದು ಸಾಲದ ಬಡ್ಡಿ ಮತ್ತು ಅಸಲು ಕಟ್ಟಲು, ರಾಜಸ್ವ ಕೊರತೆ ಸರಿದೂಗಿಸಲು ಬಳಕೆ ಮಾಡಿದರೆ ಬೆಳವಣಿಗೆಯ ಹಾದಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತದೋ ಅಥವಾ ಮುಂದೆ ಸಾಗುತ್ತದೋ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
‘2023-24ಕ್ಕೆ ರಾಜಸ್ವ ಕೊರತೆ 40,568 ಕೋಟಿ ರೂ.ಗಳಾಗುತ್ತದೆ. ಒಂದು ವೇಳೆ ರಾಜಸ್ವ ಸ್ವೀಕೃತಿಯನ್ನು ಹೆಚ್ಚು ಮಾಡಿಕೊಳ್ಳದೆ ಹೋದರೆ ಈ ಕೊರತೆ ಸರಿದೂಗಿಸಲು ಮತ್ತೆ ಸಾಲ ಪಡೆಯಬೇಕಾಗುತ್ತದೆ. 2024-25ಕ್ಕೆ 45,109 ಕೋಟಿ ರೂ., 2025-26ಕ್ಕೆ 50,968 ಕೋಟಿ ರೂ.ರಾಜಸ್ವ ಕೊರತೆಯಾಗಲಿದೆ. ಯಾವ ರಾಜ್ಯ ಸತತವಾಗಿ ರಾಜಸ್ವ ಉಳಿಕೆಯಲ್ಲಿತ್ತು, ಇಂದು ಅದೇ ರಾಜ್ಯ ರಾಜಸ್ವ ಕೊರತೆ ಎದುರಿಸುತ್ತಿದೆ. ಇಂತಹ ಬಜೆಟ್ ಅನ್ನು ಅಭಿವೃದ್ಧಿ ಪೂರಕ, ಜನಪರ ಆಯವ್ಯಯವೆಂದು ಹೇಗೆ ಕರೆಯಬೇಕು?' ಎಂದು ಸಿದ್ದರಾಮಯ್ಯ ಕೇಳಿದರು.
ಕೇರಳ ಮಾದರಿ: ರಾಜ್ಯ ಸರಕಾರ ಕೋವಿಡ್ ನಿರ್ವಹಣೆಗೆ ಖರ್ಚು ಮಾಡಿರುವುದು ಒಟ್ಟು 8ಸಾವಿರ ಕೋಟಿ ರೂ.ಮಾತ್ರ. ಇದೇ ವೇಳೆ ನೆರೆಯ ಕೇರಳ ನಮಗಿಂತ ಚಿಕ್ಕ ರಾಜ್ಯ, ಅವರ ಬಜೆಟ್ ಗಾತ್ರವೂ ಚಿಕ್ಕದು. ಆದರೂ ಅವರು ಎರಡೂ ವರ್ಷದಲ್ಲಿ ಒಟ್ಟು 40 ಸಾವಿರ ಕೋಟಿ ರೂ.ಖರ್ಚು ಮಾಡಿದ್ದಾರೆ. ತಮಿಳುನಾಡು 30ಸಾವಿರ ಕೋಟಿ ರೂ.ವೆಚ್ಚ ಮಾಡಿದ್ದಾರೆ. ರಾಜ್ಯದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸುಮಾರು 11 ಕೋಟಿ ಉದ್ಯೋಗಿಗಳಿದ್ದರು, ಆ ಪೈಕಿ ಇಂದು ಶೇ.60ಕ್ಕೂ ಹೆಚ್ಚು ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ಲಾಕ್‍ಡೌನ್ ಸಮಯದಲ್ಲಿ ದುಡಿಯುವ ವರ್ಗದ ಜನರ ಕೈಗೆ ಹಣ ನೀಡಿ, ಬಡ ಕುಟುಂಬಗಳಿಗೆ, ಅಸಂಘಟಿತ ಕಾರ್ಮಿಕರಿಗೆ ತಲಾ 10ಸಾವಿರ ರೂ.ಪರಿಹಾರ ಕೊಡಿ ಎಂದು ಆಗ್ರಹಿಸಿದ್ದೆ. ಕೋವಿಡ್‍ನಿಂದ ಮೃತಪಟ್ಟವರಿಗೆ 5 ಲಕ್ಷ ರೂ.ಪರಿಹಾರವನ್ನು ನೀಡಲಿಲ್ಲ. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರಕಾರ ಘೋಷಿಸಿದ್ದ 1.50 ಲಕ್ಷ ರೂ.ಪರಿಹಾರವನ್ನೇ ಇನ್ನೂ ನೀಡಿಲ್ಲ' ಎಂದು ಸಿದ್ದರಾಮಯ್ಯ ಟೀಕಿಸಿದರು.
ರಾಜ್ಯದಿಂದ ಸಂಗ್ರಹವಾದ ತೆರಿಗೆಯಲ್ಲಿ ಕೇಂದ್ರ ಸರಕಾರದಿಂದ ನಮ್ಮ ರಾಜ್ಯಕ್ಕೆ ಬಂದಿರುವ ಪಾಲು 2020-21ಕ್ಕೆ 21,694 ಕೋಟಿ ರೂ., 2021-22ಕ್ಕೆ 24,273 ಕೋಟಿ ರೂ.ಬರುತ್ತದೆಂದು ಅಂದಾಜಿಸಲಾಗಿತ್ತು. ನಂತರದ ಪರಿಷ್ಕೃತ ಅಂದಾಜಿನಲ್ಲಿ 27,145 ಕೋಟಿ ರೂ.ಬರುತ್ತದೆ ಎಂದು ಹೇಳಿತ್ತು. ಮುಂದಿನ ವರ್ಷಕ್ಕೆ 29,783 ಕೋಟಿ ರೂ.ಬರಲಿದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಕೇಂದ್ರದಿಂದ ಬರುವ ಸಹಾಯಧನವೂ ಕಡಿಮೆಯಾಗುತ್ತಾ ಹೋಗುತ್ತಿದೆ' ಎಂದು ಸಿದ್ದರಾಮಯ್ಯ ಎಚ್ಚರಿಸಿದರು.
ಅನುದಾನ ಕಡಿತಕ್ಕೆ ಆಕ್ಷೇಪ: ‘ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯದ ಪಾಲು 2012-13ರಲ್ಲಿ ಶೇ.27ರಷ್ಟು ಮತ್ತು ಕೇಂದ್ರದ ಪಾಲು ಶೇ.73ರಷ್ಟಿತ್ತು. 2013-14ರಲ್ಲಿ ರಾಜ್ಯದ ಪಾಲು ಶೇ.25ರಷ್ಟು ಮತ್ತು ಕೇಂದ್ರದ ಪಾಲು ಶೇ.75ರಷ್ಟು ಇತ್ತು. 2014-15ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಪಾಲು ಶೇ.40ಕ್ಕೆ ಏರಿತು, ಕೇಂದ್ರದ ಪಾಲು ಶೇ.60ಕ್ಕೆ ಇಳಿಸಿತು. 2018-19ರಲ್ಲಿ ರಾಜ್ಯದ ಪಾಲು ಶೇ.57ಕ್ಕೆÉ ಹೆಚ್ಚಾಯಿತು, ಕೇಂದ್ರದ ಪಾಲು ಶೇ.43ಕ್ಕೆ ಇಳಿಯಿತು. ಕಳೆದ ಸಾಲಿನಲ್ಲಿ ರಾಜ್ಯದ ಪಾಲು ಶೇ.55, ಕೇಂದ್ರದ ಪಾಲು ಶೇ.45ರಷ್ಟಿತ್ತು. ಈ ಸಾಲಿನಲ್ಲಿ ರಾಜ್ಯದ ಪಾಲು ಶೇ.49.85, ಕೇಂದ್ರದ ಪಾಲು ಶೇ.50.15ಕ್ಕೆ ಇಳಿದಿದೆ. ನಮ್ಮ ಹಣ, ಆದರೆ, ಹೆಸರು ಮಾತ್ರ ಕೇಂದ್ರದ್ದು' ಎಂದು ಸಿದ್ದರಾಮಯ್ಯ ಟೀಕಿಸಿದರು.